Advertisement

ಅಂಬೇಡ್ಕರ್‌ ಭವನಗಳಿಗೆ ಇನ್ನೂ ನಿವೇಶನ ಭಾಗ್ಯವಿಲ್ಲ 

12:43 PM Oct 17, 2018 | |

ಮಂಗಳೂರು : ನಿವೇಶನಗಳ ಕೊರತೆ, ಮಂಜೂರಾದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂಬೇಡ್ಕರ್‌ ಭವನಗಳ ನಿರ್ಮಾಣಕ್ಕೆ ಸಮಸ್ಯೆ ಎದುರಾಗಿದೆ. ಜಿಲ್ಲೆಗೆ 2012-13 ನೇ ಸಾಲಿನಿಂದ 2017-18 ನೇ ಸಾಲಿನವರೆಗೆ ಮಂಜೂರಾದ ಒಟ್ಟು 96 ಅಂಬೇಡ್ಕರ್‌ ಭವನಗಳಲ್ಲಿ 9 ಮಾತ್ರ ಪೂರ್ಣ ಗೊಂಡಿದ್ದು, 22 ಭವನಗಳಿಗೆ ಇನ್ನೂ ನಿವೇಶನ ದೊರಕಿಲ್ಲ. 65 ಅಂಬೇಡ್ಕರ್‌ ಭವನಗಳ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ.

Advertisement

2012-18ರ ಅವಧಿಯಲ್ಲಿ ಮಂಗಳೂರು ತಾಲೂಕಿನಲ್ಲಿ 38 ಅಂಬೇಡ್ಕರ್‌ ಭವನಗಳು ಮಂಜೂರಾಗಿದ್ದು, ನಾಲ್ಕು ಮಾತ್ರ ಪೂರ್ಣಗೊಂಡಿವೆ. 24 ಭವನಗಳ ನಿರ್ಮಾಣ ಪ್ರಗತಿಯಲ್ಲಿದೆ. 10 ಭವನಗಳಿಗೆ ಇನ್ನೂ ನಿವೇಶನಗಳು ಲಭ್ಯವಾಗಿಲ್ಲ. ಬಂಟ್ವಾಳ ತಾಲೂಕಿಗೆ 21 , ಪುತ್ತೂರು ತಾಲೂಕಿಗೆ 10, ಸುಳ್ಯ ತಾಲೂಕಿಗೆ 15 ಹಾಗೂ ಬೆಳ್ತಂಗಡಿ ತಾಲೂಕಿಗೆ 12 ಅಂಬೇಡ್ಕರ್‌ ಭವನಗಳು ಮಂಜೂರಾಗಿವೆ. ಬಂಟ್ವಾಳ ತಾಲೂಕಿನಲ್ಲಿ 3 ಅಂಬೇಡ್ಕರ್‌ ಭವನಗಳು ಪೂರ್ಣಗೊಂಡಿದ್ದು, 12 ಭವನಗಳ ನಿರ್ಮಾಣ ನಡೆಯುತ್ತಿದೆ. 6 ಭವನಗಳಿಗೆ ನಿವೇಶನ ದೊರಕಿಲ್ಲ.

ಪುತ್ತೂರು ತಾಲೂಕಿನಲ್ಲಿ 1 ಅಂಬೇಡ್ಕರ್‌ ಭವನ ಪೂರ್ಣಗೊಂಡಿದ್ದು, 7 ಪ್ರಗತಿಯಲ್ಲಿವೆ. 2 ಭವನಗಳಿಗೆ ಇನ್ನೂ ನಿವೇಶನ ದೊರಕಿಲ್ಲ. ಸುಳ್ಯಕ್ಕೆ ಮಂಜೂರಾಗಿರುವ 15 ಅಂಬೇಡ್ಕರ್‌ ಭವನಗಳ ಪೈಕಿ 14 ಭವನಗಳ ಕಾಮಗಾರಿ ನಡೆಯುತ್ತಿದ್ದು, ಒಂದು ಕೂಡ ಪೂರ್ಣಗೊಂಡಿಲ್ಲ. ಒಂದು ಭವನಕ್ಕೆ ನಿವೇಶನ ಲಭ್ಯವಾಗಿಲ್ಲ.

ಯಾವುದೇ ಪ್ರಗತಿಯಿಲ್ಲ
ಬೆಳ್ತಂಗಡಿಯಲ್ಲಿ 1 ಅಂಬೇಡ್ಕರ್‌ ಭವನ ಪೂರ್ಣಗೊಂಡಿದ್ದು, 8ರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 3 ಅಂಬೇಡ್ಕರ್‌ ಭವನಗಳು ನಿವೇಶನ ರಹಿತವಾಗಿವೆ. ನಿವೇಶನ ಸಮಸ್ಯೆಯನ್ನು ಎದುರಿಸುತ್ತಿರುವ 22 ಅಂಬೇಡ್ಕರ್‌ ಭವನಗಳಿಗೆ ನಿವೇಶನಗಳನ್ನು ಗುರುತಿಸಿ ಕೊಡುವಂತೆ ಸಮಾಜಕಲ್ಯಾಣ ಇಲಾಖೆಯ ಅಧಿಕಾರಿಗಳು ಕಂದಾಯ ಇಲಾಖೆಗೆ ಪತ್ರ ಬರೆದಿದ್ದರೂ ಯಾವುದೇ ಪ್ರಗತಿಯಾಗಿಲ್ಲ.

ಅನುದಾನ ಬಾಕಿ
96 ಅಂಬೇಡ್ಕರ್‌ ಭವನಗಳಿಗೆ ಒಟ್ಟು 29 ಕೋ.ರೂ. ಅನುದಾನ ನಿಗದಿಪಡಿಸಲಾಗಿದೆ. ಇದರಲ್ಲಿ 11.13 ಕೋ. ರೂ.ಬಿಡುಗಡೆಯಾಗಿದ್ದು 11.11 ಕೋ.ರೂ. ವಿನಿಯೋಗಿಸಲಾಗಿದೆ. 17.87 ಕೋ.ರೂ. ಸರಕಾರದಿಂದ ಬಿಡುಗಡೆಯಾಗಲು ಬಾಕಿ ಇದೆ.

Advertisement

ನಗರದ ಉರ್ವಸ್ಟೋರಿನಲ್ಲಿ ಸುಮಾರು 12 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಜಿಲ್ಲಾ ಮಟ್ಟದ ಅಂಬೇಡ್ಕರ್‌ ಭವನದ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಜಿಲ್ಲೆಯಲ್ಲಿ ಒಟ್ಟು 65 ಅಂಬೇಡ್ಕರ್‌ ಭವನಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.
– ಡಾ| ಯೋಗೀಶ್‌
ಜಿಲ್ಲಾ ಸಮಾಜ ಕಲ್ಯಾಣ ಇಲಾಖಾ
ಉಪನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next