Advertisement

ಅಮರ್‌ ನನ್ನ ಪಾಲಿನ ಅದೃಷ್ಟ!

12:03 PM May 29, 2018 | Team Udayavani |

ಅಂಬರೀಶ್‌ ಪುತ್ರ ಅಭಿಷೇಕ್‌ ಅಭಿನಯದ “ಅಮರ್‌’ ಚಿತ್ರಕ್ಕೆ ಭರ್ಜರಿ ಚಾಲನೆ ಸಿಕ್ಕಿದೆ. ಇಂದು (ಮೇ.29) ಅಂಬರೀಶ್‌ ಅವರ ಹುಟ್ಟು ಹಬ್ಬ. ಈ ಸಂಭ್ರಮಕ್ಕೆ ಚಿತ್ರತಂಡ “ಅಮರ್‌’ ಚಿತ್ರದ ಒಂದು ಸಣ್ಣ ಟೀಸರ್‌ ಬಿಡುಗಡೆ ಮಾಡಲು ತುದಿಗಾಲ ಮೇಲೆ ನಿಂತಿದೆ. ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ಲವ್‌ಸ್ಟೋರಿ ಚಿತ್ರಗಳನ್ನು ನೀಡಿರುವ ನಿರ್ದೇಶಕ ನಾಗಶೇಖರ್‌, “ಅಮರ್‌’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

Advertisement

ನಿರ್ಮಾಪಕ ಸಂದೇಶ್‌ ನಾಗರಾಜ್‌ ಕೂಡ ಅಂಬರೀಶ್‌ ಅವರ ಪುತ್ರ ಅಭಿಷೇಕ್‌ ಅವರನ್ನು ಭರ್ಜರಿಯಾಗಿಯೇ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಲು ತೀರ್ಮಾನಿಸಿ, ಈಗಾಗಲೇ ಅದಕ್ಕೆ ಏನೆಲ್ಲಾ ಬೇಕೋ ಪಕ್ಕಾ ತಯಾರಿ ಮಾಡಿಕೊಂಡಿದ್ದಾರೆ. “ಅಮರ್‌’ ಚಿತ್ರವು ತಮ್ಮ ಪಾಲಿನ ಅದೃಷ್ಟ ಎನ್ನುವ ನಾಗೇಶಖರ್‌, “ಇದೊಂದು ಬ್ಯೂಟಿಫ‌ುಲ್‌ ಲವ್‌ಸ್ಟೋರಿ. ಇದುವರೆಗೆ ನಾನು ಮಾಡಿದ ಚಿತ್ರಗಳಿಗಿಂತಲೂ ತುಂಬಾನೇ ಇಷ್ಟವಾಗಿರುವ ಕಥೆ ಇದು.

“ಸಂಜು ವೆಡ್ಸ್‌ ಗೀತಾ’, “ಮೈನಾ’ ಚಿತ್ರಗಳನ್ನು ಮೀರಿಸುವಂತಹ ಸಿನಿಮಾ ಇದಾಗಲಿದೆ ಎಂಬ ಗ್ಯಾರಂಟಿ ಕೊಡ್ತೀನಿ. ಅದಕ್ಕಾಗಿಯೇ, ರಾತ್ರಿ-ಹಗಲು ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ. “ಅಮರ್‌’ ಒಂದು ಅದ್ಭುತ ಪ್ರೇಮ ದೃಶ್ಯಕಾವ್ಯ ಆಗಲಿದೆ. ಈಗಾಗಲೇ ಚಿತ್ರಕ್ಕೆ ಜೋರು ನಡೆಯುತ್ತಿದೆ. ಕಳೆದ ಎರಡು ವರ್ಷಗಳಿಂದ ಚಿತ್ರದ ಕಥೆ ರೆಡಿಮಾಡಿಕೊಂಡಿದ್ದೆ. ಆದರೆ, ಒಳ್ಳೆಯ ಕಥೆ ಅಂತನಿಸಿದ ಕೂಡಲೇ ಅಭಿಷೇಕ್‌ಗೆ ಸಿನಿಮಾ ಮಾಡುವಂತೆ ಅಂಬರೀಷಣ್ಣ ಸೂಚಿಸಿದರು.

