ಮೈಸೂರು: ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಮಾನವತೆಯ ಆಶಾಕಿರಣ, ಜಾnನದ ಸಂಕೇತ ಎಂದು ಉರಿಲಿಂಗಿ ಪೆದ್ದಿ ಮಠದ ಜಾnನಪ್ರಕಾಶ ಸ್ವಾಮೀಜಿ ಹೇಳಿದರು. ಡಾ.ಬಿ.ಆರ್.ಅಂಬೇಡ್ಕರ್‌ರ 126ನೇ ಜನ್ಮ ವರ್ಷಾಚರಣೆ ಅಂಗವಾಗಿ ಗುರುವಾರ ನಗರದಲ್ಲಿ ಏರ್ಪಡಿಸಿದ್ದ ತಮಗಿದೋ ನಮ್ಮ ಗೌರವ ನಮನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಬಾಬಾ ಸಾಹೇಬ್ ಅಂಬೇಡ್ಕರ್‌ರ ಪ್ರತಿಭೆ, ಸಾಮರ್ಥ್ಯ ಗುರುತಿಸಿದವರು ಭಾರತೀಯರಿಗಿಂತ ವಿದೇಶಿಯರೇ ಹೆಚ್ಚು. ಅವರು ಸಂಪಾದಿಸಿದಷ್ಟು ವಿದ್ಯೆಯನ್ನು ವಿಶ್ವದಲ್ಲಿ ಈವರೆಗೂ ಯಾರೂ ಸಂಪಾದಿಸಿಲ್ಲ ಎಂದರು.
ಔತಣಕ್ಕೆ ಆಹ್ವಾನ: 1917ರಲ್ಲಿ ಡಾಕ್ಟರೇಟ್ ಪದವಿ ಪಡೆದ ಮೊದಲ ಭಾರತೀಯ ಅಂಬೇಡ್ಕರ್, 1932ರಲ್ಲಿ ನಡೆದ ದುಂಡು ಮೇಜಿನ ಸಮ್ಮೇಳನದಲ್ಲಿ ಅಂಬೇಡ್ಕರ್ ಮಂಡಿಸಿದ ವಿಚಾರಧಾರೆಯನ್ನು ಕೇಳಿ, ಮೆಚ್ಚಿದ ಇಂಗ್ಲೆಂಡಿನ ಮಹಾರಾಣಿ, ಅಂಬೇಡ್ಕರ್‌ರನ್ನು ತಮ್ಮ ಕೊಠಡಿಗೆ ಔತಣಕ್ಕೆ ಆಹ್ವಾನಿಸಿದ್ದರು. 1952ರಲ್ಲಿ ಎಲ್‌ಎಲ್‌ಡಿ ಪ್ರಮಾಣಪತ್ರವನ್ನು ಡಾ.ಅಂಬೇಡ್ಕರ್‌ಗೆ ನೀಡಲಾಯಿತು ಅದರಲ್ಲಿ ಭಾರತದಲ್ಲಿ ಮಾನವ ಹಕ್ಕುಗಳ ಹೋರಾಟದ ಪ್ರಪ್ರಥಮ ನೇತಾರ ಎಂದು ಉಲ್ಲೇಖೀಸಲಾಗಿದೆ ಎಂದು ತಿಳಿಸಿದರು.
ಅಂಬೇಡ್ಕರ್ ನನಗೆ ಸ್ಫೂರ್ತಿ: ದಕ್ಷಿಣ ಆಫ್ರಿಕಾದ ಮಾನವ ಹಕ್ಕುಗಳ ಹೋರಾಟಗಾರ ನೆಲ್ಸನ್ ಮಂಡೆಲಾ ಇಡೀ ವಿಶ್ವದಲ್ಲಿ ಮಾನವ ಹಕ್ಕುಗಳ ಹೋರಾಟ ಮಾಡಿದ ವೀರಾಗ್ರಣಿ ಡಾ.ಅಂಬೇಡ್ಕರ್ ನನಗೆ ಸ್ಫೂರ್ತಿ ಎಂದು ಹೇಳಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅಂಬೇಡ್ಕರ್‌ರನ್ನು ಆಧುನಿಕ ಭಾರತದ ಪಿತಾಮಹ ಎಂದು ಬಣ್ಣಿಸಿದ್ದಾರೆ ಎಂದು ಹೇಳಿದರು.
ನೋಂದಣಿ: ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಸುಮಾರು 83 ದೇಶಗಳ ವಿದ್ವಾಂಸರು ಬೆಂಗಳೂರಿನಲ್ಲಿ ನಡೆಯುವ ಸಮ್ಮೇಳನದಲ್ಲಿ ಭಾಗವಹಿಸಿ, ಮಾತನಾಡುವವರಿದ್ದಾರೆ. ಆನ್‌ಲೈನ್ ಮೂಲಕ ನೋಂದಣಿ ಮಾಡಿಸಿಕೊಂಡು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದರು. ಮೇಯರ್ ಎಂ.ಜೆ.ರವಿಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು.
ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಬಿ.ಸಿದ್ದರಾಜು, ಮೈಲ್ಯಾಕ್ ಅಧ್ಯಕ್ಷ ಎಚ್.ಎ. ವೆಂಕಟೇಶ್, ಉಪ ಮೇಯರ್ ರತ್ನ ಲಕ್ಷ್ಮಣ್, ಜಿಲ್ಲಾಧಿಕಾರಿ ರಂದೀಪ್ ಡಿ., ಮಹಾ ನಗರಪಾಲಿಕೆ ಆಯುಕ್ತ ಜಿ. ಜಗದೀಶ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರಭಾವತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಎಸ್.ಜೆ. ಸೋಮಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್. ಚೆನ್ನಪ್ಪ ಮತ್ತಿತರರು ಉಪಸ್ಥಿತರಿದ್ದರು.
ಚರ್ಮವಾದ್ಯ ಮೇಳ: ರಾಜಾದ್ಯಂತ ಗುರುವಾರ ಒಂದೇ ಸಮಯದಲ್ಲಿ ಚರ್ಮ ವಾದ್ಯ ಮೇಳ ಆಯೋಜಿಸಿದ್ದು, ಮೈಸೂರಿನಲ್ಲಿ 50 ಚರ್ಮವಾದ್ಯಗಾರರಿಂದ ಚರ್ಮವಾದ್ಯ ಮೇಳ ಅತ್ಯಂತ ಆಕರ್ಷಕವಾಗಿ ಮೂಡಿಬಂತು.