ಬೆಂಗಳೂರು: ಮೀಸಾ ಅವಧಿ ಮುಕ್ತಾಯಗೊಂಡಿದ್ದರೂ ಭಾರತದಲ್ಲಿ ಅಕ್ರಮವಾಗಿ ನೆಲೆಸಿ ಅಮೆರಿಕಾದ ನಕಲಿ ಡಾಲರ್ ನೋಟು ದಂಧೆ ನಡೆಸುತ್ತಿದ್ದ ಕ್ಯಾಮರೂನ್ ದೇಶದ ಇಬ್ಬರು ಪ್ರಜೆಗಳು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಕ್ಯಾಮರೂನ್ ದೇಶದ ಬಿಯಾಕ್ ಸ್ಯಾಮ್ಯುಲ್ ರೌಲಾ(43) ಮತ್ತು ಪೀರೇ ಕರ್ನಾಲಿ ಮಬ್ರಾಗ್(50) ಬಂಧಿತರು. ಅವರಿಂದ 80 ಲಕ್ಷ ರೂ. ಮೌಲ್ಯದ ಅಮೆರಿಕನ್ 100 ಡಾಲರ್ ಮುಖಬೆಲೆಯ 100 ನೋಟುಗಳಿರುವ 9 ಬಂಟಲ್ ನಕಲಿ ಕರೆನ್ಸಿ, ಐದು ಮೊಬೈಲ್‌ಗಳು ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿಗಳು ಸುಬ್ರಹ್ಮಣ್ಯನಗರ ಠಾಣಾ ವ್ಯಾಪ್ತಿಯ ಶೆರ್ಲಟನ್ ಹೋಟೆಲ್‌ನ ಕೊಠಡಿಯೊಂದರಲ್ಲಿ ವಾಸವಾಗಿದ್ದರು. ಈ ಖಚಿತ ಮಾಹಿತಿ ಮೇರೆಗೆ ಆರೋಪಿಗಳ ಮೇಲೆ ದಾಳಿ ನಡೆಸಿದಾಗ ಆರೋಪಿಗಳ ಪಾಸ್‌ಪೋರ್ಟ್ ವೀಸಾ ಅವಧಿ ಮುಕ್ತಾಯಗೊಂಡಿರುವುದು ಬೆಳಕಿಗೆ ಬಂದಿದೆ. ಬಳಿಕ ಕೊಠಡಿ ಪರಿಶೀಲಿಸಿದಾಗ ಅಕ್ರಮವಾಗಿ ಅಮೆರಿಕದ ನಕಲಿ ಡಾಲರ್‌ಗಳನ್ನು ಇಟ್ಟುಕೊಂಡು ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.
10 ಲಕ್ಷಕ್ಕೆ ಒಂದು ಕೋಟಿ ಡಾಲರ್!:
ಆರೋಪಿಗಳು ನಗರದ ಕೆಲ ವ್ಯಕ್ತಿಗಳನ್ನು ಸಂಪರ್ಕಿಸಿ 10 ಲಕ್ಷ ಕೊಟ್ಟರೆ ಒಂದು ಕೋಟಿ ರೂ. ಮೌಲ್ಯದ ಅಮೆರಿಕನ್ ಡಾಲರ್ ಕೊಡುವುದಾಗಿ ನಂಬಿಸಿದ್ದರು. ಈಗಾಗಲೇ ಈ ರೀತಿ ಅನೇಕರನ್ನು ಸಂಪರ್ಕಿಸಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಆರೋಪಿಗಳ ಪೈಕಿ ಬಿಯಾಕ್ ಸ್ಯಾಮ್ಯುಲ್ ರೌಲಾ ಮೆಡಿಕಲ್ ವೀಸಾ ಪಡೆದು ಫೆಬ್ರವರಿಯಲ್ಲಿ ಬೆಂಗಳೂರಿಗೆ ಬಂದಿದ್ದಾನೆ. ಮೇ ನಲ್ಲಿಯೇ ವೀಸಾ ಅವಧಿ ಮುಕ್ತಾಯಗೊಂಡಿದೆ. ಇನ್ನು ಪೀರೇ ಕರ್ನಾಲಿ ಮಬ್ರಾಗ್ ಬಳಿ ವೀಸಾ ಮತ್ತು ಪಾಸ್‌ಪೋರ್ಟ್ ಇಲ್ಲ ಎಂಬುದು ಪತ್ತೆಯಾಗಿದೆ. ಈ ರೀತಿಯ ನಕಲಿ ನೋಟು ದಂಧೆ ಮೂಲಕ ಬೇರೆ ಅಕ್ರಮ ಚಟುವಟಿಕೆ ನಡೆಸಲು ಮುಂದಾಗಿದ್ದರು ಎಂಬ ಅನುಮಾನವಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.