Advertisement

ಅಮಿತ್‌ ಶಾ ಬಂದರಷ್ಟೇ ಬಿಕ್ಕಟ್ಟು  ಶಮನ: ಈಶ್ವರಪ್ಪ

03:45 AM Jan 18, 2017 | Team Udayavani |

ಬೆಂಗಳೂರು: ತಮ್ಮ ಹಾಗೂ ಯಡಿಯೂರಪ್ಪ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ
ಅಮಿತ್‌ ಶಾ ಅವರಿಂದ ಮಾತ್ರ ಸಾಧ್ಯ ಎಂದಿರುವ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ, ರಾಯಣ್ಣ ಬ್ರಿಗೇಡ್‌ಗೆ ಹೈಕಮಾಂಡ್‌ನ‌ ಬೆಂಬಲ ಇದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಜ.19 ರಂದು ನಡೆಯಲಿರುವ ಸಂಧಾನ ಸಭೆಗೆ ತಾವು ಹೋಗುವು ದಿಲ್ಲ ಎಂದು ತಿಳಿಸಿದ್ದಾರೆ.

Advertisement

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿ, ತಮ್ಮ ಹಾಗೂ ಯಡಿಯೂರಪ್ಪ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಲು ಅಮಿತ್‌ ಶಾ ಅವರಿಂದ ಮಾತ್ರಸಾಧ್ಯ. ಬೇರೆ ಯಾವ ಮುಖಂಡರಿಂದಲೂ ತಮ್ಮ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸುವುದು ಕಷ್ಟ. ಪಂಚರಾಜ್ಯಗಳ ಚುನಾವಣೆ ನಂತರ ಅಮಿತ್‌ ಶಾ ತಮ್ಮಿಬ್ಬರ ಜತೆ ಮಾತನಾಡಿ ಬಿಕ್ಕಟ್ಟು ಶಮನಗೊಳಿಸುವ ವಿಶ್ವಾಸವಿದೆ ಎಂದರು.

ಅಲ್ಲದೆ, ಯಡಿಯೂರಪ್ಪ ಅವರೊಂದಿಗಿನ ತಮ್ಮ ಭಿನ್ನಾಭಿಪ್ರಾಯ ಮೂರು ತಿಂಗಳೊಳಗೆ ಬಗೆಹರಿಯಲಿದೆ ಎಂದು ಆಶಾವಾದ ವ್ಯಕ್ತಪಡಿಸಿದರು. ಯಡಿಯೂರಪ್ಪ ಅವರ ಜತೆ ಭಿನ್ನಾಭಿಪ್ರಾಯ ಇರುವುದು ನಿಜ ಎಂದು ಪುನರುತ್ಛರಿಸಿದ ಈಶ್ವರಪ್ಪ, ವೈಮನಸ್ಯ ಬಗೆಹರಿಸಿಕೊಳ್ಳಲು ಯಡಿಯೂರಪ್ಪ ಅವರು ಸಂಧಾನ ಸಭೆ ಕರೆದರೆ ತಾವು ಮಾತುಕತೆಗೆ ಸಿದ್ಧ ಎಂದು ತಿಳಿಸಿದರು. ಅಮಿತ್‌ ಶಾ ಸಂಧಾನ ನಡೆಸುವ ತನಕ ರಾಯಣ್ಣ ಬ್ರಿಗೇಡ್‌ ಕಾರ್ಯ ಚಟುವಟಿಕೆ ಪೂರ್ವ ನಿಗದಿಯಂತೆ ನಡೆಯುತ್ತಲೇ ಇರುತ್ತದೆ.

ಜನವರಿ 26 ರಂದು ಕೂಡಲಸಂಗಮದಲ್ಲಿ ಬ್ರಿಗೇಡ್‌ ಸಮಾವೇಶ ನಡೆಸಲಾಗುತ್ತದೆ. ಸಮಾವೇಶದಲ್ಲಿ ಎರಡು ಲಕ್ಷ ಜನ ಸೇರುವ ನಿರೀಕ್ಷೆಯಿದೆ ಎಂದು ಸ್ಪಷ್ಟಪಡಿಸಿದರು. ರಾಯಣ್ಣ ಬ್ರಿಗೇಡ್‌ ಕಾರ್ಯಕ್ರಮಗಳನ್ನು ಸಂಘಟಿಸುತ್ತಿರುವುದಕ್ಕೆ ಬಿಜೆಪಿ ಹೈಕಮಾಂಡ್‌ ಬೆಂಬಲ ಇದೆ ಎಂದು ಇದೇ ಮೊದಲ ಬಾರಿಗೆ ಈಶ್ವರಪ್ಪ ನೇರವಾಗಿ ಒಪ್ಪಿಕೊಂಡರು. ಒಂದೊಮ್ಮೆ ಹೈಕಮಾಂಡ್‌ ಬೆಂಬಲ ಇಲ್ಲದಿದ್ದರೆ ಬಿಜೆಪಿಯಂತಹ ಶಿಸ್ತಿನ ಪಕ್ಷದಲ್ಲಿ ತಾವು ಬ್ರಿಗೇಡ್‌ ಕಾರ್ಯಕ್ರಮ ಸಂಘಟಿಸಲು ಸಾಧ್ಯವಿತ್ತೇ ಎಂದು ಪ್ರಶ್ನಿಸಿದರು.

