Advertisement

ಮುದ್ರಣ ಮಾಧ್ಯಮದ ಕ್ಷಿಪ್ರ ಬದಲಾವಣೆ ಸ್ವೀಕರಿಸಲು ಸದಾ ಸಿದ್ಧ

02:52 PM Nov 01, 2017 | Team Udayavani |

ಮಣಿಪಾಲ: ಮಾಹಿತಿ ಮತ್ತು ತಂತ್ರಜ್ಞಾನದ ಕ್ಷಣ ಕ್ಷಣದ ಆವಿಷ್ಕಾರಗಳು ಮುದ್ರಣ ಕ್ಷೇತ್ರಕ್ಕೆ ಹೊಸ ಸವಾಲುಗಳನ್ನು ಒಡ್ಡುತ್ತಿವೆ. ಆದರೆ ಮುದ್ರಣ ತಂತ್ರಜ್ಞಾನ ದಲ್ಲಿ ಅಪಾರ ಅನುಭವ ಹೊಂದಿರುವ ನಮ್ಮ ಸಂಸ್ಥೆ ತೀವ್ರವಾಗಿ ಪ್ರತಿ ಸ್ಪಂದಿಸುತ್ತಿದೆ ಎಂದು ಮಣಿಪಾಲ
ಮೀಡಿಯಾ ನೆಟ್‌ವರ್ಕ್‌ ಲಿಮಿಟೆಡ್‌ನ‌ ಆಡಳಿತ ನಿರ್ದೇಶಕ ಟಿ. ಸತೀಶ್‌ ಯು. ಪೈ ಹೇಳಿದರು.

Advertisement

ಅವರು ಮಂಗಳವಾರ ಮಣಿಪಾಲ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯ ಸ್ವರ್ಣ ಸಂಭ್ರಮದ ಸರಣಿ ಕಾರ್ಯಕ್ರಮ ಅಂಗವಾಗಿ ಆಯೋಜಿಸಲಾಗಿದ ರಾಷ್ಟ್ರೀಯ ಕಿರುಚಿತ್ರ ನಿರ್ಮಾಣ ಸ್ಪರ್ಧೆ “ಚಲಚಿತ್ರ 2017′ ಉದ್ಘಾಟಿಸಿ ಮಾತನಾಡಿದರು. ಮುದ್ರಣ ಮಾತ್ರವಲ್ಲ ಎಲೆಕ್ಟ್ರಾನಿಕ್‌ ಮಾಧ್ಯಮದಲ್ಲೂ ವಿಶೇಷ ಪರಿಣತಿ ಸಾಧಿಸುವಲ್ಲಿ “ಉದಯವಾಣಿ’ ಮತ್ತು ಅದರ ಬಳಗದ ಪತ್ರಿಕೆಗಳು ವಿಶ್ವದಾದ್ಯಂತ ಪ್ರಸಿದ್ಧಿ ಪಡೆಯುತ್ತಿವೆ. ಅದಕ್ಕೆ ನೂತನ  ತಂತ್ರಜ್ಞಾನವೇ ಕಾರಣ ಎಂದು ಅವರು ವಿಶ್ಲೇಷಿಸಿದರು.

