Advertisement

ತಂದೆಯ ಸಾವಿನ ಸುದ್ದಿ ಬಂದಾಗ ಅಂಬಿ ಮಂಗಳೂರಿನಲ್ಲಿದ್ದರು!

11:32 AM Nov 26, 2018 | Team Udayavani |

ಮಂಗಳೂರು: “ಕುದುರೆಮುಖ ಚಿತ್ರದ ಶೂಟಿಂಗ್‌ ಚಿಕ್ಕ ಮಗಳೂರಿನಲ್ಲಿ ನಡೆಯುತ್ತಿತ್ತು. ಪಡುವಾರಹಳ್ಳಿ ಪಾಂಡವರು ಶೂಟಿಂಗ್‌ ಮಂಗಳೂರಿನಲ್ಲಿ. ನನ್ನ ಬಳಿ ಡೇಟ್ಸ್‌ ಇರಲಿಲ್ಲ. ನೀನೇ ಬರಬೇಕು ಎಂದು ನಿರ್ದೇಶಕ ಪುಟ್ಟಣ್ಣ ಒತ್ತಾಯಿಸಿದ್ದರು. ಹಾಗೆ ಚಿಕ್ಕಮಗಳೂರಿನಿಂದ ಹೊರಟು ಮಂಗಳೂರು ಸರ್ಕಲ್‌ಗೆ ಬಂದಿದ್ದೆ. ಅಲ್ಲಿಗೆ ಬಂದ ಸ್ನೇಹಿತರು ಶೂಟಿಂಗ್‌ ಜಾಗಕ್ಕೆ ನನ್ನನ್ನು ಕರೆದುಕೊಂಡು ಹೋಗುವ ಬದಲು ಗೆಸ್ಟ್‌ಹೌಸ್‌ಗೆ 
ಕರೆದು ಕೊಂಡು ಹೋದರು. ಶೂಟಿಂಗ್‌ ಎಲ್ಲಿ ಎಂದು ಕೇಳಿದಾಗ ನನ್ನ ತಂದೆಯ ಸಾವಿನ ಸುದ್ದಿಯನ್ನು ಅವರು ನೀಡಿದರು…’ 

Advertisement

ಹೀಗೆಂದು ಕೆಲವೇ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು ನಟ ಅಂಬರೀಷ್‌! ಕನ್ನಡ ಚಿತ್ರರಂಗದ ರೆಬೆಲ್‌ ಸ್ಟಾರ್‌, ನಟ ಅಂಬರೀಷ್‌ ಅವರ ಸಾವಿನ ಸುದ್ದಿಯಿಂದ ನಾಡು ದುಃಖತಪ್ತವಾಗಿದೆ. ಈ ಹಿರಿಯ ನಟ ಅಂಬರೀಷ್‌ ಅವರು ಒಬ್ಬ ನಟ ನಾಗಿ ಮತ್ತು ರಾಜಕಾರಣಿಯಾಗಿ ಹಲವು ಬಾರಿ ಮಂಗಳೂರು ಮತ್ತು ಕರಾ ವಳಿಗೆ ಬಂದು ಹೋಗಿದ್ದರು. ಅಂಬರೀಷ್‌ ಅವರ ಕರಾವಳಿ ನಂಟಿನ ಬಗ್ಗೆ ಮೆಲುಕು ಹಾಕಿದಾಗ ಇಂಥ ಹಲವು ಗಮನಾರ್ಹ ಸಂಗತಿಗಳು ನೆನಪಾಗುತ್ತವೆ. ಸಿನೆಮಾ ಮೂಲಕವೇ ಎಲ್ಲೆಡೆ ಜನಪ್ರೀತಿ ಗಳಿಸಿದ ಅಂಬರೀಷ್‌ ಸಿನೆಮಾ ಶೂಟಿಂಗ್‌ ಸಮಯದಲ್ಲಿ ಆಗಾಗ್ಗೆ ಕರಾವಳಿಗೆ ಆಗಮಿಸುತ್ತಿದ್ದರು. ಸಚಿವರಾಗಿದ್ದಾಗ, ಕೆಲವು ವರ್ಷಗಳ ಹಿಂದೆ ಒಂದೆರಡು ಬಾರಿ ಕರಾವಳಿಗೆ ಆಗಮಿಸಿದ್ದರು.

