Advertisement

ಸಮಾನತೆಗಾಗಿ ಅಂಬೇಡ್ಕರ್‌ ಹೋರಾಟ

03:02 PM Apr 15, 2018 | |

ರಾಯಚೂರು: ದೇಶದಲ್ಲಿ ಎರಡು ಮಹತ್ವದ ಚಳವಳಿಗಳು ನಡೆದಿವೆ. ಒಂದು ಗಾಂಧೀಜಿಯವರು ಬ್ರಿಟಿಷರ ವಿರುದ್ಧ ನಡೆಸಿದರೆ, ಅಂಬೇಡ್ಕರ್‌ ಅವರು ದೇಶದ ಒಳಗಡೆ ಪುರೋಹಿತ ಶಾಹಿ ಹಾಗೂ ಮೇಲ್ವರ್ಗದವರ ವಿರುದ್ಧ ಸಾಮಾಜಿಕ ಸಮಾನತೆಗಾಗಿ ಮಾಡಿದ ಹೋರಾಟ. ಅಂಥ ಹೋರಾಟಗಾರರನ್ನು ಕೇವಲ ಆಚರಣೆಗೆ ಮಾತ್ರ ಸೀಮಿತಗೊಳಿಸುತ್ತಿರುವುದು ಬೇಸರದ ಸಂಗತಿ ಎಂದು ಚಿತ್ತಾಪುರ ಸರ್ಕಾರಿ ಪದವಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಸಹಾಯಕ ಪ್ರಾಧ್ಯಾಪಕ ಡಾ| ಶರಣಪ್ಪ ಸೈದಾಪುರ ಹೇಳಿದರು.

Advertisement

ಜಿಲ್ಲಾಡಳಿತ, ಜಿಪಂ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಶನಿವಾರ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆದ ಡಾ| ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ 127ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. 

ಡಾ| ಅಂಬೇಡ್ಕರ್‌ ಅವರ ತತ್ವ ಮತ್ತು ಸಿದ್ಧಾಂತಗಳನ್ನು ಅನುಷ್ಠಾನಗೊಳಿಸಿದಾಗ ಮಾತ್ರ ಸಮಾಜದಲ್ಲಿ ಪರಿವರ್ತನೆ ಸಾಧ್ಯ. ಶತಮಾನಗಳಿಂದ ಸೌಲಭ್ಯ ವಂಚಿತ ಸಮುದಾಯಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಶಿಕ್ಷಣ ಸಿಗುತ್ತಿಲ್ಲ. ಗುಪ್ತರ ಯುಗವನ್ನು ಸುವರ್ಣಯಗ ಎಂದು ಇತಿಹಾಸದಲ್ಲಿ ತಿಳಿದುಕೊಂಡಿದ್ದೇವೆ. 21ನೇ ಶತಮಾನ ದಲಿತರಿಗೆ ಸುವರ್ಣಯುಗವಾಗಿದೆ ಎಂದು ವಿಶ್ಲೇಷಿಸಿದ ಅವರು, ಶೋಷಿತರು ನಡೆದು ಬಂದ ದಾರಿ ಹಾಗೂ ಇತಿಹಾಸ ಮೆಲಕು ಹಾಕುವ ಮಹತ್ವದ ದಿನವೇ ಡಾ| ಅಂಬೇಡ್ಕರ್‌ ಜಯಂತ್ಯುತ್ಸವ ವಿಶೇಷತೆಯಾಗಿದೆ ಎಂದರು.

1964ರಲ್ಲಿ ಜಾರಿಗೆ ಬಂದ ಕೊಠಾರಿ ಆಯೋಗವು ಅಂಬೇಡ್ಕರ್‌ ಅವರ ಶಿಕ್ಷಣದ ಕನಸಿಗೆ ಪೂರಕವಾಗಿ ಕೆಲಸ ಮಾಡಿತ್ತು. ಏಳು ದಶಕಗಳು ಕಳೆದರೂ ದಲಿತರ ಸಾಕ್ಷರತೆ ಪ್ರಮಾಣ ದೇಶದಲ್ಲಿ ಶೇ.50ರಷ್ಟು ಗುರಿ ಸಾಧಿಸಿಲ್ಲ. ಸಾಮಾಜಿಕ ಸಮಾನತೆಗಾಗಿ ಅಂಬೇಡ್ಕರ್‌ ಅವರು ಅಂತರ್ಜಾತಿ ವಿವಾಹಕ್ಕೆ ಒತ್ತು ನೀಡಿದ್ದರು. ದಲಿತರಿಗೆ ರಾಜಕೀಯ ಸ್ವಾತಂತ್ರ್ಯ ನೀಡಿದರೆ ಸಾಲದು ಅವರಿಗೆ ಆರ್ಥಿಕ ಸಮಾನತೆ ನೀಡುವುದು ಅಗತ್ಯ ಎಂದರು.

ಅಂಬೇಡ್ಕರ್‌ ಅವರ ವಾದಕ್ಕೆ ಮನುವಾದ, ಕೋಮುವಾದ ಹಾಗೂ ಜಾತಿವಾದವೇ ಶತ್ರುಗಳು. ಕೋಮುವಾದ ಸಮಾಜವನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಇವುಗಳನ್ನು ಅಂಬೇಡ್ಕರ್‌ ಅವರು ಕಟುವಾಗಿ ವಿರೋಧಿಸಿದ್ದರು ಎಂದರು. ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ನಗರದ ಡಾ| ಅಂಬೇಡ್ಕರ್‌ ವೃತ್ತದಲ್ಲಿರುವ ಬಾಬಾ ಸಾಹೇಬ್‌ ಅಂಬೇಡ್ಕರ್‌ ಪುತ್ಥಳಿಗೆ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಹಾರ ಹಾಕಿ ಗೌರವ ಸಲ್ಲಿಸಿ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿದರು.

Advertisement

ಜಿಪಂ ಸಿಇಒ ಅಭಿರಾಂ ಜಿ.ಶಂಕರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಕಿಶೋರ್‌ ಬಾಬು ಡಾ| ಬಾಬಾಸಾಹೇಬ್‌ ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಸರೋಜಾ, ದಲಿತ ಸಂಘಟನೆಗಳ ಮುಖಂಡರಾದ ರವೀಂದ್ರ ಪಟ್ಟಿ, ಆದೆಪ್ಪ ಕಾಡ್ಮೂರು, ಮಲ್ಲೇಶ ಕೊಲಿಮಿ, ಬಸವರಾಜ, ತಿಮ್ಮಾರೆಡ್ಡಿ, ಪ್ರಾಣೇಶ, ಕೆ.ಕುಮಾರ್‌ ಇತರರಿದ್ದರು. 

ಗಣ್ಯರಿಂದ ಮಾಲಾರ್ಪಣೆ: ನಗರದ ಅಂಬೇಡ್ಕರ್‌ ವೃತ್ತದಲ್ಲಿರುವ ಡಾ| ಬಾಬಾ ಸಾಹೇಬ್‌ ಪ್ರತಿಮೆಗೆ ಅಧಿಕಾರಿಗಳು, ಗಣ್ಯರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ನಾನಾ ಸಂಘಟನೆಗಳ ದಲಿತ ಮುಖಂಡರು ಸೇರಿ ಅನೇಕ ಗಣ್ಯರು ಮಾರ್ಲಾರ್ಪಣೆ ಮಾಡಿದ್ದರಿಂದ ಪ್ರತಿಮೆ ಮಾಲೆಗಳಲ್ಲಿ ಮುಳುಗಿ ಹೋಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next