ಜ್ಯೋತಿ: ಜಲಸಿರಿ ಯೋಜನೆಯಲ್ಲಿ ನೀರಿನ ಪೈಪ್‌ಲೈನ್ ಅಳವಡಿಸುವ ಮಹತ್ವದ ಕಾಮಗಾರಿ ನಗರದ ಜ್ಯೋತಿಯ ಅಂಬೇಡ್ಕರ್ ಸರ್ಕಲ್‌ನಲ್ಲಿ ಕೈಗೊಳ್ಳಲಾಗಿದೆ.
ಜಲಸಿರಿ ಯೋಜನೆಯಲ್ಲಿ ಬೆಂದೂರ್‌ವೆಲ್ ಮುಖ್ಯ ಪಂಪ್‌ಹೌಸ್‌ನಿಂದ ಬಾವುಟಗುಡ್ಡೆ ಟ್ಯಾಂಕ್ ಹಾಗೂ ಸ್ಟೇಟ್‌ಬ್ಯಾಂಕ್‌ನಲ್ಲಿ ಹೊಸದಾಗಿ ನಿರ್ಮಾಣವಾಗಲಿರುವ ನೀರಿನ ಟ್ಯಾಂಕ್‌ಗೆ ಸಂಪರ್ಕ ಕಲ್ಪಿಸಲು ಹೊಸದಾಗಿ ಪೈಪ್ ಲೈನ್ ಅಳವಡಿಕೆ ಕಾಮಗಾರಿ ಇಲ್ಲಿ ನಡೆಯಲಿದೆ. ಅಲ್ಲಲ್ಲಿ ಕಾಮಗಾರಿ ನಡೆಯುತ್ತಿದ್ದು, ಅಂಬೇಡ್ಕರ್ ಸರ್ಕಲ್ ಸಮೀಪದ ಕಾಮಗಾರಿ ಮಹತ್ವ ಪಡೆದುಕೊಂಡಿದೆ.
ಬಲ್ಮಠ ಹಾಗೂ ಬಾವುಟಗುಡ್ಡೆ ಕಡೆಯಿಂದ ಬಂಟ್ಸ್‌ಹಾಸ್ಟೆಲ್‌ನಡೆಗೆ ಮತ್ತು ಬಂಟ್ಸ್‌ಹಾಸ್ಟೆಲ್‌ನಿಂದ ಹಂಪನಕಟ್ಟ ಕಡೆಗೆ ವಾಹನಗಳು ತೆರಳುವ ಸರ್ಕಲ್ ಭಾಗದಲ್ಲಿಯೇ ಪೈಪ್‌ಲೈನ್ ಅಳವಡಿಕೆಗಾಗಿ ಕಾಂಕ್ರೀಟ್ ರಸ್ತೆ ಕಟ್ಟಿಂಗ್ ನಡೆಸಿ ಕಾಮಗಾರಿ ನಡೆಸಬೇಕಾಗಿದೆ. ಇದೇ ಭಾಗದಲ್ಲಿ ಬಸ್ ನಿಲುಗಡೆ ಸ್ಥಳವೂ ಇದೆ. ಹೀಗಾಗಿ ಪೈಪ್‌ಲೈನ್ ಕಾಮಗಾರಿ ಸಂಚಾರ ದಟ್ಟಣೆ ಸೃಷ್ಟಿಸುವ ಸಾಧ್ಯತೆಯೂ ಇದೆ.
ರಾತ್ರಿ ಮಾತ್ರ ಕಾಮಗಾರಿ
ಮಹಾನಗರ ಪಾಲಿಕೆ ಅಧಿಕಾರಿಗಳ ಪ್ರಕಾರ, ಅಂಬೇಡ್ಕರ್ ಸರ್ಕಲ್‌ನಲ್ಲಿ ರಾತ್ರಿ 11ರಿಂದ ಬೆಳಗ್ಗೆ 5 ಗಂಟೆಯ ಒಳಗೆ ಮಾತ್ರ ಕಾಮಗಾರಿ ನಡೆಯಲಿದೆ. ಮೊದಲ ದಿನ ರಾತ್ರಿ ಕಾಂಕ್ರೀಟ್ ಕಟ್ ಮಾಡಿ ಅಗೆದು ಆ ಭಾಗದ ಪೈಪ್‌ಲೈನ್ ಹಾಗೂ ಇತರ ಸಂಪರ್ಕಗಳ ಬಗ್ಗೆ ಮಾಹಿತಿ ಪಡೆದು ಅದೇ ರಾತ್ರಿ ಮಣ್ಣುಹಾಕಿ ರೀ ಫಿಲ್ ಮಾಡಲಾಗುತ್ತದೆ. ಮರುದಿನ ರಾತ್ರಿ ಇತರ ಸಂಪರ್ಕಗಳ ಜೋಡಣೆ ನಡೆಸಿ ಹೊಸ ಪೈಪ್‌ಲೈನ್ ಅಳವಡಿಸಿ ಸಂಪರ್ಕ ಕಲ್ಪಿಸಿ ಮಣ್ಣು ಹಾಕಿ ಮುಚ್ಚಲಾಗುತ್ತದೆ. ಕೊಂಚ ದಿನ ಕಾದು ನೋಡಿ ಬಳಿಕ ಕಾಂಕ್ರೀಟ್ ಕೆಲಸ ಮಾಡಲಾಗುತ್ತದೆ. 3-4 ದಿನಗಳಲ್ಲಿ ಈ ಕಾಮಗಾರಿಗಳು ನಡೆಯಲಿದೆ’ ಎನ್ನುತ್ತಾರೆ.
ನೀರಿನ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಮುಗಿದ ಅನಂತರ ಇಲ್ಲಿ ನೂತನ ಅಂಬೇಡ್ಕರ್ ಸರ್ಕಲ್ ಕಾಮಗಾರಿ ಕೂಡ ಆರಂಭವಾಗಲಿದೆ. ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಈ ಕಾಮಗಾರಿ ನಡೆಯಲಿದೆ.