ಅಂಬರೀಷ್‌ ಅವರು ಮಂಗಳೂರಿಗೆ ಬಂದರೆ ಬಹುತೇಕ ಆಗಿನ ಹೊಟೇಲ್‌ ವುಡ್‌ಸೈಡ್‌ (ಈಗಿನ ಸಿಟಿ ಸೆಂಟರ್‌ ಇರುವ ಜಾಗ)ನಲ್ಲಿ ಉಳಿದು ಕೊಳ್ಳುತ್ತಿದ್ದರು. ಬಹುತೇಕ ಸ್ನೇಹಿತರು ಆ ವೇಳೆ ಅಂಬರೀಷ್‌ ಅವರನ್ನು ಭೇಟಿ ಮಾಡಲು ಅಲ್ಲಿಗೆ ಬರುತ್ತಿದ್ದರು. ಮಾಲಕರಾದ ಅಪ್ಪಾಜಿ ನಾಯ್ಕ ಅವರ ಜತೆಗೆ ಸ್ನೇಹ ಸಂಪಾದಿಸಿದ್ದ ಅವರು ಆತ್ಮೀಯ ಒಡನಾಡಿಯಾಗಿದ್ದರು. 

ವಾಮಂಜೂರಿನ ವಿಶೇಷ ಸಾಮರ್ಥ್ಯದ ಮಕ್ಕಳಿಗೆ ನೆರವಾಗುವ ಉದ್ದೇಶದಿಂದ ಸ್ಯಾಂಡಲ್‌ವುಡ್‌ನ‌ ಎಲ್ಲ ಕಲಾವಿದರನ್ನು ಮಂಗಳೂರಿಗೆ ಕರೆ ತಂದು ಇಲ್ಲಿ ಸಂಗೀತ ರಸಮಂಜರಿಯನ್ನು ಆಯೋಜಿಸಿದ್ದರು. 1991ರಲ್ಲಿ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಸಂಘಟಿಸಿದ್ದ ಈ ಸಂಗೀತ ಕಾರ್ಯಕ್ರಮದಲ್ಲಿ  ಡಾ| ರಾಜ್‌ಕುಮಾರ್‌ ಸಹಿತ ಸ್ಯಾಂಡಲ್‌ವುಡ್‌ನ‌ ಖ್ಯಾತ ಕಲಾವಿದರು ಭಾಗವಹಿಸಿದ್ದರು. ಎಲ್ಲ ಕಲಾವಿದರನ್ನು ಜೋಡಿಸಿ ಕಾರ್ಯ  ಕ್ರಮ ಆಯೋಜನೆಯ ಜವಾಬ್ದಾರಿಯನ್ನು ಅಂಬರೀಷ್‌ ಅವರೇ ವಹಿಸಿಕೊಂಡಿದ್ದರು ಎಂದು ನೆನಪು ಮಾಡು ತ್ತಾರೆ ತಮ್ಮ ಲಕ್ಷ್ಮಣ. 

ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್‌ “ಉದಯವಾಣಿ’ ಜತೆಗೆ ಮಾತನಾಡಿ, ಕರಾವಳಿ ಭಾಗದೊಂದಿಗೆ ಅಂಬರೀಷ್‌ ಅವರು ಅವಿನಾಭಾವ ಸಂಬಂಧ ಹೊಂದಿದ್ದರು. ಕೆಲವು ಸಿನೆಮಾಗಳ ಶೂಟಿಂಗ್‌ ಸಮಯದಲ್ಲಿ ಅವರು ಮಂಗಳೂರಿನಲ್ಲಿಯೇ ಉಳಿದು ಕೊಳ್ಳುತ್ತಿದ್ದರು. ವಿಶೇಷವಾಗಿ ಅವರು ಮಂಗಳೂರು ವ್ಯಾಪ್ತಿಯಲ್ಲಿ ಹಲವು ಜನ ಸ್ನೇಹಿತರನ್ನು ಹೊಂದಿದ್ದರು. ಅಶಕ್ತ ಮಕ್ಕಳಿಗೆ ನೆರವು ನೀಡುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಅಂಬರೀಷ್‌ ಅವರ ನೇತೃತ್ವದಲ್ಲಿಯೇ ಸಂಗೀತ ರಸಮಂಜರಿ ಕಾರ್ಯಕ್ರಮವನ್ನೂ ನಡೆಸಲಾಗಿತ್ತು ಎಂದು ನೆನಪಿಸಿಕೊಂಡಿದ್ದಾರೆ. 

Advertisement

ಸೋಮೇಶ್ವರದಲ್ಲಿ  “ಬೆಳ್ಳಿ ರಥದಲಿ ಸೂರ್ಯ ತಂದ ಕಿರಣಾ’!
1989ರಲ್ಲಿ ಬಂದ “ಇಂದ್ರಜಿತ್‌’ ಸಿನೆಮಾದ ಅಂಬರೀಷ್‌ ಮತ್ತು ದೀಪಿಕಾ ಜೋಡಿಯ ಅತ್ಯಂತ ಜನಪ್ರಿಯ ಹಾಡು “ಬೆಳ್ಳಿ ರಥದಲಿ ಸೂರ್ಯ ತಂದ ಕಿರಣಾ… ಆ ಚಂದ್ರನಾ ಆಗಮನಾ…’ ಶೂಟಿಂಗ್‌ ಸೋಮೇಶ್ವರದಲ್ಲಿ ನಡೆದಿತ್ತು. ಇನ್ನು ಅಂಬರೀಷ್‌, ಶ್ರೀನಾಥ್‌ ಮತ್ತು  ಶಿವರಾಮ್‌ ತಾರಾಗಣದಲ್ಲಿ  ಮೂಡಿಬಂದ “ಶುಭಮಂಗಳ’ ಸಿನೆಮಾದ ಶೂಟಿಂಗ್‌ ಮಂಗಳೂರಿನಲ್ಲಿ  ನಡೆದಿತ್ತು. ಇದರ ಬಹುತೇಕ ಚಿತ್ರೀಕರಣ ಕರಾವಳಿಯಲ್ಲಿಯೇ ಆಗಿತ್ತು ಎಂಬುದು ವಿಶೇಷ. ನಗರದ ಫಳ್ನೀರ್‌ನ ಮನೆಯೊಂದರಲ್ಲಿ  ಇದರ “ಸೂರ್ಯಂಗೂ ಚಂದ್ರಂಗೂ ಬಂದರೆ ಮುನಿಸು’ ಹಾಡಿನ ಚಿತ್ರೀಕರಣ ನಡೆದಿತ್ತು. ಉಳಿದಂತೆ ಪಡುವಾರಹಳ್ಳಿ ಪಾಂಡವರು, ಒಂಟಿ ಸಲಗ ಸಹಿತ ಕೆಲವು ಸಿನೆಮಾಗಳಲ್ಲಿ ಅಭಿನಯಿಸುವ ಕಾರಣಕ್ಕಾಗಿ ಅಂಬರೀಷ್‌ ಅವರು ಕರಾವಳಿಗೆ ಬಂದಿರುವ ಬಗ್ಗೆ ಹಾಗೂ ಇಲ್ಲೇ ಉಳಿದುಕೊಂಡಿರುವ ಬಗ್ಗೆ ಉಲ್ಲೇಖವಿದೆ. 

 ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next