Advertisement
ಕನ್ನಡದ ಹಿರಿಯ ನಟ, ರಾಜಕಾರಣಿ ಅಂಬರೀಷ್ ನಿಧನ, ಅವರ ಅಭಿಮಾನಿ ಮತ್ತು ಸ್ನೇಹ ಬಳಗಕ್ಕೆ ಅತೀವ ನೋವನ್ನುಂಟುಮಾಡಿದೆ. ರಾಜಕುಮಾರ್, ವಿಷ್ಣುವರ್ಧನ್‌ರ ನಿಧನಾನಂತರ ಅಕ್ಷರಶಃ ಕನ್ನಡ ಚಿತ್ರೋದ್ಯಮದ ಹಿರಿಯಣ್ಣನಾಗಿ ಬದಲಾಗಿದ್ದರು ಅಂಬರೀಷ್. ಇತ್ತೀಚಿನ ಕೆಲ ವರ್ಷಗಳಿಂದ ಅಂಬರೀಷ್‌ಅವರನ್ನು ಕನ್ನಡ ಚಿತ್ರರಂಗದ ಆಧಾರಸ್ತಂಭ ಎಂದೇ ಭಾವಿಸಲಾಗಿತ್ತು.
Related Articles
Advertisement
ಕೇಂದ್ರದಲ್ಲಿ ಸಂಸದರಾಗಿ, ಸಚಿವರಾಗಿಯೂ ದುಡಿದಿದ್ದ ಅವರು, ಸಿನೆಮಾ ಮತ್ತು ನಿಜಜೀವನದಲ್ಲಿ ಗುರುತಿಸಿಕೊಂಡಷ್ಟು ರಾಜಕಾರಣದಲ್ಲಿ ಸದ್ದು ಮಾಡಲಿಲ್ಲ. ಬಹುಶಃ ರಾಜಕೀಯದಲ್ಲಿನ ಜಟಿಲತಂತ್ರಗಳು ಅವರ ಗುಣಕ್ಕೆ ಅಷ್ಟಾಗಿ ಒಗ್ಗಲಿಲ್ಲವೆನಿಸುತ್ತದೆ. ಹೀಗಾಗಿ ಅವರ ಬಹುತೇಕ ಜನಸೇವೆಯ ಕೈಂಕರ್ಯವೂ ರಾಜಕೀಯೇತರವಾಗಿಯೇ ಆದದ್ದು ಎನ್ನಬಹುದೇನೋ.
ಅಂಬರೀಷ್ ಯಾವ ಮಟ್ಟಕ್ಕೆ ಜನಮನ ಮುಟ್ಟಿದ್ದರೆನ್ನುವುದಕ್ಕೆ ರಾಜ್ಯ ಮತ್ತು ದೇಶಾದ್ಯಂತ ಅವರ ಅಭಿಮಾನಿಗಳು, ಗೆಳೆಯರು ಮಿಡಿಯುತ್ತಿರುವ ಕಂಬನಿಯೇ ಸಾಕ್ಷಿ. ಫೇಸ್‌ಬುಕ್, ಟ್ವಿಟರ್‌ನಲ್ಲಂತೂ ಅಂಬರೀಷ್ ಅವರಿಗೆ ನುಡಿನಮನಗಳೇ ಹರಿದಾಡುತ್ತಿವೆ. ಪ್ರಧಾನಿಗಳು, ದಕ್ಷಿಣ ಭಾರತ-ಉತ್ತರ ಭಾರತದ ನಟರು, ಕೇಂದ್ರ ಸಚಿವರು, ಪಕ್ಷಾತೀತವಾಗಿ ರಾಜಕಾರಣಿಗಳೆಲ್ಲರೂ ಸಲ್ಲಿಸುತ್ತಿರುವ ನಮನ ಅಂಬರೀಷ್ ಬದುಕಿನಲ್ಲಿ ಎಷ್ಟೆಲ್ಲ ಸಂಪಾದಿಸಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. ಕರ್ನಾಟಕಕ್ಕಂತೂ ಅಂಬರೀಷ್ ನಿಧನ ನಿಜಕ್ಕೂ ದೊಡ್ಡ ನಷ್ಟ. ಬೇಸರದ ಸಂಗತಿಯೆಂದರೆ, ರಾಜ್ಯಕ್ಕೆ, ಅದರಲ್ಲೂ ಮಂಡ್ಯದ ಜನರಿಗಂತೂ ಶನಿವಾರ ನಿಜಕ್ಕೂ ದುರಂತದ ದಿನ. ಕಾಲುವೆಗೆ ಬಸ್ ಉರುಳಿ 30 ಜನ ಸಾವನ್ನಪ್ಪಿದ್ದ ಆಘಾತಕಾರಿ ಘಟನೆಯ ಬೆನ್ನಲ್ಲೇ ಮಂಡ್ಯದ ಗಂಡೂ ಧರೆ ತೊರೆದಿದ್ದಾರೆ. ಅಭಿಮಾನಿಗಳ ಮನಸ್ಸಿಗೆ ಸಾಂತ್ವನ, ಮೃತರ ಆತ್ಮಕ್ಕೆ ಶಾಂತಿ ದೊರಕುವಂತಾಗಲಿ.