ಅಂಬಾನಿ… ಬಹುಶಃ ದೇಶದಲ್ಲಿ ಈ ಹೆಸರು ಕೇಳದವರೇ ಇಲ್ಲ. ಅಂಬಾನಿ ಶ್ರೀಮಂತ ಉದ್ಯಮಿ. ಜಗತ್ತಿಗೂ ಚಿರಪರಿಚಿತ ಈ ಹೆಸರು. ಇಷ್ಟಕ್ಕೂ ಈ ಹೆಸರೇಕೆ ಇಲ್ಲಿ ಪ್ರಸ್ತಾಪ ಎಂಬ ಪ್ರಶ್ನೆ ಸಹಜ. ಅದಕ್ಕೆ ಉತ್ತರ “ಅಂಬಾನಿ ಪುತ್ರ’! ಅರೇ, ಹೀಗೆಂದಾಕ್ಷಣ ಮತ್ತೂಂದು ಗೊಂದಲ ಉಂಟಾಗಬಹುದು. ವಿಷಯವಿಷ್ಟೇ, “ಅಂಬಾನಿ ಪುತ್ರ’ ಎಂಬುದು ಕನ್ನಡ ಸಿನಿಮಾದ ಹೆಸರು.
ಹಾಗಂತ, ಇದು ಶ್ರೀಮಂತ ಉದ್ಯಮಿ ಅಂಬಾನಿ ಅವರಿಗಾಗಲಿ, ಅವರ ಪುತ್ರನಿಗಾಗಲಿ ಸಂಬಂಧಿಸಿದ ಚಿತ್ರವಂತೂ ಅಲ್ಲ. ಇದೊಂದು ನೈಜಘಟನೆ ಆಧರಿಸಿ ಮಾಡಿರುವ ಚಿತ್ರ. ಸದ್ದಿಲ್ಲದೆಯೇ ಈಗಾಗಲೇ ಚಿತ್ರೀಕರಣ ಪೂರೈಸಿರುವ ಚಿತ್ರತಂಡ, ಈಗ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ವಿ.ಎಸ್.ಪಿ.ಎಸ್. ಮೂವೀಸ್ ಬ್ಯಾನರ್‌ನಲ್ಲಿ ಕೆ.ಎನ್. ವೆಂಕಟೇಶ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಈಗ ಚಿತ್ರದ ಪ್ರಥಮ ಪ್ರತಿ ಕೂಡ ಸಿದ್ಧವಾಗಿದೆ. ಚಿತ್ರವನ್ನು ದೊರೈರಾಜ್ ನಿರ್ದೇಶನ ಮಾಡಿದ್ದಾರೆ. “ಅಂಬಾನಿ ಪುತ್ರ’ ಅಂದಾಕ್ಷಣ ಇಲ್ಲೂ ಶ್ರೀಮಂತ ಉದ್ಯಮಿಯೊಬ್ಬನ ಮಗನ ಕಥೆ ಏನಾದರೂ ಇದೆಯಾ ಅಂದುಕೊಂಡರೆ ಅದಕ್ಕೆ ಈಗಲೇ ಉತ್ತರವಿಲ್ಲ. ಆ ಬಗ್ಗೆ ತಿಳಿಯುವ ಕುತೂಹಲವಿದ್ದರೆ, “ಅಂಬಾನಿ ಪುತ್ರ’ ಚಿತ್ರ ಬಿಡುಗಡೆಯಾಗುವವರೆಗೂ ಕಾಯಲೇಬೇಕು.
ಇಲ್ಲೊಂದು ಲವ್‌ಸ್ಟೋರಿ ಇದೆ. ಜೊತೆಗೊಂದು ವ್ಯಥೆಯೂ ಇದೆ. ಸೆಂಟಿಮೆಂಟ್, ಎಮೋಷನ್ಸ್, ಹಾಸ್ಯ ಕೂಡ ಚಿತ್ರದಲ್ಲಿದೆ ಎಂಬುದು ಚಿತ್ರತಂಡದ ಮಾತು. ಚಿತ್ರಕ್ಕೆ ವಿ.ರಾಮಾಂಜನೇಯ ಛಾಯಾಗ್ರಹಣ ಮಾಡಿದರೆ, ಅಭಿಷೇಕ್ ಜಿ.ರಾಜ್ ಐದು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಸಾಲೋಮನ್ ಅವರು ಸಂಕಲನ ಮಾಡಿದ್ದಾರೆ. ಕೆ.ಜಾರ್ಜ್ ಅವರ ಸಾಹಸ ಚಿತ್ರಕ್ಕಿದೆ.
ಹೈಟ್ ಮಂಜು ನೃತ್ಯ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಸುಪ್ರೀಮ್, ಆಶಾ, ಕಾವ್ಯಾ, ಮಿಮಿಕ್ರಿ ಗೋಪಿ, ಮಂಜೇಗೌಡ್ರು, ಚಂದ್ರಿಕಾ, ಸುಮಿತ್ರಾ ವೆಂಕಟೇಶ್, ಪ್ರೀತಂ, ರೋಹಿತ್, ಆದಿತ್ಯ, ಮಾ.ಸುಹಾಸ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಮಂಡ್ಯ, ಹಾಸನ, ಸಕಲೇಶಪುರ, ಕುಮುಟ, ಹೊನ್ನಾವರ, ಮಹಾರಾಷ್ಟ್ರ ಸುತ್ತಮುತ್ತಲ ತಾಣದಲ್ಲಿ “ಅಂಬಾನಿ ಪುತ್ರ’ ಚಿತ್ರವನ್ನು ಚಿತ್ರೀಕರಿಸಲಾಗಿದೆ.