ನವದೆಹಲಿ: ಪ್ರತಿಕೂಲ ಹವಾಮಾನದಿಂದಾಗಿ ಪ್ರಸಿದ್ಧ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಪಹಲ್ಗಾಮ್ ನ ನುನ್ವಾನ್ ಬೇಸ್ ಕ್ಯಾಂಪ್ ನಿಂದ ಯಾತ್ರಾರ್ಥಿಗಳು ತೆರಳಲು ಅನುಮತಿ ನೀಡಲಾಗುತ್ತಿಲ್ಲ ಎಂದು ವರದಿ ವಿವರಿಸಿದೆ.
ಇದನ್ನೂ ಓದಿ:ಪಡುಬಿದ್ರಿ: ದ್ವಿಚಕ್ರ ವಾಹನದ ಮೇಲೆ ಮಗುಚಿ ಬಿದ್ದ ಲಾರಿ; ಸವಾರ ಸ್ಥಳದಲ್ಲೇ ಸಾವು
ಯಾತ್ರಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನುನ್ವಾನ್ ಕ್ಯಾಂಪ್ ನಲ್ಲಿ ಸುಮಾರು 3,000 ಯಾತ್ರಾರ್ಥಿಗಳಿರುವುದಾಗಿ ವರದಿ ತಿಳಿಸಿದೆ.
ಜೂನ್ 30ರಿಂದ ಅಮರನಾಥ ಯಾತ್ರೆ ಆರಂಭಗೊಂಡಿತ್ತು. ಈಗಾಗಲೇ 65,000ಕ್ಕೂ ಅಧಿಕ ಯಾತ್ರಾರ್ಥಿಗಳು ಶಿವಲಿಂಗ ದರ್ಶನ ಪಡೆದಿದ್ದಾರೆ. ಆಗಸ್ಟ್ 11ರಂದು ಅಮರನಾಥ ಯಾತ್ರೆ ಮುಕ್ತಾಯವಾಗಲಿದೆ.
2019ರ ಆಗಸ್ಟ್ 5ರಂದು ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಆರ್ಟಿಕಲ್ 370 ಅನ್ನು ರದ್ದುಗೊಳಿಸಿ, ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿತ್ತು. ಮುಂಜಾಗ್ರತಾ ಕ್ರಮವಾಗಿ ಯಾತ್ರಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಅಮರನಾಥ ಯಾತ್ರೆಯನ್ನು ಮಧ್ಯದಲ್ಲಿಯೇ ರದ್ದುಗೊಳಿಸಿ, ವಾಪಸ್ ಕಳುಹಿಸಲಾಗಿತ್ತು.