ನಿಜಕ್ಕೂ ಇದು ನನ್ನ ಪಾಲಿಗೆ ಅದೃಷ್ಟ. ಎಂದಿನಂತೆ, ಈ ಚಿತ್ರಕ್ಕೂ ತುಂಬಾ ಶ್ರಮ ವಹಿಸಿ, ಮುತುವರ್ಜಿಯಿಂದ ಕಲೆಸ ಮಾಡುತ್ತೇನೆ. ನನಗೆ ಒಳ್ಳೆಯ ಕಥೆ ರೆಡಿಯಾಗಿದೆ. ಅದಕ್ಕೆ ತಕ್ಕಂತಹ ಸೂಪರ್‌ ಸ್ಟಾರ್‌ ಹೀರೋ ಕೂಡ ಸಿಕ್ಕಾಗಿದೆ. 6.4 ಅಡಿ ಎತ್ತರದ ಕಟೌಟ್‌ ಅಂದಮೇಲೆ, ಹೇಗೆಲ್ಲಾ ಇರುತ್ತೆ ಊಹಿಸಿಕೊಳ್ಳಿ? ಅಭಿಷೇಕ್‌ ಪಕ್ಕಾ ತಯಾರಿಯೊಂದಿಗೇ ಬಂದಿದ್ದಾರೆ. ನಟನೆ ಕಲಿತಿದ್ದಾರೆ.

ಡ್ಯಾನ್ಸ್‌ ಗೊತ್ತು, ವಿದ್ಯಾವಂತ ಹುಡುಗ ಕೂಡ, ಆ್ಯಕ್ಷನ್‌ನಲ್ಲೂ ಪಕ್ವಗೊಂಡಿದ್ದಾರೆ. ಒಬ್ಬ ನಟನಾಗಲು ಇವುಗಳಿಗಿಂತ ಬೇರೇನು ಬೇಕಿ ಹೇಳಿ? ನನ್ನ ಪ್ರತಿ ಸಿನಿಮಾದಲ್ಲೂ ಜೊತೆಗಿರುತಿದ್ದ ತಾಂತ್ರಿಕ ವರ್ಗ ಇಲ್ಲೂ ಕೆಲಸ ಮಾಡುತ್ತಿದೆ. ನನ್ನ ಎಲ್ಲಾ ಚಿತ್ರಗಳನ್ನೂ ಮೀರಿಸುವಂತಹ ಚಿತ್ರ ಇದಾಗಲಿದೆ. ಜೂನ್‌ ಅಥವಾ ಜುಲೈನಲ್ಲಿ ಚಿತ್ರೀಕರಣ ಶುರುವಾಗಲಿದೆ. ಮಳೆಯಲ್ಲೇ ಚಿತ್ರೀಕರಣ ಆಗಬೇಕು. ಹಾಗಾಗಿ ಅದಕ್ಕೀಗಾಗಲೇ ಪಕ್ಕಾ ತಯಾರಿ ಮಾಡಿಕೊಳ್ಳಲಾಗಿದೆ’ ಎಂಬುದು ನಾಗಶೇಖರ್‌ ಮಾತು.

Advertisement

ಇದೊಂದು ನವಿರಾದ ಲವ್‌ ಸ್ಟೋರಿ ಎನ್ನುವ ನಾಗಶೇಖರ್‌, “ಅದರ ಜೊತೆಗೆ ಕಮರ್ಷಿಯಲ್‌ ಅಂಶಗಳು ಸಹ ಇರುತ್ತವೆ. ವಿಶೇಷ ಆ್ಯಕ್ಷನ್‌ ಸಿನಿಮಾದ ಇನ್ನೊಂದು ಹೈಲೆಟ್‌. ಒಬ್ಬ ಮಿಡ್ಲ್ಕ್ಲಾಸ್‌ ಹುಡುಗನ ಬದುಕು, ಅವನ ನಿಷ್ಕಲ್ಮಷ ಪ್ರೀತಿ ಕುರಿತಾದ ಕಥೆ ಇಲ್ಲಿದೆ. ಸಾಮಾನ್ಯ ಹುಡುಗನ ಪ್ರೀತಿ ಉಳಿದುಕೊಳ್ಳೋದು ಕಷ್ಟ. ಆದರೆ, ಯಾಕೆ ಉಳಿಯುವುದಿಲ್ಲ ಅನ್ನೋದೇ ಚಿತ್ರದ ಪ್ಲಸ್‌ ಅಂಶ.

