ಹುಣಸಗಿ: ಡಾ| ಬಾಬಾ ಸಾಹೇಬ ಅಂಬೇಡ್ಕರ್ ಅವರ ಬದುಕು, ವಿಚಾರ ಹೋರಾಟಗಳು ಸಮಾಜಕ್ಕೆ ಮಾದರಿಯಾಗಿವೆ ಎಂದು ಹಿರಿಯ ಪತ್ರಕರ್ತ ವೆಂಕಟಗಿರಿ ದೇಶಪಾಂಡೆ ಹೇಳಿದರು.
ಪಟ್ಟಣದ ಸ್ವಾಮಿ ವಿವೇಕಾನಂದ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವೇಕಾನಂದ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡ ಡಾ| ಬಿ.ರ್.ಅಂಬೇಡ್ಕರ್ ಓದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜ ಸುಧಾರಣೆಗೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ. ಅಪಾರ ಜ್ಞಾನ, ಓದುವ ಹವ್ಯಾಸ ಬೆಳೆಸಿಕೊಂಡಿದ್ದರು. ಹೀಗಾಗಿ ಅವರ ಜೀವನಾದರ್ಶ ವಿದ್ಯಾರ್ಥಿಗಳಿಗೆ ಅವಶ್ಯ ಆಗಿವೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ ಮಾತನಾಡಿ, ದೇಶದ ಮಹಾನ್ ನಾಯಕ ಅಂಬೇಡ್ಕರ್ ಅವರ ಓದು ಜೀವನ ವಿದ್ಯಾರ್ಥಿಗಳು ತಮ್ಮ ಜೀವನಕ್ಕೆ ಅಳವಡಿಸಿಕೊಂಡಿದ್ದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಶಿಕ್ಷಕ ಮತ್ತು ಸಾಹಿತಿ ವಿಠ್ಠಲ್ ಚವ್ಹಾಣ ಉಪನ್ಯಾಸ ನೀಡಿದರು. ಈ ವೇಳೆ ಡಾ| ಬಿ.ಆರ್.ಅಂಬೇಡ್ಕರ್ ಅವರ ಕುರಿತು ಹಮ್ಮಿಕೊಂಡ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಾದ ಶಮಶಾದ, ಸುಭಾಷ ಪವಾರ, ಅಕ್ಷತಾ ಗಣಚಾರಿ, ಗೀತಾ ದೊಡ್ಡಮನಿ, ಸಂಜಯ ಅವರಿಗೆ ಪ್ರಮಾಣ ಪತ್ರ ಹಾಗೂ ಅಂಬೇಡ್ಕರ್ ಅವರ ಪುಸ್ತಕಗಳನ್ನು ವಿತರಿಸಿ ಗೌರವಿಸಲಾಯಿತು. ಪದವಿ ಕಾಲೇಜಿನ ಪ್ರಾಚಾರ್ಯ ಸುರೇಶ ಕಿರಣಗಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ದಲಿತ ಸೇನೆ ಅಧ್ಯಕ್ಷ ಗುತ್ತಪ್ಪ ಬೊಮ್ಮನಹಳ್ಳಿ, ಸಾಹಿತಿ ವಿದ್ಯಾಕುಮಾರ ಬಡಿಗೇರ, ಕೃಷ್ಣಾ ದೇಶಪಾಂಡೆ, ಬಸವರಾಜ ಮರೋಳ ಇದ್ದರು.