Advertisement
ಅಂಬಾಗಿಲು-ಮಣಿಪಾಲ ಮಾರ್ಗದ 3.9 ಕಿ.ಮೀ. ರಸ್ತೆ ಚತುಷ್ಪಥಗೊಳ್ಳುತ್ತಿದೆ. ಪ್ರಸ್ತುತ ಪೆರಂಪಳ್ಳಿ ಜಂಕ್ಷನ್‌ನಿಂದ ರೈಲ್ವೇ ಬ್ರಿಡ್ಜ್ ವರೆಗಿನ ರಸ್ತೆಯ ಎರಡು ಕಡೆಗಳಲ್ಲಿ ಡಾಮರು ಕಾಮಗಾರಿ ಪೂರ್ಣಗೊಂಡಿದೆ. ಬ್ರಿಡ್ಜ್ ಅನಂತರ ಅಂಬಾಗಿಲು ರಸ್ತೆ ತನಕದ ಕಾಮಗಾರಿ ಕಳೆದ ಕೆಲವು ತಿಂಗಳಿನಿಂದ ಸ್ಥಗಿತಗೊಂಡಿದೆ. ಹಳೆಯ ರಸ್ತೆಯಲ್ಲಿ ಅತಿಯಾದ ವಾಹನ ಸಂಚಾರ ಮತ್ತು ಮಳೆಯಿಂದಾಗಿ ಭಾರೀ ಗಾತ್ರದ ಗುಂಡಿಗಳು ನಿರ್ಮಾಣವಾಗಿದೆ.
ಅಂಬಾಗಿಲು, ಸಂತೋಷ್ ನಗರ, ಸುಂದರಿ ಗೇಟ್ ಸಮೀಪದಲ್ಲಿ ಭಾರೀ ಗಾತ್ರ ಹೊಂಡ-ಗುಂಡಿ ನಿರ್ಮಾಣವಾಗಿದೆ. ಜೋರಾಗಿ ಮಳೆಯಾದರೆ ಈ ಮಾರ್ಗದ ರಸ್ತೆಯಲ್ಲಿ ಕೆಸರು ತುಂಬಿ ಸಾರ್ವಜನಿಕರು, ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಮಾರ್ಗವಾಗಿ ತೆರಳುವ ಲಘು ವಾಹನ ಮತ್ತು ದ್ವಿಚಕ್ರ ವಾಹನಗಳ ಸವಾರರು ಹಲವು ಬಾರಿ ಜಾರಿ ಬೀಳುತ್ತಿದ್ದಾರೆ. ಸಾರ್ವಜನಿಕರು ಕಾಲ್ನಡಿಗೆಯಲ್ಲಿ ತೆರಳಲು ಕಷ್ಟ ಪಡುತ್ತಿದ್ದಾರೆ. ಇಲ್ಲಿ ಅವಘಡ ಆಗಿ ಪ್ರಾಣ ಹಾನಿ ಸಂಭವಿಸುವ ಮೊದಲು ಸಂಬಂಧಿಸಿದ ಅಧಿಕಾರಿಗಳು, ಗುತ್ತಿಗೆದಾರರು ಗಮನಹರಿಸಿ ಸಮಸ್ಯೆ ನಿವಾರಣೆಗೆ ಕ್ರಮ ವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ
Related Articles
Advertisement
ಒತ್ತಡ ಕಡಿಮೆಯಾಗಲಿದೆಕುಂದಾಪುರ ಸೇರಿದಂತೆ ವಿವಿಧ ಕಡೆಯಿಂದ ನೇರವಾಗಿ ಮಣಿಪಾಲವನ್ನು ಪ್ರವೇಶಿಸುವ ರಸ್ತೆ ಇದಾಗಿದೆ. ಪ್ರಸ್ತುತ ಚತುಷ್ಪಥ ಗೊಳ್ಳುತ್ತಿರುವುದರಿಂದ ರಸ್ತೆಯಲ್ಲಿ ವಾಹನ ಸಂಚಾರದ ಒತ್ತಡ ಕಡಿಮೆಯಾಗಲಿದೆ. ಪ್ರಸ್ತುತ ರಸ್ತೆ 10 ಮೀಟರ್ ಅಗಲವಿದೆ. ಅದನ್ನು 20 ಮೀಟರ್ ಡಾಮರು ರಸ್ತೆಯನ್ನಾಗಿಸಿ ಅಭಿವೃದ್ಧಿಪಡಿಸಲಾಗುತ್ತಿದೆ. ಪರಿಹಾರ ಧನ ಬಾಕಿ!
