ನವದೆಹಲಿ: ದೇಶದ ಹಲವೆಡೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ಮುಂದುವರಿದಿದ್ದು, ಏತನ್ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ನೂತನ ಸಿಎಎ ಕಾಯ್ದೆಯನ್ನು ಬೆಂಬಲಿಸುವ ಸಾಮಾಜಿಕ ಜಾಲತಾಣದ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ಪ್ರಧಾನಿ ಮೋದಿ ಇಂದು ಟ್ವೀಟರ್ ನಲ್ಲಿ #IndiaSupportsCAA ಹ್ಯಾಶ್ ಟ್ಯಾಗ್ ಬಳಸಿ ಅಭಿಯಾನಕ್ಕೆ ಚಾಲನೆ ನೀಡಿ, ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸುವಂತೆ ಕರೆ ನೀಡಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಕಿರುಕುಳಕ್ಕೊಳಗಾದ ನಿರಾಶ್ರಿತರಿಗೆ ಪೌರತ್ವ ನೀಡುವುದಾಗಿದೆ. ಆದರೆ ದೇಶದ ಯಾವುದೇ ಪ್ರಜೆಯ ಪೌರತ್ವವನ್ನು ಕಿತ್ತುಕೊಳ್ಳುವುದಿಲ್ಲ. ಈ ಹಿನ್ನೆಲೆಯಲ್ಲಿ ಹ್ಯಾಶ್ ಟ್ಯಾಗ್ ಬಳಸಿ #IndiaSupportsCAAಗೆ ಬೆಂಬಲ ನೀಡಿ. ನಮೋ ಆ್ಯಪ್ ನಲ್ಲಿ ಈ ಹ್ಯಾಶ್ ಟ್ಯಾಗ್ ಅನ್ನು ನಿಮ್ಮ ಸ್ವಯಂ ಮಾದರಿಯ ವಾಯ್ಸ್ ಸೆಕ್ಷನ್ ನಲ್ಲಿ ಕಂಟೆಂಟ್, ಗ್ರಾಫಿಕ್ಸ್, ವೀಡಿಯೋ ಅನ್ನು ಶೇರ್ ಮಾಡಿ ಮತ್ತು ಸಿಎಎಗೆ ನಿಮ್ಮ ಬೆಂಬಲ ನೀಡಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಎಲ್ಲಾ ಆಯಾಮಗಳಲ್ಲಿಯೂ ಖ್ಯಾತ ಧಾರ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ ಅವರು ವಿವರಣೆ ನೀಡಿರುವ ವೀಡಿಯೋವನ್ನು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಅಲ್ಲದೇ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ತಪ್ಪು ಮಾಹಿತಿ ಹರಡಲು ಯತ್ನಿಸುತ್ತಿರುವವರ ಆರೋಪವನ್ನು ಬಹಿರಂಗಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.