ಧಾರವಾಡ: ಅಮ್ಮಿನಬಾವಿಯಲ್ಲಿ 27 ವರ್ಷಗಳ ಬಳಿಕ ನಡೆದ ದ್ಯಾಮವ್ವತಾಯಿ ಹಾಗೂ ದುರ್ಗಾಮಾತೆಯ 11 ದಿನದ ಜಾತ್ರಾ ಮಹೋತ್ಸವಕ್ಕೆ ಅಂತಿಮ ದಿನವಾದ ರವಿವಾರ ರಾತ್ರಿ ಗ್ರಾಮದೇವತೆಯರ ಸಾನ್ನಿಧ್ಯದಲ್ಲಿ ತೆರೆ ಎಳೆಯಲಾಯಿತು. ಶ್ರೇಯಾಂಶ ದೇಸಾಯಿ, ಅಪ್ಪಣ್ಣ ದೇಶಪಾಂಡೆ ಹಾಗೂ ಗ್ರಾಮದ ದೈವದವರು 25 ವರ್ಷಗಳ ನಂತರ ಅಂದರೆ 2043ರಲ್ಲಿ ಮುಂದಿನ ಗ್ರಾಮದೇವತಾ ಜಾತ್ರೆ ನೆರವೇರಿಸುವುದಾಗಿ ಸಂಕಲ್ಪ ಮಾಡಿದರು. ನಂತರ ಗ್ರಾಮದೇವತೆಯರ ಸೀಮೆಗೆ ಹೋಗುವ ಶಾಸ್ತ್ರದೊಂದಿಗೆ ಜಾತ್ರಾ ಮಹೋತ್ಸವದ ಪಾರಂಪರಿಕ ವಿಧಿ ವಿಧಾನಗಳು ಸಂಪನ್ನಗೊಂಡವು.
ಪಾದಗಟ್ಟಿಯಲ್ಲಿ ಸಂಗ್ರಹವಾಗಿದ್ದ ಜೋಳದ ರಾಶಿಯನ್ನು ಅಮ್ಮಿನಬಾವಿ, ಮರೇವಾಡ, ತಿಮ್ಮಾಪುರ, ಕವಲಗೇರಿ ಗ್ರಾಮದ ಪತ್ತಾರ, ಕಂಬಾರ, ಕುಂಬಾರ, ವಾಲಿಕಾರ, ಕಟ್ಟಿಮನಿ, ದೇಶಪಾಂಡೆ, ದೇಸಾಯಿ ಸೇರಿದಂತೆ ಹಲವಾರು ಮನೆತನದವರಿಗೆ ವಿತರಿಸಲಾಯಿತು. ದೇವಿಯರ ಸೀಮೆಗೆ ಕಳುಹಿಸುವ ಕಾರ್ಯಕ್ರಮ ನೋಡಲು ಆಗಮಿಸಿದ್ದ ಸಹಸ್ರಾರು ಭಕ್ತರು ಅಂತಿಮವಾಗಿ ದೇವಿ ದರ್ಶನ ಪಡೆದರು. ದೇವಿಯನ್ನು ಸೀಮೆಗೆ ಕಳುಹಿಸುವ ಉತ್ತರ ಪೂಜೆ ಆರಂಭವಾಗುತ್ತಿದ್ದಂತೆ ಮಕ್ಕಳು, ಮದುವೆ ಆಗದವರೆಲ್ಲರನ್ನೂ ಮನೆಗಳಿಗೆ ಕಳುಹಿಸಲಾಯಿತು.
ಪೂಜೆ ಬಳಿಕ ರಾತ್ರಿ ವೇಳೆ ದೇವಿಯನ್ನು ಹೊತ್ತು ಗ್ರಾಮದಿಂದ 5 ಕಿಮೀ ದೂರದ ಸೀಮೆಯಲ್ಲಿರುವ ಬಂಡೆಮ್ಮ ಜಾಗದಲ್ಲಿ ಇರಿಸಿ ಅಲ್ಲಿ ರಾಣಗ್ಯಾನಿಂದ ಹಲವಾರು ಧಾರ್ಮಿಕ ಆಚರಣೆಗಳು ನಡೆದ ಬಳಿಕ, ದೇವಿಯ ಮೂರ್ತಿಗಳನ್ನು ಬಿಚ್ಚಿ ಹೊಸ ಬಿದಿರಿನ ಜೆಲ್ಲಿಗಳಲ್ಲಿ ಇಟ್ಟುಕೊಂಡು ಮಧ್ಯರಾತ್ರಿ ಪುನಃ ಗ್ರಾಮದೇವಿ ದೇವಾಲಯದ ಗರ್ಭಗೃಹದೊಳಗೆ ಯಾರಿಗೂ ಕಾಣದಂತೆ ತಂದು ಇಟ್ಟು ಬಾಗಿಲು ಹಾಕಿದರು.
ದೇವಿ ಬರುವಾಗ ಎದುರಿಗೆ ಯಾರೂ ಬರದಂತೆ ಗ್ರಾಮದ ಜನರಿಗೆ ಬಹಳ ಮುಂಚಿತವಾಗಿಯೇ ಸೂಚನೆಗಳನ್ನು ನೀಡಲಾಗುತ್ತದೆ. ದೇವಿಯನ್ನು ದೇವಾಲಯದಲ್ಲಿ ತಂದು ಇಟ್ಟು ದೇವಾಲಯಕ್ಕೆ ಬೀಗ ಹಾಕಲಾಗುತ್ತದೆ. ಜು. 11ರಂದು ಗರ್ಭಗೃಹದ ಬಾಗಿಲು ತೆರೆದು ಶಾಸ್ತ್ರೋಕ್ತವಾಗಿ ಉಭಯ ಗ್ರಾಮ ದೇವತೆಯರನ್ನು ನಿರ್ದಿಷ್ಟ ಪೀಠಗಳ ಮೇಲೆ ಕೂರಿಸಿ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಉಭಯ ಶ್ರೀಗಳ ಸಾನ್ನಿಧ್ಯದಲ್ಲಿ ಪುನರ್ ಪ್ರಾಣಪ್ರತಿಷ್ಠಾಪನೆ ಮಾಡುವರು. ಜು. 11ರಂದು ಮತ್ತೆ ಇಡೀ ಗ್ರಾಮದಲ್ಲಿರುವ ಪ್ರತಿಯೊಂದು ಕುಟುಂಬದವರು ಉಭಯ ದೇವಿಯರಿಗೆ ಉಡಿ ತುಂಬಿ ಭಕ್ತಿ ನಮನ ಸಲ್ಲಿಸಲಿದ್ದಾರೆ.