ಬ್ರಿಗೇಡ್‌ ಸಂಘಟನೆಗೆ ಯಡಿಯೂರಪ್ಪನವರ ವಿರೋಧವಿದೆ. ಆದರೆ, ಹೈಕಮಾಂಡ್‌ ಇದಕ್ಕೆ ವಿರೋಧವನ್ನು ವ್ಯಕ್ತಪಡಿಸಿಲ್ಲ. ರಾಯಣ್ಣ ಬ್ರಿಗೇಡ್‌ ಸಂಘಟನೆಯಿಂದ ಬಿಜೆಪಿಗೆ ಹಿಂದುಳಿದ ವರ್ಗಗಳ ಹೆಚ್ಚಿನ ಬೆಂಬಲ ಸಿಗುತ್ತದೆ ಎನ್ನುವುದನ್ನು ತಾವು ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟಿದ್ದಾಗಿ ಅವರು ತಿಳಿಸಿದರು.

Advertisement

ಬ್ರಿಗೇಡ್‌ ಸಂಘಟನೆಯಿಂದ ಪಕ್ಷಕ್ಕೆ ಅನುಕೂಲವಾಗಲಿದೆ ಎನ್ನುವ ದೂರದೃಷ್ಟಿಯಿಂದಲೇ ಬಿಜೆಪಿ ಹೈಕಮಾಂಡ್‌ ಸಹ ರಾಯಣ್ಣ ಬ್ರಿಗೇಡ್‌ ಸಂಘಟನೆಯಲ್ಲಿ ತಾವು ಸಕ್ರಿಯರಾಗಿರುವುದನ್ನು ನಿರ್ಬಂಧಿಸಲು ಮುಂದಾಗಿಲ್ಲ ಎಂದು ಹೇಳಿದರು.
“ನನ್ನ ಮತ್ತು ಯಡಿಯೂರಪ್ಪ ನಡುವಿನ ಭಿನ್ನಾಭಿಪ್ರಾಯದಿಂದ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿರುವುದು ನಿಜ. ಸ್ವಲ್ಪ ದಿನಗಳ ಮಟ್ಟಿಗೆ ಪಕ್ಷದ ಸಂಘಟನೆಯ ಹಿತದೃಷ್ಟಿಯಿಂದ ಇದನ್ನು ಸಹಿಸಿಕೊಳ್ಳುವ ಅಗತ್ಯವಿದೆ. ನಮ್ಮಿಬ್ಬರ ಜಗಳ ಗಂಡ-ಹೆಂಡತಿ ಜಗಳ ಇದ್ದಂತೆ. ಇವತ್ತು ಜಗಳ ಆಡಿದವರು ನಾಳೆ ಒಂದಾಗುತ್ತೇವೆ.

ಅದರಲ್ಲಿ ಯಾವುದೇ ಅನುಮಾನ ಬೇಡ’ ಎಂದು ಪ್ರತಿಪಕ್ಷಗಳಿಗೂ ಸೂಕ್ಷ್ಮ ಸಂದೇಶ ರವಾನಿಸಿದರು. “ಈ ತಿಂಗಳ 19 ರಂದು ನಡೆಯಲಿರುವ ಸಂಧಾನ ಸಭೆಗೆ ಯಡಿಯೂರಪ್ಪ ಅವರು ನನ್ನನ್ನು ಆಹ್ವಾನಿಸಿಲ್ಲ. ಆ ಸಭೆಗೆ ನಾನು ಹೋಗುವುದೂ ಇಲ್ಲ. ಯಡಿಯೂರಪ್ಪ ಅವರು ಪಕ್ಷದಲ್ಲಿ ಅಸಮಾಧಾನಗೊಂಡ 24 ಮುಖಂಡರ ಸಭೆ ಮಾತ್ರ ಕರೆದಿದ್ದಾರೆ. ನನ್ನ ಮತ್ತು ಯಡಿಯೂರಪ್ಪ ಅವರ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಲು ಕರೆದಿರುವ ಸಭೆ ಅದಲ್ಲ. ಅಂದಿನ ಸಭೆಯಲ್ಲಿ ಯಡಿಯೂರಪ್ಪ ಅವರ ವರ್ತನೆ ಬಗ್ಗೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿರುವವರು ಮಾತ್ರ ಭಾಗವಹಿಸಲಿದ್ದಾರೆ’ಎಂದರು.

Advertisement

Udayavani is now on Telegram. Click here to join our channel and stay updated with the latest news.

Next