Advertisement

ಸಮಾನತೆ ಸಾರಿದ ಮಹಾನ್‌ ಚೇತನ ಅಂಬೇಡ್ಕರ್‌

11:25 AM Apr 15, 2022 | Team Udayavani |

ಬಾಗಲಕೋಟೆ: ಸಮ ಸಮಾಜದ ನಿರ್ಮಾಣಕ್ಕೆ ಸಂವಿಧಾನದ ಮೂಲಕ ಭದ್ರ ಬುನಾದಿ ಹಾಕಿದವರು ಮಹಾನ್‌ ಚೇತನ ಡಾ| ಬಿ.ಆರ್‌.ಅಂಬೇಡ್ಕರ್‌ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.

Advertisement

ನವನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಾ| ಬಾಬಾಸಾಹೇಬ ಅಂಬೇಡ್ಕರ್‌ 131ನೇ ಜನ್ಮದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತಮ್ಮ ಜೀವನದುದ್ದಕ್ಕೂ ತಮ್ಮ ವಿಚಾರಧಾರೆಗಳ ಮೂಲಕ ಸಮಾಜದಲ್ಲಿರುವ ಅಂಕು-ಡೊಂಕು, ಮೇಲು-ಕೀಳು, ಅಸ್ಪೃಶ್ಯತೆ ಹೋಗಲಾಡಿಸಲು ನಿಟ್ಟಿನಲ್ಲಿ ಅನೇಕ ವಿಚಾರಗಳನ್ನು ಜಗತ್ತಿಗೆ ಹಂಚಿಕೊಂಡಿದ್ದಾರೆ ಎಂದರು. ವಿಧಾನ ಪರಿಷತ್‌ ಸದಸ್ಯ ಪಿ.ಎಚ್‌. ಪೂಜಾರ ಮಾತನಾಡಿ, ಕೆಲವರು ಅಂಬೇಡ್ಕರ್‌ ಅವರ ಜೀವನ ಸಾಧನೆ ಮೆಚ್ಚಿ ಅದರಂತೆ ನಡೆದು ವೈಚಾರಿಕತೆಗೆ ಬಳಸಿಕೊಂಡರೆ, ಇನ್ನು ಕೆಲವು ತಮ್ಮ ಅನುಕೂಲತೆಗೆ ತಕ್ಕಂತೆ ಬಳಸಿಕೊಳ್ಳುತ್ತಿದ್ದಾರೆ. ಇದು ಆಗಬಾರದು ಮಹಾತ್ಮರ ತತ್ವ, ಮಾರ್ಗದರ್ಶನ ಇಂದಿನ ಮಕ್ಕಳಿಗೆ, ಯುವ ಪೀಳಿಗೆಗೆ ಮುಖ್ಯವಾಗಿದೆ. ಸಮಾನತೆಯಿಂದ ಸರಿಯಾಗಿ ಜೀವನ ನಡೆಸಲು ಸಂವಿಧಾನದಲ್ಲಿ ಕಲ್ಪಿಸಿದ್ದು, ನಮ್ಮ ನಡೆ-ನುಡಿ, ಆಚಾರಗಳು ಬದಲಾಗಬೇಕು ಎಂದರು.

ಕವಿ ಹಾಗೂ ಚಿಂತಕ ಡಾ| ಮೂಡ್ನಾಕೂಡು ಚಿನ್ನಸ್ವಾಮಿ ಮಾತನಾಡಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಬದಲಾವಣೆಗಳು ಕಂಡುಬರುತ್ತಿಲ್ಲ. ಸಮಾಜದಲ್ಲಿ ಶಾಂತಿಯಿಂದ ಇರಬೇಕಾದರೆ ಎಲ್ಲ ಧರ್ಮದವರು ಮಾನವೀಯತೆ ಬೆಳೆಸಿಕೊಳ್ಳಬೇಕು ಎಂದರು.

ಶಾಸಕ ಡಾ| ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ, ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ| ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿಪಂ ಸಿಇಒ ಟಿ.ಭೂಬಾಲನ್‌, ಜಿಪಂ ಉಪಕಾರ್ಯದರ್ಶಿ ಸಿದ್ರಾಮೇಶ್ವರ ಉಕ್ಕಲಿ, ಯುಕೆಪಿ ವಿಶೇಷ ಜಿಲ್ಲಾಧಿಕಾರಿ ಸೋಮಲಿಂಗ ಗೆನ್ನೂರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ ಉಪಸ್ಥಿತರಿದ್ದರು.

ಪರಿಶಿಷ್ಟ ಜಾತಿ ಸಮಾಜದ ಉತ್ತಮ ಸೇವೆಗಾಗಿ ಎಂ.ಎಚ್‌.ಚಲವಾದಿ, ಡಾ| ಸುರೇಶ ಕೆಳಗಡೆ, ಯಲ್ಲಪ್ಪ ಸನಕ್ಯಾನವರ, ಹನಮಂತ ಹಲಕಿ, ಹನುಮಂತ ಚಿಮ್ಮಲಗಿ, ಯಮನಪ್ಪ ಮಾದರ ಅವರನ್ನು ಸನ್ಮಾನಿಸಲಾಯಿತು.

Advertisement

ಡಾ| ಬಿ.ಆರ್‌.ಅಂಬೇಡ್ಕರ್‌ ಅಭಿವೃದ್ಧಿ ನಿಗಮದಿಂದ ಸ್ವಯಂ ಉದ್ಯೋಗ ಆರಂಭಿಸಲು ಗಿರಿಸಾಗರ ಮಹಿಳಾ ಗ್ರಾಮೀಣಾಭಿವೃದ್ಧಿ ಸ್ವ-ಸಹಾಯಕ ಸಂಘಕ್ಕೆ 1 ಲಕ್ಷ ರೂ. ಹಾಗೂ ಮಾದಾಪುರ ಅಂಬೇಡ್ಕರ್‌ ಮಹಿಳಾ ಸ್ವ- ಸಹಾಯ ಸಂಘಕ್ಕೆ ಸಹಾಯಧನ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next