Advertisement
ಗುರುವಾರ ಚಿತ್ರರಂಗದ ವತಿಯಿಂದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರಿಗೆ ಆಯೋಜಿಸಿದ ಸನ್ಮಾನ ಕಾರ್ಯಕ್ರಮದಲ್ಲೂ ಅಂಬರೀಶ್ ಅವರ ಖದರು, ಮ್ಯಾನರೀಸಂ ಎಲ್ಲರ ಗಮನ ಸೆಳೆಯಿತು. ಕಾರ್ಯಕ್ರಮ ತಡವಾದರೂ ವೇದಿಕೆಯಲ್ಲಿ ಅಂಬಿ ಅವರ ಸ್ಟೈಲ್ ನೋಡಿದವರು ಕಿರುನಗೆಯೊಂದಿಗೆ ಅದನ್ನು ಆಸ್ವಾಧಿಸಿದ್ದು ಸುಳ್ಳಲ್ಲ. ಸನ್ಮಾನ ಕಾರ್ಯಕ್ರಮದಲ್ಲಿನ ಅಂಬಿ ಸ್ಟೈಲ್‌ನ ಝಲಕ್ ಇಲ್ಲಿದೆ …
Related Articles
Advertisement
ನಾ ಮುಂದು ತಾ ಮುಂದು ಎಂದು ಸಿಎಂಗೆ ಶುಭಕೋರಿ ಫೋಟೋಗೆ ಫೋಸ್ ಕೊಡಲು ನುಗ್ಗುತ್ತಲೇ ಇದ್ದಾರೆ. ಇದರಿಂದ ಸಿಟ್ಟಾದ ಅಂಬರೀಶ್ ಮೈ ಎತ್ತಿಕೊಂಡು, “ಏಯ್ ಹೋಗ್ರೋ ಸಾಕು, ಎಲ್ಲಾ ಹೋಗ್ರೋ, ಹೇ ನೀನ್ಯಾಕೆ ನುಗ್ತಿಯಾ, ಬಾ ಕೆಳಗಡೆ … ಏಯ್ ಕಳಿಸ್ರೋ ಅವನ್ನ ಆಚೆಗೆ … ಚಿನ್ನೇಗೌಡ್ರೆ ಬನ್ನಿ ನೀವು ಓಟಿಗೆ ನಿಂತಿದ್ದೀರೆಂದು ಗೊತ್ತು …’ ಎಂದು ನಗುತ್ತಲೇ ಗದರುತ್ತಾ ವೇದಿಕೆಯಲ್ಲಿದ್ದ ಅಷ್ಟೂ ಮಂದಿಯನ್ನೂ ಕೆಳಗಿಳಿಸಿದರು.
ಅಂಬಿ ಸ್ಟೈಲ್ ನೋಡಿ, ಸಿಎಂ ಕುಮಾರಸ್ವಾಮಿ ನಗುತ್ತಿದ್ದರು. ಇಷ್ಟಕ್ಕೆ ಅಂಬಿ ಸಿಟ್ಟು ನಿಲ್ಲಲಿಲ್ಲ. ತಾನು ಭಾಷಣ ಮಾಡಲಾರಂಭಿಸಿದಾಗ ಪಕ್ಕದ ಹಾಲ್‌ನಿಂದ ಮೈಕ್ ಸೌಂಡ್ ಜೋರಾಗಿ ಕೇಳಿಬರುತ್ತಿತ್ತು. ಆಗ “ಯಾವನೋ ಅವ್ನು ಡೋರ್ ಕ್ಲೋಸ್ ಮಾಡಲೇ … ಹೇ ನೀನ್ಯಾಕೆ ಮೇಲೆ ಬಂದೆ, ಹೋಗ್’ ಎಂದು ಗದರುತ್ತಲೇ ಭಾಷಣ ಮುಗಿಸಿದರು.
