Advertisement

ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ಅಂಬರೀಶ್‌, ರಮ್ಯಾಗಿಲ್ಲ ಸ್ಥಾನ 

07:12 AM Oct 18, 2018 | |

ಬೆಂಗಳೂರು: ಉಪ ಚುನಾವಣೆ ಪ್ರಚಾರಕ್ಕಾಗಿ ಕಾಂಗ್ರೆಸ್‌ 45 ಸ್ಟಾರ್‌ ಪ್ರಚಾರಕರ ಪಟ್ಟಿ ಸಿದ್ಧಪಡಿಸಿದ್ದು, ಮಾಜಿ ಸಚಿವ ಅಂಬರೀಶ್‌ ಹಾಗೂ ಮಾಜಿ ಸಂಸದೆ ರಮ್ಯಾ ಅವರ ಹೆಸರು ಕೈ ಬಿಡಲಾಗಿದೆ ಎಂದು ತಿಳಿದು ಬಂದಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಅಂಬರೀಶ್‌ ಹಾಗೂ ರಮ್ಯಾ ಅವರನ್ನು ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಆದರೆ, ಇಬ್ಬರೂ ಚುನಾವಣಾ ಪ್ರಚಾರದಿಂದ ಅಂತರ ಕಾಯ್ದುಕೊಂಡಿದ್ದರು. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತಿದ್ದು ಇಬ್ಬರೂ ನಾಯಕರು ಮಂಡ್ಯ ಜಿಲ್ಲೆಗೆ ಸೇರಿದವರಾಗಿದ್ದು, ಆ ಜಿಲ್ಲೆಯ ಮಾಜಿ ಸಂಸದರೂ ಆಗಿದ್ದಾರೆ. ಆದರೆ, ಮಂಡ್ಯ ಕ್ಷೇತ್ರವನ್ನು ಮೈತ್ರಿ ಪಕ್ಷ ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದರಿಂದ ಕಾಂಗ್ರೆಸ್‌ ಮಂಡ್ಯದಲ್ಲಿ ಗಂಭೀರವಾಗಿ ಪ್ರಚಾರ ಮಾಡುವ ಅಗತ್ಯವಿಲ್ಲ. ಅಂಬರೀಷ್‌ ಹಾಗೂ ರಮ್ಯಾ ಅವರನ್ನು ಸ್ಟಾರ್‌ ಪ್ರಚಾರಕ ಪಟ್ಟಿಯಲ್ಲಿ ಸೇರಿಸಿದರೂ ಅವರು ಪ್ರಚಾರ ಕಾರ್ಯಕ್ರಮಗಳಿಗೆ ಆಗಮಿಸುವುದು ಅನುಮಾನ ಎಂಬ ಕಾರಣ ನೀಡಲಾಗಿದೆ.

Advertisement

ಅಂಬಿ ಭೇಟಿ ಮಾಡಿದ ಎಲ್‌ಆರ್‌ಎಸ್‌: ಈ ಮಧ್ಯೆ, ಮಂಡ್ಯದಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿರುವ ಜೆಡಿಎಸ್‌ನ ಎಲ್‌.ಆರ್‌. ಶಿವರಾಮೇಗೌಡ ಚುನಾವಣೆಯಲ್ಲಿ ತಮ್ಮ ಪರವಾಗಿ ಪ್ರಚಾರಕ್ಕೆ ಆಗಮಿಸುವಂತೆ ಅಂಬರೀಶ್‌ ಅವರಿಗೆ ಮನವಿ ಮಾಡಿದ್ದಾರೆ. ಬುಧವಾರ ಅಂಬರೀಶ್‌ ಮನೆಗೆ ಭೇಟಿ ನೀಡಿದ ಅವರು ಉಪ ಚುನಾವಣೆಯಲ್ಲಿ ತಮ್ಮ ಪರವಾಗಿ ಪ್ರಚಾರಕ್ಕೆ ಆಗಮಿಸುವಂತೆ ಮನವಿ ಮಾಡಿ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಅವರ ಮನವಿಗೆ ಅಂಬರೀಶ್‌ ಸ್ಪಂದಿಸಿ ಪಾಲ್ಗೊಳ್ಳುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಸಿಎಂಗೆ ದಿನೇಶ್‌ ಗುಂಡೂರಾವ್‌ ಪತ್ರ
ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಎರಡನೇ ದರ್ಜೆಯ ಪ್ರಜೆಗಳಾಗಿದ್ದಾರೆ. ಸರ್ಕಾರದಲ್ಲಿ ಕಾಂಗ್ರೆಸ್‌  ಸಚಿವರು, ಮುಖಂಡರು ಕಾರ್ಯಕರ್ತರಿಗೆ ಮಾನ್ಯತೆ ದೊರೆಯುತ್ತಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌
ಗುಂಡೂರಾವ್‌ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಪತ್ರ ಬರೆದಿದ್ದಾರೆ.