ಅದನ್ನು ಇಲ್ಲಿ ಬೇರೆ ರೀತಿಯಾಗಿ ಹೇಳುವ ಪ್ರಯತ್ನ ಮಾಡಿದ್ದೇನೆ. ಶ್ರೀಮಂತಿಕೆಯಿಂದ ಜನ ಕೆಲವರನ್ನು ಹೇಗೆಲ್ಲಾ ಅಳತೆ ಮಾಡುತ್ತಾರೆ ಎಂಬ ಸೂಕ್ಷ್ಮ ಅಂಶಗಳೂ ಇಲ್ಲಿವೆ. ಪ್ರೀತಿಗೆ ಯಾವುದೇ ಮಾನದಂಡ ಇರುವುದಿಲ್ಲ. ಶೀಮಂತಿಕೆ ಅನ್ನೋದು, ಕೇವಲ ಹಣ, ಸ್ಟೇಟಸ್‌ ಅಷ್ಟೇ ಮುಖ್ಯ ಆಗುತ್ತೆ. ಆದರೆ, ಪ್ರೀತಿಗೆ ಇದೊಂದೇ ಲೈಫ್ ಅಲ್ಲ, ಅದರಿಂದಾಚೆಗೆ ಬೇರೆ ಏನೋ ಇದೆ ಎಂಬುದನ್ನಿಲ್ಲಿ ಹೇಳುತ್ತಿದ್ದೇನೆ.

ಇಲ್ಲಿ ಅಭಿಷೇಕ್‌ ಅವರು ಅಂಬರೀಶ್‌ ಮಗ ಅನ್ನುವುದಕ್ಕಿಂತ ಹೆಚ್ಚಾಗಿ, ಅವರು ನನ್ನ ಚಿತ್ರದ ಹೀರೋ. ಈ “ಅಮರ್‌’ ಸಿನಿಮಾ ಮೂಲಕ ಅವರು ಗಟ್ಟಿ ನೆಲೆಯೂರಬೇಕು. ನನಗೆ ಇದು ಮೊದಲನೆಯ ಚಿತ್ರ ಇದ್ದಂತೆ. ಪ್ರತಿ ಸಿನಿಮಾದಲ್ಲೂ ಹೊಸತನ್ನು ಕಲಿಯುತ್ತಲೇ ಇರುತ್ತೇನೆ. ಇಲ್ಲೂ ಹೊಸ ಅಂಶಗಳಿವೆ. ನನ್ನದೇ ಆದಂತಹ ಕೆಲವು ಆಶಯಗಳಿವೆ. ಅವು ಈ ಚಿತ್ರದ ಮೂಲಕ ಈಡೇರುತ್ತವೆ ಎಂದು ನಂಬಿದ್ದೇನೆ.

ಚಿತ್ರ ಗೆದ್ದರೆ, ಇಲ್ಲಿ ಎಲ್ಲರೂ ಗೆದ್ದಂತೆ. ಎಲ್ಲರಿಗೂ “ಅಮರ್‌’ ಚಿತ್ರದ ಮೇಲೆ ಹೆಚ್ಚು ನಿರೀಕ್ಷೆ ಇದ್ದೇ ಇರುತ್ತೆ. ಅಭಿಷೇಕ್‌ ಅವರ ಮೊದಲ ಸಿನಿಮಾ ಆಗಿರುವುದರಿಂದ ಹೇಗೆ ಮಾಡುತ್ತಾರೋ ಏನೋ ಎಂಬ ಕುತೂಹಲವೂ ಇರುತ್ತೆ. ಅವೆಲ್ಲದ್ದಕ್ಕೂ “ಅಮರ್‌’ ಪಕ್ಕಾ ಉತ್ತರ ಕೊಡಲಿದ್ದಾರೆ. ನಾನು ಕಥೆಯನ್ನು ನಂಬಿದವನು. ಅಂಬರೀಶಣ್ಣ ಕೂಡ, ಒಳ್ಳೆಯ ಕಥೆಯನ್ನು ನಂಬಿದವರು. ಬಿಲ್ಡಪ್‌ಗ್ಳಿಲ್ಲದೆ, ಕಥೆ ಇಟ್ಟುಕೊಂಡು ಚಿತ್ರ ಮಾಡ್ತಾನೆ ಅಂತ ನನ್ನ ಮೇಲೆ ನಂಬಿಕೆ ಇಟ್ಟು, ಸಿನಿಮಾ ಮಾಡುವಂತೆ ಗ್ರೀನ್‌ಸಿಗ್ನಲ್‌ ಕೊಟ್ಟಿದ್ದಾರೆ.