ಯಾರ್ ಏನೇ ಅಂದರೂ ಕಿವಿಗೆ ಹಾಕ್ಕೋಬೇಡ: ಹಿರಿಯ ನಟಿ ಜಯಮಲಾ ಈಗ ಸಂಪುಟದಲ್ಲಿ ಸಚಿವೆಯಾಗಿರುವುದು, ವಿಧಾನ ಪರಿಷತ್ ನಾಯಕಿಯಾಗಿರುವುದು ಗೊತ್ತೇ ಇದೆ. ಈ ಬಗ್ಗೆಯೂ ಅಂಬಿ ತಮ್ಮದೇ ಶೈಲಿಯಲ್ಲಿ ಮಾತನಾಡಿದರು. “ಇಷ್ಟು ದಿನ ರೀಲ್ ನಾಯಕಿಯಾಗಿದ್ದೆ. ಈಗ ರಿಯಲ್ ನಾಯಕಿಯಾಗಿದ್ದೀಯಾ. ಖುಷಿಯ ವಿಚಾರ. ಜನ ನೂರು ಮಾತನಾಡಿಕೊಳ್ಳಬಹುದು,
ಆದರೆ ಅದನ್ನು ಕಿವಿ ಒಳಗೆ ಬಿಟ್ಟುಕೊಳ್ಳದೇ ಒಳ್ಳೆಯ ಕೆಲಸ ಮಾಡು. ಡಾ.ರಾಜ್‌ಕುಮಾರ್ ಹೇಳ್ಳೋರು, “ನಾನು ಮೇಕಪ್‌ಗೆ ಕೂತರೆ, ಅವಳು ಹಂಗೆ, ಇವನು ಹಿಂಗೆ ಮತ್ತೊಂದು ಇನ್ನೊಂದು ಅಂತ ಹೇಳ್ಳೋರು. ಆದರೆ, ಅದು ಯಾವುದು ನನ್ನ ಕಿವಿಯೊಳಗೆ ಹೋಗುತ್ತಿರಲಿಲ್ಲ. ಎಲ್ಲವನ್ನು ಅಲ್ಲಿಂದಲೇ ಆಚೆ ಕಳುಹಿಸುತ್ತಿದ್ದೆ. ಅದೇ ರೀತಿ ಜಯಮಾಲಾ ಕೂಡಾ ಯಾರು ಏನೇ ಅಂದರೂ ಕಿವಿಗೆ ಹಾಕಿಕೊಳ್ಳದೇ ಒಳ್ಳೆಯ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.
ಚಿತ್ರರಂಗದ ಇಂಚಿಂಚು ಗೊತ್ತು: ಚಿತ್ರರಂಗದ ಸಮಸ್ಯೆ, ಬೇಡಿಕೆಗಳ ಪಟ್ಟಿಯನ್ನು ಮುಖ್ಯಮಂತ್ರಿಗಳ ಮುಂದೆ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಇಟ್ಟರು. ಆ ನಂತರ ಮಾತನಾಡಿದ ಅಂಬರೀಶ್, “ನಾನು ಚಿತ್ರರಂಗದಲ್ಲಿ 49 ವರ್ಷ ಕಳೆದಿದ್ದೇನೆ. ಇಲ್ಲಿನ ಸಣ್ಣ ಸಣ್ಣ ಅಂಶಗಳೂ ಗೊತ್ತು. ಚಿತ್ರರಂಗದ ಒಂದೊಂದು ಸೆಂಟಿಮೀಟರ್ ಕೂಡಾ ಗೊತ್ತು. ಇಲ್ಲಿ ಸಾಕಷ್ಟು ಸಮಸ್ಯೆಗಳಿವೆ.
ಕಲಾವಿದರಿಂದ ಹಿಡಿದು ಸಿನಿಮಾ ಬಿಡುಗಡೆವರೆಗೆ ಸಮಸ್ಯೆ ಇದೆ’ ಎಂದ ಅಂಬಿ ಹಿಂದೆ ಕೆ.ಜಿ.ರಸ್ತೆಯಲ್ಲಿದ್ದ ಚಿತ್ರಮಂದಿರಗಳನ್ನು ನೆನಪಿಸುತ್ತಾ, “ಆಗ ಕೆ.ಜಿ.ರಸ್ತೆಯಲ್ಲಿ ಅಷ್ಟೊಂದು ಚಿತ್ರಮಂದಿರಗಳಿದ್ದರೂ ಸರಿಯಾಗಿ ಕನ್ನಡಕ್ಕೆ ಥಿಯೇಟರ್ ಸಿಗುತ್ತಿರಲಿಲ್ಲ. ಒಂದರಲ್ಲಿ ಹಿಂದಿ ಸಿನಿಮಾ ಹಾಕಿದರೆ, ಇನ್ನೊಂದರೆ ಸೆಕ್ಸ್ ಪಿಕ್ಚರ್ ಹಾಕುತ್ತಿದ್ದರು. ಮತ್ತೊಂದರಲ್ಲಿ ತಮಿಳು..
ಈ ತರಹದ ಸ್ಪರ್ಧೆಯಲ್ಲೇ ಬಿಡುಗಡೆ ಮಾಡಬೇಕಿತ್ತು. ಮೂರನೇ ಕ್ಲಾಸ್ ಓದಿದ ಡಾ.ರಾಜ್‌ಕುಮಾರ್ ಇತಿಹಾಸನೇ ಬರೆದುಬಿಟ್ಟರು. ಆದರೆ, ಕರ್ನಾಟಕದ, ಈ ಬೆಂಗಳೂರಿನ ಹೃದಯ ಭಾಗವಾಗಿದ್ದ ಎಂ.ಜಿ.ರಸ್ತೆಯಲ್ಲಿ ಅವರ ಒಂದು ಪೋಸ್ಟರ್ ಹಾಕಲಾಗಲಿಲ್ಲ. ಆ ತರಹದ ಸನ್ನಿವೇಶದಲ್ಲಿ ಕನ್ನಡ ಚಿತ್ರರಂಗ ಬೆಳೆದು ಬಂದಿದೆ’ ಎನ್ನುತ್ತಾ ಚಿತ್ರರಂಗ ಬೆಳೆದು ಬಂದ ಹಾದಿಯ ಬಗ್ಗೆ ಮಾತನಾಡಿದರು.