Advertisement

ಅಂಬೇಡ್ಕರ್‌ ಆದರ್ಶಗಳು ಜಾರಿಗೊಳ್ಳಲಿ

05:24 PM Dec 08, 2018 | Team Udayavani |

ಚಿಕ್ಕಮಗಳೂರು: ಸ್ವಪರಿಶ್ರಮ ಮತ್ತು ಜ್ಞಾನದಿಂದ ಶ್ರೇಷ್ಟತೆ ಗಳಿಸಿಕೊಂಡ ಡಾ| ಅಂಬೇಡ್ಕರ್‌ ಅವರು ಸಂವಿಧಾನ ಇರುವವರೆಗೂ ಚಿರಸ್ಥಾಯಿ ಎಂದು ನಿವೃತ್ತ ಉಪನ್ಯಾಸಕ-ಪತ್ರಕರ್ತ ಬಿ.ತಿಪ್ಪೇರುದ್ರಪ್ಪ ಹೇಳಿದರು. ಬಹುಜನ ಸಮಾಜಪಾರ್ಟಿ ಜಿಲ್ಲಾ ಘಟಕ ಹಾಗೂ ಜಿಲ್ಲಾ ಸಹೋದರತ್ವ ಸಮಿತಿ ಸಂಯುಕ್ತವಾಗಿ ನಗರದ ಅಂಬೇಡ್ಕರ್‌ ಭವನದಲ್ಲಿ ಗುರುವಾರ ಆಯೋಜಿಸಿದ್ದ ಬಾಬಾ ಸಾಹೇಬ್‌ ಡಾ| ಬಿ.ಆರ್‌. ಅಂಬೇಡ್ಕರ್‌ ಪರಿನಿರ್ವಾಣ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಧರ್ಮ ಕೀರ್ತಿ ಮತ್ತು ಸಂಪತ್ತುಗಳಿಸುವ ಸಾಧನವಲ್ಲ, ಮನಃಶಾಂತಿ ತಂದುಕೊಡಬೇಕು ಎಂಬುದು ಡಾ| ಅಂಬೇಡ್ಕರ್‌ ಆಶಯವಾಗಿತ್ತು. ಸಾಮಾಜಿಕ ಸಂಕಷ್ಟಗಳನ್ನು ಪಾರು ಮಾಡಲು ಧರ್ಮ ಬಳಕೆಯಾಗಬೇಕೆಂದು ಬಯಸಿದ್ದರು. ಆದರೆ, ಇಂದು ಧರ್ಮ ಸಾಮಾಜಿಕ ಶಾಂತಿ ಕೆಡಿಸುತ್ತಿದೆ ಎಂದರು. 

ದೇವರು-ಧರ್ಮಕ್ಕೆ ಬಸವಣ್ಣ, ಅಂಬೇಡ್ಕರ್‌ ಮತ್ತಿತರರು ಹೊಸವ್ಯಾಖ್ಯಾನ ನೀಡಿದ್ದರು. ರಾಷ್ಟ್ರಕವಿ ಕುವೆಂಪು ಗುಡಿ, ಚರ್ಚು, ಮಸೀದಿ ಬಿಟ್ಟು ಬನ್ನಿ ಮನುಜ ಮತ ವಿಶ್ವಪಥಕ್ಕೆ ಎಂದು ಸಾರಿದ್ದರು. ಇಂದು ಸಹಿಷ್ಣುತೆ ಕಡಿಮೆಯಾಗಿ ಸಾರ್ವಭೌಮತೆಗೆ ಅಪಾಯ ಬಂದಿದೆ. ಭಯದ ಛಾಯೆ ಬೆನ್ನುಹತ್ತಿದ ಆತಂಕ ಕಾಣುತ್ತಿದೆ ಎಂದು ಹೇಳಿದರು.

ಸಿಪಿಐ ಜಿಲ್ಲಾಕಾರ್ಯದರ್ಶಿ ಎಚ್‌.ಎಂ. ರೇಣುಕಾರಾಧ್ಯ ಮಾತನಾಡಿ, ಸಮಾಜಕ್ಕೆ ಉಪಯುಕ್ತವಾದ ಸದ್ವಿಚಾರಗಳನ್ನು ಭಿತ್ತಿದ ಮಹಾನ್‌ವ್ಯಕ್ತಿಗಳ ವಿಚಾರಗಳನ್ನು ಬಿಟ್ಟು ಭಾವಚಿತ್ರಗಳನ್ನು ಮಾತ್ರ ಉಳಿಸಿಕೊಳ್ಳುತ್ತಿದ್ದೇವೆ. ಮಹಾನ್‌ವ್ಯಕ್ತಿಗಳು ದೇವರಾಗುವುದು ಬೇಡ. ಅವರ ಆದರ್ಶಗಳು ಜಾರಿಗೊಂಡರೆ ಅವರೆಲ್ಲರ ಸಮಾನತೆಯ ಸುಖೀಸಮಾಜ ನಿರ್ಮಾಣವಾಗುತ್ತದೆ ಎಂದರು.

ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ. ರಾಧಾಕೃಷ್ಣ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ವೈವಿಧ್ಯತೆಯಿಂದ ಕೂಡಿದ ವಿವಿಧರೀತಿಯ ಭಾಷೆ, ಸಂಸ್ಕೃತಿ ಒಳಗೊಂಡು ಭಾರತದ ಒಟ್ಟು ಭೂಮಂಡಲವನ್ನು ಒಂದೇ ಆಡಳಿತದಡಿ ಮುನ್ನಡೆಸುವಂತೆ ಮಾಡಿದ ಕಾನೂನು ಪುಸ್ತಕವೇ ಸಂವಿಧಾನ. ವಿಶ್ವದ ಅನೇಕ ದೇಶಗಳಿಗೆ ಮಾದರಿಯಾಗಿರುವ ಸಂವಿಧಾನವನ್ನು ಶ್ರದ್ಧೆ, ಪರಿಶ್ರಮದಿಂದ ಸಿದ್ಧಪಡಿಸಿದವರೆ ಡಾ| ಅಂಬೇಡ್ಕರ್‌. ಸರ್ವಸಮಾನತೆಯ ಕನಸನ್ನು ನನಸಾಗಿಸಲು ಬಿಎಸ್‌ಪಿ ಕಾರ್ಯಪ್ರವೃತ್ತವಾಗಿದೆ ಎಂದರು. 

Advertisement

ಬಿಎಸ್‌ಪಿ ಕಾರ್ಯದರ್ಶಿ ಪಿ.ವೇಲಾಯುಧನ್‌ ಮಾತನಾಡಿ, ಅಸ್ಪೃಶ್ಯತೆಯ ಬೇರು ಜಾತೀಯತೆಯಲ್ಲಿದೆ. ಜಾತೀಯತೆಯ ಬೇರು ಬ್ರಾಹ್ಮಣತ್ವದಲ್ಲಿದೆ. ಬ್ರಾಹ್ಮಣತ್ವದ ಬೇರು ರಾಜಕೀಯ ಅಧಿಕಾರದಲ್ಲಿದೆ. ದೇಶದಲ್ಲಿ ಅಸ್ಪೃಶ್ಯತೆ, ಜಾತೀಯತೆ, ಅಸಮಾನತೆ ಹೋಗಬೇಕಾದರೆ ಒಡೆದು ಹಂಚಿರುವ
ಬಹುಜನರು ಒಂದಾಗಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದರು.

ಜಿಲ್ಲಾಸಹೋದರತ್ವ ಸಮಿತಿ ಅಧ್ಯಕ್ಷೆ ಕೆ.ಬಿ. ಸುಧಾ ಮಾತನಾಡಿ ಸಮಾನವಾದ ಭೂಹಂಚಿಕೆ, ಸ್ತ್ರೀಸಮಾನತೆ, ರಕ್ತಪಾತವಿಲ್ಲದ ಬದಲಾವಣೆ ಅಂಬೇಡ್ಕರ್‌ ಬಯಸಿದ್ದರು. ಮಹಿಳೆಯರಿಗೆ ಸಮಾನತೆ ಕೊಡುವ ಹಿಂದೂಕೋಡ್‌ ಜಾರಿಗೆ ತರಲಾಗದಿದ್ದ ಹಿನ್ನೆಲೆಯಲ್ಲಿ ಕೇಂದ್ರಸಚಿವ ಸ್ಥಾನವನ್ನೆ ತ್ಯಾಗ ಮಾಡಿದವರೆಂದು ಸ್ಮರಿಸಿದರು. ಸಿಪಿಐ ಮುಖಂಡ ಬಿ.ಅಮ್ಜದ್‌, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್‌, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಮಾತನಾಡಿದರು.

ದಸಂಸ ಮುಖಂಡರಾದ ವಸಂತಕುಮಾರ್‌, ರಾಜರತ್ನಂ, ಮರ್ಲೆ ಅಣ್ಣಯ್ಯ, ಬಿಎಸ್‌ಪಿ ಜಿಲ್ಲಾಸಂಯೋಜಕ ಶೃಂಗೇರಿಯ ಕೆ.ಎನ್‌. ಗೋಪಾಲ್‌, ತಾಲ್ಲೂಕುಅಧ್ಯಕ್ಷ ಮಂಜುನಾಥ, ಜಗದೀಶ್‌, ಉಮೇಶ್‌, ಲಕ್ಷ್ಮಣ, ಮಂಜಯ್ಯ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next