ಹೊಳೆನರಸೀಪುರ : ಪಟ್ಟಣದ ಮೈಸೂರು ರಸ್ತೆಯಲ್ಲಿನ ಅಂಬೇಡ್ಕರ್ ಭವನ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂದು ಶಿಥಿಲಾವಸ್ಥೆ ತಲುಪಿದೆ.
ಅದನ್ನು ದುರಸ್ತಿ ಪಡಿಸಿ ಸಾರ್ವಜನಿಕರ ಸಣ್ಣಪುಟ್ಟ ಸಮಾರಂಭ ನಡೆಸಲು ಅವಕಾಶ ಮಾಡಿಕೊಡುವಂತೆ ದಲಿತ ಸಮುದಾಯದ ಜನತೆ ಆಗ್ರಹ ಪಡಿಸಿದೆ. ಈ ಭವನ ಮಾಜಿ ಸಂಸದ ಹಾಗು ಮಾಜಿ ಸಚಿವ ಜಿ.ಪುಟ್ಟಸ್ವಾಮಿ ಗೌಡ ಅವರ ಅಧಿಕಾರದ ಅವಧಿಯಲ್ಲಿ ನಿರ್ಮಾಣಗೊಂಡು ದಲಿತರ ಮನೆಗಳ ಸಣ್ಣಪುಟ್ಟ ಸಮಾರಂಭಗಳು ನಡೆಯಲು ಕಾರಣವಾಗಿತ್ತು. ಆದರೆ, ಇತ್ತೀಚಿಗೆ ತಾಲೂಕಿನಲ್ಲಿ ರಾಜಕೀಯ ಬದಲಾವಣೆಯ ನಂತರ ಈ ಕಟ್ಟಡದ ಉಸ್ತುವಾರಿ ನೋಡಿಕೊಳ್ಳಬೇಕಾದ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಕಟ್ಟಡ ಶಿಥಿಗೊಂಡು ಭವನದ ಒಳಗೆ, ಮೇಲ್ಛಾವಣಿ ಹಲವಡೆ ನೆಲ ಕಚ್ಚಿದೆ.
ಭವನದ ಅವ್ಯವಸ್ಥೆ: ಪ್ರಸ್ತುತ ಈ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ. ಈ ಹಿಂದೆ ಸಣ್ಣಪುಟ್ಟ ಕಾರ್ಯಕ್ರಮ ನಡೆಯುತ್ತಿದ್ದವು. ಆದರೆ, ಭವನದ ಒಳಗಿನ ಮೇಲ್ಛಾವಣೆ ಒಂದೆರಡು ಭಾರೀ ಕುಸಿದ ಪರಿಣಾಮ ಈ ಭವನದಲ್ಲಿ ಯಾರೊಬ್ಬರು ಸಭೆ ಕಾರ್ಯಕ್ರಮ ನಡೆಸುತ್ತಿಲ್ಲ. ಜೊತೆಗೆ ಕಾರ್ಯಕ್ರಮ ನಡೆಯವ ವೇಳೆ ಮೇಲ್ಛಾವಣಿ ಕುಸಿದರೆ ಪ್ರಾಣಕ್ಕೆ ಕುತ್ತು ಬರಲಿದೆ ಎಂಬ ಪರಿಸ್ಥಿತಿ ಎದುರಾಗಿದೆ.
ಗೋಡೆಗಳಲ್ಲಿ ಬಿರುಕು: ಇನ್ನು ಭವನದ ಹೊರಗೆ ನೋಡಿದರೆ ಈ ಕಟ್ಟಡ ಶಿಥಲಾವಸ್ಥೆಯತ್ತ ತಲುಪಿ ಗೋಡೆಗಳಲ್ಲಿ ಬಿರುಕು ಬಿದ್ದಿದೆ. ಜೊತೆಗೆ ಗೋಡೆಗಳು ಮಳೆ ನೀರಿನಿಂದ ತೊಯ್ದಿರುವ ದೃಶ್ಯ, ಹಾಗೂ ಒಳಭಾಗದಲ್ಲಿನ ಮೇಲ್ಛಾ ವಣೆ ಕುಸಿದಿರುವುದು ಎದ್ದು ಕಾಣುತ್ತಿದೆ.ಈ ಬಗ್ಗೆ ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಭವನದ ದುರಸ್ತಿಗೆ ಮುಂದಾಗಿ ಮುಂದೆ ನಡೆಯಲಿರುವ ಪ್ರಾಣಹಾನಿಗೆ ತಡೆಯೊಡ್ಡುವರೆ ಎಂಬುದನ್ನು ಕಾದು ನೋಡಬೇಕಿದೆ.
ಇಷ್ಟೆಲ್ಲ ಅವ್ಯವಸ್ಥೆಗೆ ಒಳಗಾಗಿರುವ ಕಟ್ಟದಲ್ಲಿ ಗ್ರಂಥಾಲಯ ನಡೆಯುತ್ತಿದೆ ಎಂದು ಈ ಭಾಗದ ಸಾರ್ವಜನಿಕರು ತಿಳಿಸಿದ್ದಾರೆ.