ವಾಷಿಂಗ್ಟನ್: ಕೆಂಪು ಸಮುದ್ರದಲ್ಲಿ ಸರಕು ಸಾಗಣೆ ಹಡಗುಗಳ ಮೇಲೆ ದಾಳಿ ಮಾಡುತ್ತಿದ್ದ ಹೌಥಿ ಬಂಡುಕೋರರ ಮೇಲೆ; ಅಮೆರಿಕ ಮತ್ತು ಇಂಗ್ಲೆಂಡ್ ಸೇನೆಗಳು ಮುಗಿಬಿದ್ದಿವೆ.
ಯೆಮೆನ್‌ನಾದ್ಯಂತ 13 ಸ್ಥಳಗಳಲ್ಲಿನ 36 ಹೌಥಿ ನೆಲೆಗಳ ಮೇಲೆ ಜಂಟಿ ದಾಳಿ ನಡೆಸಲಾಗಿದೆ. ಹಮಾಸ್ ಉಗ್ರರ ಮೇಲೆ ಇಸ್ರೇಲ್ ಮಾಡುತ್ತಿರುವ ದಾಳಿಯಿಂದ ಸಿಟ್ಟಾಗಿ; ಇರಾನ್ ಬೆಂಬಲಿತ ಹೌಥಿ ಬಂಡುಕೋರರು, ಕೆಂಪುಸಮುದ್ರದಲ್ಲಿ ಹಠಾತ್ ದಾಳಿ ನಡೆಸುತ್ತಿದ್ದಾರೆ. ಅಲ್ಲಿ ಸಂಚರಿಸುತ್ತಿರುವ ಇಸ್ರೇಲ್, ಅಮೆರಿಕದ ಹಡಗುಗಳೇ ಅವರ ದಾಳಿಯ ಗುರಿಗಳಾಗಿವೆ.
ಇಂತಹ ದಾಳಿಗಳನ್ನು ಪೂರ್ಣವಾಗಿ ತಡೆಯಲು, ಹೌಥಿಗಳನ್ನು ಹಿಮ್ಮೆಟ್ಟಿಸಲು ಅಮೆರಿಕ-ಇಂಗ್ಲೆಂಡ್ ಸೇನೆ ಈ ಪ್ರತಿದಾಳಿ ನಡೆಸಿವೆ. ಇತ್ತೀಚೆಗೆ ಜೋರ್ಡಾನ್‌ನಲ್ಲಿರುವ ಅಮೆರಿಕದ ಸೇನಾನೆಲೆಯ ಮೇಲೆ, ಹಿಂಸಾತ್ಮಕ ದಾಳಿ ನಡೆಸಿದ್ದ ಉಗ್ರರು, ಮೂವರು ಯೋಧರನ್ನು ಕೊಂದಿದ್ದರು. ಅದಕ್ಕೆ ನೀಡಿದ ಬಲವಾದ ಉತ್ತರ ಇದಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕದ ರಕ್ಷಣಾ ಸಚಿವ ಲಾಯ್ಡ ಆಸ್ಟಿನ್, ನಾವು ಹೌಥಿಗಳನ್ನು ಸುಮ್ಮನೆ ಬಿಡುವುದಿಲ್ಲ ಎಂಬ ಸಂದೇಶವನ್ನು ಈ ದಾಳಿಗಳ ಮೂಲಕ ನೀಡಿದ್ದೇವೆ ಎಂದಿದ್ದಾರೆ.
ಗುರಿಯೇನು?: ಅಮೆರಿಕ-ಇಂಗ್ಲೆಂಡ್ ಸೇನೆಗಳು ಹೌಥಿಯ ಗುಪ್ತ ನೆಲೆಗಳನ್ನು ಕೇಂದ್ರೀಕರಿಸಿದ್ದವು. ಯುದ್ಧವಿಮಾನಗಳು, ಯುದ್ಧ ಹಡಗುಗಳನ್ನು ದಾಳಿಗೆ ಬಳಸಿಕೊಳ್ಳಲಾಗಿತ್ತು. ಹೌಥಿಯ ಗುಪ್ತ ಶಸ್ತ್ರ ಸಂಗ್ರಹಗಳು, ಕ್ಷಿಪಣಿ ವ್ಯವಸ್ಥೆಗಳು, ವೈಮಾನಿಕ ರಕ್ಷಣಾ ವ್ಯವಸ್ಥೆ, ರಾಡಾರ್‌ಗಳನ್ನು ನಾಶ ಮಾಡಲಾಗಿದೆ.