ಹೊಸದಿಲ್ಲಿ: ಜಮ್ಮು ಕಾಶ್ಮೀರದಲ್ಲಿ ಕಳೆದ ಕೆಲವು ಸಮಯದಿಂದ ನಡೆಯುತ್ತಿರುವ ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಭೆ ನಡೆಸಿದ್ದಾರೆ. ಶಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಮ್ಮು ಕಾಶ್ಮೀರದ ಭದ್ರತಾ ಕಾರ್ಯಗಳ ಬಗ್ಗೆ ಚರ್ಚಿಸಲಾಗಿದೆ.
ಸಭೆಯಲ್ಲಿ, ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಶಾ ವಿಶಾಲವಾದ ಮಾರ್ಗಸೂಚಿಗಳನ್ನು ನೀಡಿದರು ಎಂದು ಮೂಲಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿವೆ.
ಮುಂದಿನ ದಿನಗಳಲ್ಲಿ ಭದ್ರತಾ ಪಡೆಗಳು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ತೀವ್ರಗೊಳಿಸುವ ನಿರೀಕ್ಷೆಯಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಯ ಕುರಿತು ಗೃಹ ಸಚಿವರಿಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ಮೋದಿಯವರ ನಿರ್ದೇಶನದಂತೆ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಲಾಗುವುದು ಎಂದು ಅವರು ಹೇಳಿದರು.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ನಿಯೋಜಿತ ಸೇನಾ ಮುಖ್ಯಸ್ಥಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಇಂಟೆಲಿಜೆನ್ಸ್ ಬ್ಯೂರೋದ ನಿರ್ದೇಶಕ ತಪನ್ ದೇಕಾ, ಸಿಆರ್‌ಪಿಎಫ್ ಮಹಾನಿರ್ದೇಶಕ ಅನೀಶ್ ದಯಾಳ್ ಸಿಂಗ್, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ಆರ್ ಆರ್ ಸ್ವೈನ್ ಮತ್ತು ಇತರ ಉನ್ನತ ಭದ್ರತಾ ಅಧಿಕಾರಿಗಳು ಉನ್ನತ ಮಟ್ಟದ ಸಭೆಯಲ್ಲಿ ಉಪಸ್ಥಿತರಿದ್ದರು.
ಜೂನ್ 29ರಿಂದ ಆರಂಭವಾಗಲಿರುವ ಅಮರನಾಥ ಯಾತ್ರೆಯ ಭದ್ರತಾ ಸಿದ್ದತೆಗಳ ಬಗ್ಗೆಯು ಅಮಿತ್ ಶಾ ಚರ್ಚೆ ನಡೆಸಿದರು.