ಚಾರ್ಲಿ ಚಾಪ್ಲಿನ್‌…
ಚಲನ ಚಿತ್ರ ಜಗತ್ತಿನಲ್ಲಿ ಚಾರ್ಲಿ ಚಾಪ್ಲಿನ್‌ ಸಿನೆಮಾಗಳು ಗಾಢವಾದ ಪರಿಣಾಮ ಬೀರಿವೆ. ಕಾಲಾಂತರದಲ್ಲಿ ದೈವಿಕ, ಪೌರಾಣಿಕ, ತಂದೆ ಮಕ್ಕಳ ಸಂಬಂಧ, ಮಾತೃ ವಾತ್ಸಲ್ಯ, ಅವಳಿ ಜವಳಿ ಮಕ್ಕಳ ಕಥೆಗಳು ಹೊಸದಾಗಿ ಆರಂಭಗೊಂಡು ವೀಕ್ಷಕರ ಮನಸೂರೆಗೊಂಡಿವೆ ಎಂದು ಮಣಿಪಾಲದ ಗಾಂಧಿ ಮತ್ತು ಶಾಂತಿ ಪೀಠದ ನಿರ್ದೇಶಕ ವರದೇಶ್‌ ಹಿರೇಗಂಗೆ ಶಿಖರೋಪನ್ಯಾಸದಲ್ಲಿ ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಎಂಐಟಿ ನಿರ್ದೇಶಕ ಡಾ| ಜಿ.ಕೆ. ಪ್ರಭು ಮಾತನಾಡಿ, ಕೇವಲ ವಿಜ್ಞಾನ ಮತ್ತು ತಂತ್ರಜ್ಞಾನ ಕಲಿಕೆಗೆ ಸೀಮಿತ ವಾಗದ ತಮ್ಮ ಕಾಲೇಜು ಇಂತಹ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂದರು. 

ಕಿರು ಚಿತ್ರಗಳಿಗೇ ಭಾರೀ ಬೇಡಿಕೆ : ಗೌತಮ್‌ ಪೈ
ಸುಮಾರು 3-4 ಗಂಟೆಗಳ ಕಾಲ ಕುಳಿತು ಚಲನಚಿತ್ರ ವೀಕ್ಷಿಸುವ ಕಾಲ ಸರಿದಿದೆ. ಇಂದು ಏನಿದ್ದರೂ ಕಿರು ಚಿತ್ರಗಳ ಲೋಕ. ಹಾಗಾಗಿ ವಿದ್ಯಾರ್ಥಿಗಳು ಕಿರುಚಿತ್ರಗಳ ನಿರ್ಮಾಣದತ್ತ ಹೆಚ್ಚು ಆಸಕ್ತಿ ತೋರಬೇಕು ಎಂದು ಮಣಿಪಾಲ ಟೆಕ್ನಾಲಜೀಸ್‌ನ ಆಡಳಿತ ನಿರ್ದೇಶಕ ಟಿ. ಗೌತಮ್‌ ಪೈ ಸಮಾರೋಪ ಸಮಾರಂಭದಲ್ಲಿ ಹೇಳಿದರು. ಸ್ಕೂಲ್‌ ಆಫ್ ಕಮ್ಯುನಿಕೇಶನ್ನಿನ ಜತೆ ನಿರ್ದೇಶಕರಾದ ಡಾ| ಪದ್ಮಾರಾಣಿ, ಚಲನ ಚಿತ್ರನಿರ್ದೇಶಕ ಹಾಗೂ ನಿರ್ಮಾಪಕ ಸುಹಾನ್‌ ಪ್ರಸಾದ್‌ ಹಾಗೂ ನಟ, ನಿರ್ದೇಶಕ ಹಾಗೂ ಬರಹಗಾರ ರಾಜ್‌ ಬಿ. ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

ಮಣಿಪಾಲ ವಿ.ವಿ. ಕುಲಸಚಿವ ಡಾ| ನಾರಾಯಣ ಸಭಾಹಿತ್‌, ಡಾ| ಬಿ.ಎಚ್‌.ವಿ. ಪೈ ಉಪಸ್ಥಿತರಿದ್ದರು. ಎಂಐಟಿಯ ನಿತೀಶ್‌ ಕುಮಾರ್‌ ಪ್ರಸ್ತಾವನೆಗೈದರು. ಡಾ| ಅಮೃತರಾಜ್‌ ಎಚ್‌. ಕೃಷ್ಣನ್‌ ಸ್ವಾಗತಿಸಿದರು. ಸೌಮ್ಯಾ ಅವಸ್ಥಿ, ಸಾಗರಿಕಾ ಶೆಟ್ಟಿ, ವೈಭವಿ ಮಿಶ್ರಾ ಅತಿಥಿಗಳನ್ನು ಪರಿಚಯಿಸಿದರು. ಅನ್ಯುಲ್‌ ಕುರಕುಂಜಿ, ತನಿಷ್ಕ್ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next