ಮುಂಬೈ:ಮಹಾಮಾರಿ ಕೋವಿಡ್ 19 ವೈರಸ್ ಹರಡುವುದು ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಡೌನ್, ಜನ ಸಂಚಾರ ವಿರಳ, ಬಸ್, ರೈಲು, ವಿಮಾನ ಸಂಚಾರ ರದ್ದುಗೊಂಡಿದ್ದರೆ ಮತ್ತೊಂದೆಡೆ ಪ್ರಾಣಿ, ಪಕ್ಷಿಗಳು ಸ್ವಚ್ಛಂದವಾಗಿ ವಿಹರಿಸತೊಡಗಿವೆ. ನವಿ ಮುಂಬೈನ ಸರೋವರ ಈಗ ಸಾವಿರಾರು ನಸುಗೆಂಪು ಬಣ್ಣದ ಫ್ಲೆಮಿಂಗೋಗಳು ವಲಸೆ ಬಂದಿದ್ದು, ಪಕ್ಷಿ ಪ್ರಿಯರ ಕಣ್ಮನಸೆಳೆಯತೊಡಗಿದೆ.
ಪ್ರತಿವರ್ಷ ನವಿಮುಂಬೈಯ ಸರೋವರಕ್ಕೆ ಅಪಾರ ಸಂಖ್ಯೆಯಲ್ಲಿ ನಸುಗೆಂಪು ಬಣ್ಣದ ಫ್ಲೆಮಿಂಗೋಗಳು ವಲಸೆ ಬರುವುದು ವಾಡಿಕೆ. ಈ ವರ್ಷ ಲಾಕ್ ಡೌನ್ ಆರಂಭವಾದ ನಂತರ ಭಾರೀ ಸಂಖ್ಯೆಯಲ್ಲಿ ಪ್ಲೆಮಿಂಗೋಗಳು ಇಡೀ ಪರಿಸರವನ್ನು ಸುಂದರಗೊಳಿಸಿವೆ ಎಂದು ಪ್ರಫುಲ್ ಪಟೇಲ್ ಟ್ವೀಟ್ ಮಾಡಿದ್ದಾರೆ.
ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಮಾಹಿತಿ ಪ್ರಕಾರ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.25ರಷ್ಟು ಹೆಚ್ಚು ಫ್ಲೆಮಿಂಗೋಗಳು ವಲಸೆ ಬಂದಿವೆ. ಕಳೆದ ಬಾರಿ 1.2ಲಕ್ಷದಷ್ಟು ಹಕ್ಕಿಗಳು ವಲಸೆ ಬಂದಿದ್ದು, ಈ ವರ್ಷ ಏಪ್ರಿಲ್ ಮೊದಲ ವಾರದಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಫ್ಲೆಮಿಂಗೋಗಳು ವಲಸೆ ಬಂದಿವೆ ಎಂದು ತಿಳಿಸಿದೆ.
ಬಾಲಿವುಡ್ ನ ರವೀನಾ ಟಂಡನ್, ದಿಯಾ ಮಿರ್ಜಾ ಮತ್ತು ಟ್ವಿಂಕಲ್ ಖನ್ನಾ ಈ ಸುಂದರ ಫೋಟೋವನ್ನು ಟ್ವೀಟ್ ಮಾಡುವ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಈ ಫ್ಲೆಮಿಂಗೋಗಳು ಗುಜರಾತ್ ನ ಕಛ್ ನ ರಣ್ ಹಾಗೂ ರಾಜಸ್ಥಾನದ ಸಾಂಬಾರ್ ಲೇಕ್, ಇನ್ನು ಪಾಕಿಸ್ತಾನ, ಅಫ್ಘಾನಿಸ್ತಾನ, ಇರಾನ್ ಮತ್ತು ಇಸ್ರೇಲ್ ಗಳಿಂದ ವಲಸೆ ಬರುತ್ತವೆ ಎಂದು ವರದಿ ವಿವರಿಸಿದೆ.