ಮನುಷ್ಯನು ಜೀವನದಲ್ಲಿ ಖುಷಿಯಾಗಿರುವುದನ್ನೇ ಇಷ್ಟ ಪಡುತ್ತಾನೆ. ಅಚಾನಕ್ಕಾಗಿ ಏನಾದರೂ ಸಹಿಸಲು ಸಾಧ್ಯವಾಗದಂತಹ ತೊಂದರೆ ಅಥವಾ ಸಮಸ್ಯೆ ಬಂದಲ್ಲಿ ತತ್‌ಕ್ಷಣ ಅದರಿಂದ ವಿಚಲಿತನಾಗಿ ಅದರಿಂದ ಹೊರಬರಲು ಪ್ರಯತ್ನಿಸುತ್ತಾನೆ. ಆದರೆ ಅದೇ ಸಮಸ್ಯೆ ತೀರಾ ನಿಧಾನಗತಿಯಲ್ಲಿ ಬಂದಾಗ ಆತ ಸಮಸ್ಯೆಯಿಂದ ಹೊಬರಲು ಪ್ರಯತ್ನಿಸದೇ ಆ ಸಮಸ್ಯೆಗೆ ನಿಧಾನವಾಗಿ ಹೊಂದಿಕೊಡು ಹೋಗಿ ಕೊನೆಗೊಂದು ದಿನ ಆ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಂಡು ಅದರಲ್ಲೇ ತನ್ನ ಪ್ರಾಣವನ್ನು ಬಿಡುತ್ತಾನೆ. ಇದಕ್ಕೆ ಉದಾಹರಣೆಯಾಗಿ ಕಥೆಯೊಂದಿದೆ.
ಒಂದು ಜೀವಂತ ಕಪ್ಪೆಯನ್ನು ಇದ್ದಕ್ಕಿದ್ದಂತೆ ಕೊತ ಕೊತ ಕುದಿಯುತ್ತಿರುವ ನೀರಿಗೆ ಹಾಕಿದರೆ ಅದು ತತ್‌ಕ್ಷಣವೇ ಅದರಿಂದ ಹಾರಿ ಹೊರಗೆ ಹೋಗುತ್ತದೆ ಅಥವಾ ನೀರು ತೀರಾ ಬಿಸಿಯಾಗಿದ್ದರೆ ಅದರಿಂದ ಹೊರಬರಲು ಪ್ರಯತ್ನಿಸಿ ವಿಫಲವಾಗಿ ಅಲ್ಲೇ ಸಾಯುತ್ತದೆ. ಆದರೆ ಅದೇ ಕಪ್ಪೆಯನ್ನು ಶುದ್ಧವಾದ ಮತ್ತು ತಣ್ಣನೆಯ ನೀರಿರುವ ಪಾತ್ರೆಯಲ್ಲಿ ಹಾಕಿದರೆ ಅದು ಅದರೊ ಳಗೆಯೇ ಹಾಯಾಗಿ ಇರುತ್ತದೆ. ಯಾಕೆಂದರೆ ಕಪ್ಪೆಯ ಅವಸ ಸ್ಥಾನ ನೀರು, ನೆಲವಾದ್ದರಿಂದ ಅಲ್ಲಿ ಖುಷಿಯಾಗಿ ಇರುತ್ತದೆ.
ಈಗ ಅದೇ ನೀರಿನ ಪಾತ್ರೆಯನ್ನು ಬೆಂಕಿಯಲ್ಲಿಟ್ಟು ನಿಧಾನವಾಗಿ ಕುದಿಸಿದರೆ ಅದು ತತ್‌ಕ್ಷಣಕ್ಕೆ ಹಾರಿ ಹೋಗುವುದಿಲ್ಲ. ಅದು ತನಗೆ ಬಂದೊದಗಿರುವ ಅಪಾಯವನ್ನು ತತ್‌ಕ್ಷಣಕ್ಕೆ ಗ್ರಹಿಸುವುದಿಲ್ಲ ಮತ್ತು ನೀರಿನ ಬಿಸಿಗೆ ನಿಧಾನವಾಗಿ ಹೊಂದಿ ಕೊಳ್ಳುತ್ತಾ ಹೋಗುತ್ತದೆ. ಅದೇ ನೀರು ಇನ್ನಷ್ಟು ಬಿಸಿಯಾಗುತ್ತಾ ಹೋಗಿ ಕುದಿಯುವ ಬಿಂದು ತಲುಪಿದಾಗಲೂ ಕಪ್ಪೆಯ ಹೊಂದಿಕೊಡು ಹೋಗುವ ಮನಃಸ್ಥಿತಿಯ ಕಾರಣದಿಂದ ತನ್ನ ಪ್ರಾಣಕ್ಕೆ ಅಪಾಯ ಇದೆ ಎನ್ನುವುದು ಅದಕ್ಕೆ ಅರಿವಾದಾಗ ಕೊನೆಯ ಕ್ಷಣದಲ್ಲಿ ಪಾತ್ರೆಯಿಂದ ಹೊರಕ್ಕೆ ಬರಲಾರದೇ ಅಲ್ಲೇ ಉಳಿದು ಸಾಯುತ್ತದೆ. ಏಕೆಂದರೆ ಕಪ್ಪೆಯು ತಾನಿರುವ ತಣ್ಣನೆಯ ನೀರಿನ ಪಾತ್ರೆಯು ನಿಧಾನವಾಗಿ ಬಿಸಿ ಆಗುತ್ತಿದೆ, ಇದು ಮುಂದಕ್ಕೆ ತನ್ನ ಜೀವಕ್ಕೆ ಗಂಡಾತರ ಬರುತ್ತದೆ ಎನ್ನುವುದನ್ನು ಪ್ರಾರಂಭದಲ್ಲೇ ಗ್ರಹಿಸುವುದಿಲ್ಲ.