ಸಂಪುಟ ರಚನೆ, ನಿಗಮ ಮಂಡಳಿ ನೇಮಕ, ತಾಲೂಕು ಹಾಗೂ ಜಿಲ್ಲಾ ಮಟ್ಟದ ವಿವಿಧ ಸಮಿತಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕ ಮಾಡುವಾಗ 2:1 ರ ಅನುಪಾತದಲ್ಲಿ ನೇಮಕ ಮಾಡಬೇಕೆಂಬ ಒಪ್ಪಂದದಂತೆ ಅಕ್ರಮ-ಸಕ್ರಮ, ಭೂ ನ್ಯಾಯಮಂಡಳಿ ಸೇರಿದಂತೆ ಎಲ್ಲ ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಮಿತಿಗಳನ್ನು ಹೊಸದಾಗಿ ರಚಿಸಬೇಕಿದೆ. ಈ ಸಮಿತಿ ರಚಿಸುವ ಸಂದರ್ಭದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌  ಸದಸ್ಯರಿಗೆ ಹೆಚ್ಚಿನ ಅನುಕೂಲವಾಗುವಂತೆ ನೋಡಿಕೊಳ್ಳಬೇಕೆಂದು ದಿನೇಶ್‌ ಗುಂಡೂರಾವ್‌ ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. 

ಕಾಂಗ್ರೆಸ್‌ ಶಾಸಕರು ಇರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರಿಗೆ 2:1 ರ ಅನುಪಾತ, ಜೆಡಿಎಸ್‌ ಶಾಸಕರು ಇರುವ ಕ್ಷೇತ್ರಗಳಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಕಾರ್ಯಕರ್ತರಿಗೆ 2:1 ರ ಅನುಪಾತದಲ್ಲಿ ಸದಸ್ಯರನ್ನು ನೇಮಿಸುವುದು. ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಎರಡನೇ ಸ್ಥಾನದಲ್ಲಿದ್ದರೆ ಕಾಂಗ್ರೆಸ್‌ಗೆ 2 ಜೆಡಿಎಸ್‌ ಗೆ 1 ರ ಅನುಪಾತ. ಜೆಡಿಎಸ್‌ ಎರಡನೇ ಸ್ಥಾನದಲ್ಲಿದ್ದರೆ ಜೆಡಿಎಸ್‌ಗೆ 2 ಕಾಂಗ್ರೆಸ್‌ಗೆ 1 ರ ಅನುಪಾತದಲ್ಲಿ ಸದಸ್ಯರುಗಳನ್ನು ನೇಮಕ ಮಾಡಬೇಕು. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆ ಹಾಗೂ ತಾಲೂಕು ಮಟ್ಟದ ಸಮಿತಿಗಳ ರಚನೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರಿಗೆ ಹೆಚ್ಚಿನ ಅವಕಾಶ ದೊರೆಯುವಂತೆ ನೋಡಿಕೊಳ್ಳಲು ಸರ್ಕಾರದ ಎಲ್ಲ ಸಚಿವರುಗಳಿಗೆ ನಿರ್ದೇಶನ ನೀಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next