ಪ್ರಸ್ತುತ ರೈಲ್ವೇ ಬ್ರಿಡ್ಜ್ ಮುಂಭಾಗದ ಅನಂತರದಲ್ಲಿ ಬರುವ ಖಾಸಗಿ ಮಾಲಕರ ಕಟ್ಟಡಗಳನ್ನು ತೆರವುಗೊಳಿಸಿ, ರಸ್ತೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕಾಗಿದೆ. ಅದಕ್ಕೆ ಸಂತ್ರಸ್ತರಿಗೆ ಸರಕಾರದಿಂದ ಪರಿಹಾರಧನ ಬಿಡುಗಡೆಯಾಗ ಬೇಕಿದೆ. ಟೆಂಡರ್ ವಹಿಸಿಕೊಂಡ ಸಂಸ್ಥೆ 2021ರ ನವೆಂಬರ್ ಒಳಗೆ ಕಾಮಗಾರಿ ಪೂರ್ಣ ಗೊಳಿಸಬೇಕಾಗಿತ್ತು. ಆದರೆ ಭೂ ಸ್ವಾಧೀನಗೊಳ್ಳದ ಹಿನ್ನೆಲೆಯಲ್ಲಿ ಗುತ್ತಿಗೆ ಅವಧಿ ಮರು ನವೀಕರಣಕ್ಕೆ ಕಳುಹಿಸಲಾಗಿದೆ. 7.32 ಎಕ್ರೆ ಭೂಸ್ವಾಧೀನಕ್ಕೆ ಅಧಿಸೂಚನೆ
ಉಡುಪಿ- ಮಲ್ಪೆ ಮಾಸ್ಟರ್ ಫ್ಲಾನ್ ಮಹಾಯೋಜನೆಯಲ್ಲಿ ಅಂಬಾಗಿಲು- ಪೆರಂಪಳ್ಳಿ- ಮಣಿಪಾಲ ರಿಂಗ್ ರಸ್ತೆಯ ಚತುಷ್ಪಥ ಕಾಮಗಾರಿಗೆ ಟೆಂಡರ್ ಆಗಿದ್ದು, 2020ರ ಸೆಪ್ಟಂಬರ್‌ನಲ್ಲಿ ಟಿಡಿಆರ್ ಮೂಲಕ 7.32 ಎಕ್ರೆ ಖಾಸಗಿ ಭೂಸ್ವಾಧೀನಕ್ಕೆ ಲೋಕೋಪಯೋಗಿ ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಅಭಿವೃದ್ಧಿ ಹಕ್ಕುಗಳ ವರ್ಗಾವಣೆ (ಟಿಡಿಆರ್)ಸೂತ್ರದಡಿಯಲ್ಲಿ 3.9 ಕಿ.ಮೀ. ರಸ್ತೆ ಭೂಸ್ವಾಧೀನ ನಡೆಸಲಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರದ 7.32 ಎಕ್ರೆ ಭೂಮಿ ಸಂತ್ರಸ್ತರಿಗೆ ಪರಿಹಾರವಾಗಿ ಒಟ್ಟು 14.64 ಎಕ್ರೆ ಹಕ್ಕು ಸ್ವಾಮ್ಯದ ಟಿಡಿಆರ್ ಪತ್ರ ನೀಡಲಿದೆ. ಮಣಿಪಾಲ- ಅಂಬಾಗಿಲು ಮಾರ್ಗವಾಗಿ ತೆರಳುವಾಗ ಪೆರಂಪಳ್ಳಿ ಬಿಡ್ಜ್ ಸಮೀಪ ಬರುವ ಅಪಾಯಕಾರಿ ಸುಂದರಿ ಗೇಟ್ ತಿರುವಿನಲ್ಲಿ ನಿತ್ಯ ಅಪಘಾತ ಸಂಭವಿಸುತ್ತಿದ್ದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ಈ ತಿರುವನ್ನು ವಿಸ್ತರಿಸಲು ಚಿಂತಿಸಿದೆ. ಹೊಂಡಗಳನ್ನು ಮುಚ್ಚಿ
ಅಂಬಾಗಿಲು- ರೈಲ್ವೇ ಬ್ರಿಡ್ಜ್ ಮಾರ್ಗದಲ್ಲಿ ಹೊಸ ರಸ್ತೆ ನಿರ್ಮಾಣವಾಗುವುದು ತಡವಾದರೂ ಪರವಾಗಿಲ್ಲ. ಕೊನೆ ಪಕ್ಷ ರಸ್ತೆಯಲ್ಲಿ ಬಿದ್ದಿರುವ ಹೊಂಡಗಳನ್ನು ಮುಚ್ಚುವ ಕಾರ್ಯಕ್ಕೆ ಮುಂದಾಗಬೇಕು.
-ದಿನೇಶ್, ವಾಹನ ಸವಾರ ಶೀಘ್ರದಲ್ಲಿ ಕಾಮಗಾರಿ
ಟೆಂಡರ್‌ದಾರರನ್ನು ಕರೆಸಿ ಶೀಘ್ರದಲ್ಲಿ ಹೊಂಡ ಗುಂಡಿಗಳನ್ನು ಮುಚ್ಚಲಾಗುತ್ತದೆ. ಮಳೆಗಾಲ ಮುಕ್ತಾಯವಾಗುತ್ತಿದ್ದು ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸಲಾಗುತ್ತದೆ.
-ಜಗದೀಶ್ ಭಟ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ ಉಪವಿಭಾಗ, ಉಡುಪಿ