ಮನುಷ್ಯನೂ ಸದಾ ಕಪ್ಪೆಯ ಮನಸ್ಥಿತಿಯ ರೀತಿಯಲ್ಲೇ ಎಲ್ಲ ಪರಿಸ್ಥಿತಿಗಳಲ್ಲೂ ಹಾಯಾ ಗಿಯೇ ಇರುತ್ತಾನೆ. ವಿವಿಧ ಹಂತಗಳಲ್ಲಿ ತನ್ನತ್ತ ನಿಧಾನವಾಗಿ ಬರುತ್ತಿರುವ ಬಹುದೊಡ್ಡ ಗಂಡಾಂತರಗಳನ್ನು ಪ್ರಾರಂಭಿಕ ಹಂತದಲ್ಲೇ ಗುರುತಿಸುವಲ್ಲಿ ವಿಫಲನಾಗಿ ಆ ಸಮಸ್ಯೆಯು ಬೃಹದಾಕಾರಕ್ಕೆ ಬೆಳೆದು ಅದು ಆತನ ಜೀವಕ್ಕೇ ಅಥವಾ ಆತನ ವ್ಯವಸ್ಥೆಗೇ ಕುತ್ತಾಗುತ್ತದೆ.
ಆದರೆ ಅದೇ ಸಮಸ್ಯೆಯನ್ನು ಸಮಸ್ಯೆ ಉದ್ಭವವಾಗುವ ಪ್ರಾರಂಭಿಕ ಹಂತದಲ್ಲೇ ಗುರುತಿಸಿ ಅದರಿಂದ ಹೊರಬರಲು ಪ್ರಯತ್ನಿಸಿದಾತ ಅಥವಾ ಪರಿಹರಿಸಿಕೊಂಡಾತ ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಸಾಯಲಾರ. ಕಪ್ಪೆಯ ಕಥೆಯಂತೆ ಸಮಸ್ಯೆಯು ಬಂದಿದೆ ಆದರೆ ಅದು ಗಂಭೀರವಲ್ಲ ಎನ್ನುವ ಮನಃಸ್ಥಿತಿಗೆ ಯಾವಾಗ ಬಂದು ಬಿಡುತ್ತೇವೋ ಅಂತಹ ಸಂದರ್ಭದಲ್ಲಿ ಸಮಸ್ಯೆ ಗಂಭೀರ ಸ್ಥಿತಿಗೆ ತಲುಪಿ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಲು ಆಗದೆ ಅದರೊಳಗೇ ಸಿಲುಕಿ ಸಾಯುವ ಪರಿಸ್ಥಿತಿ ಬರುತ್ತದೆ. ಕುದಿಯುವ ನೀರಿ ನಲ್ಲಿ ಇರುವ ಕಪ್ಪೆಯ ಸ್ಥಿತಿಯ ಕಥೆಯನ್ನು ಸಾಮಾನ್ಯವಾಗಿ ಮನುಷ್ಯನ ಜೀವನದಲ್ಲಿ ಬಂದೊದಗುವ ವಿವಿಧ ಸನ್ನಿವೇಷಗಳು ಮತ್ತು ಅವುಗಳನ್ನು ಎದುರಿಸುವ ಗುಣಕ್ಕೆ ಉದಾಹರಣೆಯಾಗಿದೆ.
ಸಮಸ್ಯೆಗಳಿಗೆ ಹೊಂದಿಕೊಡು ಸಾಗುವಂತಹ ಗುಣವು ಅಭಿವೃದ್ಧಿಯ ಪಥದೆಡೆಗೆ ಸಾಗುವ ಮನೋಭಾವ ಇರುವ ವ್ಯಕ್ತಿಯ ದೃಷ್ಟಿಯಿಂದ ಒಳ್ಳೆಯದಲ್ಲ. ಸಮಸ್ಯೆ ಬರಬಹುದು ಎಂಬ ಸುಳಿವು ದೊರೆತ ತತ್‌ಕ್ಷಣ ಅದನ್ನು ಗುರುತಿಸಿ ಪರಿಹಾರ ಮಾಡಿಕೊಂಡರೆ ಬಾಳು ಬಂಗಾರ ಆಗುತ್ತದೆ. ನಿಧಾನವಾಗಿ ಬರುವ ಅಪಾಯಗಳಿಗೆ ಹೊಂದಿಕೊಡು ಹೋಗುವ ಗುಣವು ನಮ್ಮಲ್ಲೂ ಇದ್ದು, ನಿಧಾನವಾಗಿ ನಮ್ಮ ಅರಿವಿಗೇ ಬಾರದಂತೆ ಆಗುವ ಬದಲಾವಣೆಗಳಿಂದ ಅನಪೇಕ್ಷಿತ ಪರಿಣಾಮಗಳು ಆಗದಂತೆ ಎಚ್ಚರದಿಂದರಬೇಕು.
ಸಂತೋಷ್ ರಾವ್ ಪೆರ್ಮುಡ
ಬೆಳ್ತಂಗಡಿ