ವಾಡಿ: ಶಿಥಿಲ ಕಟ್ಟಡ, ಇಕ್ಕಟ್ಟಿನ ಸ್ಥಳದಲ್ಲಿ ಮುರಿದ ಬೆಂಚ್‌ಗಳ ರಾಶಿ ಮಧ್ಯೆ ನೂರಾರು ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಪ್ರಸಂಗ ನಡೆಯಿತು. ಪಟ್ಟಣ ವ್ಯಾಪ್ತಿಯ ರಾವೂರ ಸರಕಾರಿ ಪ್ರೌಢಶಾಲಾ ಕಟ್ಟಡದಲ್ಲಿ ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿತ್ತು.
ವಾಡಿ ನಗರದ ಸೆಂಟ್ ಅಂಬ್ರೂಸ್ ಕಾನ್ವೆಂಟ್ ಶಾಲೆಯಲ್ಲಿ ಎರಡು ಪರೀಕ್ಷಾ ಕೇಂದ್ರಗಳು ಕಾರ್ಯ ನಿರ್ವಹಿಸಿದವು. ವಾಡಿಯಲ್ಲಿ ಸಿಸಿ ಕ್ಯಾಮರಾಗಳ ನಿಗರಾಣಿ ಮಧ್ಯೆ ಮೊದಲ ದಿನ 589 ವಿದ್ಯಾರ್ಥಿಗಳು ಹಾಗೂ ಕ್ಯಾಮರಾಗಳ ಸಹವಾಸ ಬೇಡವೆಂದು ರಾವೂರಿನ ಪರೀಕ್ಷಾ ಕೇಂದ್ರದಲ್ಲಿ 262 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದರು.
ವಾಡಿ, ರಾವೂರ ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 43 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದರು. ಅವ್ಯವಸ್ಥೆ ಹಾಗೂ ಅಸುರಕ್ಷತೆಯಿಂದ ಕೂಡಿದ್ದ ರಾವೂರಿನ ಪರೀಕ್ಷಾ ಕೇಂದ್ರ ಮಕ್ಕಳ ಮಾನಸಿಕ ಸ್ಥಿತಿ ಹದಗೆಡಿಸಿದರೆ, ನಕಲು ಹಾವಳಿ ಪೊಲೀಸರ ನಿದ್ದೆಗೆಡಿಸಿತು. ಶೈಕ್ಷಣಿಕ ಭವಿಷ್ಯ ನಿರ್ಧರಿಸುವ ಮಹತ್ವದ ಈ ಪರೀಕ್ಷೆ ಹತ್ತಾರು ಸಮಸ್ಯೆಗಳ ನಡುವೆ ಆರಂಭಗೊಂಡಿತು.
ಕಳೆದ ವರ್ಷದಂತೆ ಈ ವರ್ಷವೂ ಅಗತ್ಯ ಕೋಣೆಗಳ ಸಮಸ್ಯೆಯಿಂದ ಕೇಂದ್ರ ಬಳಲಿತು. ನಾಲ್ಕು ಕೊಠಡಿಗಳು ಒಂದೆಡೆಯಾದರೆ, ಏಳು ಕೊಠಡಿಗಳನ್ನು ಮತ್ತೂಂದು ಶಾಲೆಯಲ್ಲಿ ಪಡೆಯಲಾಗಿತ್ತು. ಕಾಂಪೌಂಡ್ ಭದ್ರತೆಯಿಲ್ಲದ ಕಾರಣ ಚೀಟಿ ಹಾಕುವ ಹುಡುಗರ ಹಾವಳಿ ಹೆಚ್ಚಿತ್ತು.
ಬೆರಳೆಣಿಕೆಯಷ್ಟಿದ್ದ ಪೊಲೀಸರು ಯಾವ ಕೊಠಡಿಗೆ ರಕ್ಷಣೆ ಕೊಡಬೇಕು ಎಂಬುದು ಅರ್ಥವಾಗದೆ, ಬೆತ್ತ ಹಿಡಿದು ಕೇಂದ್ರದ ಸುತ್ತಲೂ ಓಡಾಡಿ ಹರಸಾಹಸಪಟ್ಟರು. ಪಿಎಸ್‌ಐ ಸಂತೋಷಕುಮಾರ ರಥೋಡ ವಾಡಿ, ರಾವೂರ ಮತ್ತು ನಾಲವಾರ ಪರೀಕ್ಷಾ ಕೇಂದ್ರಗಳಿಗೆ ಬಿಗಿ ಭದ್ರತೆ ಒದಗಿಸಿ ಪರೀಕ್ಷೆ ಸುಸೂತ್ರಗೊಳಿಸಿದರು.
ಸ್ವತಂತ್ರವಾಗಿ ಕುಳಿತುಕೊಳ್ಳಲು ಸ್ಥಳಾವಕಾಶವಿಲ್ಲದೆ ಪರೀಕ್ಷಾರ್ಥಿಗಳು ಕಿರಿಕಿರಿ ಅನುಭವಿಸಿದರು. ಗಾಳಿ ಬೆಳಕಿನ ಕೊರತೆ ಎದುರಿಸಿ, ಕಸ ಧೂಳಿನಿಂದ ತುಂಬಿದ್ದ ಕೊಣೆಯಲ್ಲಿ ಬಿಸಿಲ ಝಳದಿ ಹಣೆಯಿಂದ ಬೆವರು ಸುರಿಸುತ್ತಲೇ ಪ್ರಶ್ನೆಗಳಿಗೆ ಉತ್ತರ ಬರೆದು ಶಿಕ್ಷಣ ಇಲಾಖೆ ವಿರುದ್ಧ ತೀವ್ರ ಬೇಸರ ವ್ಯಕ್ತಪಡಿಸಿದರು.