ಅವರ ವಿಶ್ವಾಸ ಉಳಿಸಿಕೊಳ್ಳುವ ಜವಾಬ್ದಾರಿ ನನ್ನದು’ ಎನ್ನುತ್ತಾರೆ ನಾಗಶೇಖರ್‌. 50ನೇ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುವಂತಹ ಕಥೆಯನ್ನು ಮೊದಲ ಸಿನಿಮಾಗೆ ಆಯ್ಕೆ ಮಾಡಿಕೊಂಡಿದ್ದಾರೆ ಅಭಿಷೇಕ್‌ ಎನ್ನುತ್ತಾರೆ ನಾಗಶೇಖರ್‌. “ಅವರು ಹಲವು ಕಥೆಗಳನ್ನು ಕೇಳಿರುವುದುಂಟು. ಆದರೆ, ಈ ಕಥೆ ಕೇಳಿದಾಗ, 50 ನೇ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುವಂತಹ ಕಥೆಯನ್ನು ಮೊದಲ ಸಿನಿಮಾಗೆ ಆಯ್ಕೆ ಮಾಡಿಕೊಂಡಿದ್ದಾರೆ.

ಅವರಿಗೆ ಈಗಾಗಲೇ ಫೋಟೋ ಶೂಟ್‌ ಮಾಡಿಸಲಾಗಿದೆ. ಫೋಟೋ ಶೂಟ್‌ ಮಾಡುವ ಸಂದರ್ಭದಲ್ಲಿ, ಅಭಿಷೇಕ್‌ನ ಮೊದಲ ಫೋಟೋ ತೆಗೆದ ಭುವನ್‌ ಗೌಡ, “ವಾಟ್‌ ಎ ಹೀರೋ’ ಎಂದರು. ಅದನ್ನು ಕೇಳಿ ಇನ್ನಷ್ಟು ವಿಶ್ವಾಸ ಬಂದಿದೆ. ಟ್ರಯಲ್‌ಶೂಟ್‌ ಕೂಡ ಮಾಡಲಾಗಿದೆ. ನನಗಂತೂ ಸೂಪರ್‌ಸ್ಟಾರ್‌ ನಟನೊಬ್ಬನ ಚಿತ್ರ ಮಾಡುತ್ತಿದ್ದೇನೇನೋ ಎಂಬ ಭಾವನೆ ಬರುತ್ತಿದೆ.

ಅಭಿಷೇಕ್‌ ಬಗ್ಗೆ ಹೇಳುವುದಾದರೆ, ಅವರು, ತುಂಬಾನೇ ಡೆಡಿಕೇಟೆಡ್‌. ಏನೇ ಹೇಳಿದರೂ, ಮಾಡ್ತೀನಿ ಅಂತಾರೆ. ನಿರ್ದೇಶಕನಾದವನಿಗೂ ಅದೇ ಬೇಕು. ನಾನೊಬ್ಬ ಶ್ರೀಮಂತನ ಮಗ ಅಥವಾ ಅಂಬರೀಶ್‌ ಅವರ ಪುತ್ರ ಎಂಬುದು ಅಭಿಷೇಕ್‌ ಅವರ ತಲೆಯಲ್ಲಿಲ್ಲ. ನಾನೊಬ್ಬ ನಟ, ನಿರ್ದೇಶಕ ಏನು ಹೇಳಿದರೂ ಮಾಡಬೇಕು. ಈ ಸಿನಿಮಾ ಮೂಲಕ ಗೆಲ್ಲಬೇಕು ಅದಷ್ಟೇ ನನ್ನ ಕೆಲಸ’ ಎಂದು ಖುಷಿಪಡುತ್ತಾರೆ ನಾಗಶೇಖರ್‌.

Advertisement

Udayavani is now on Telegram. Click here to join our channel and stay updated with the latest news.

Next