ಮೂಡುಬಿದಿರೆ: ರಾಷ್ಟ್ರೀಯ ಯುವಜನೋತ್ಸವದ ಅಂಗವಾಗಿ ರಾಜ್ಯ ಸರಕಾರದ ನಿರ್ದೇಶನದಂತೆ ದ.ಕ. ಜಿಲ್ಲಾಡಳಿತ, ಜಿ.ಪಂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಗಿನ್ನೆಸ್ ದಾಖಲೆಗಾಗಿ ಯೋಗಥಾನ್ ಅನ್ನು ವಿದ್ಯಾಗಿರಿಯ ಪುತ್ತಿಗೆ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ರವಿವಾರ ಆಯೋಜಿಸಲಾಗಿತ್ತು.
ಯೋಗದ ಪ್ರಾಮುಖ್ಯವನ್ನು ಸಾರುವ ವಿಶಿಷ್ಟವಾದ ಉತ್ಸವವನ್ನು ಕರ್ನಾಟಕದಲ್ಲಿ “ಯೋಗಥಾನ್’ ಮೂಲಕ ಆಯೋಜಿಸುತ್ತಿರುವುದು ಸಂತೋಷದ ವಿಷಯ ಎಂದು ದ. ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ ಆರ್. ತಿಳಿಸಿದರು.
ಪ್ರಾಣಾಯಾಮದ ಜತೆಗೆ ಹಲವು ಆಸನಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಆಳ್ವಾಸ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಕಾಲೇಜಿನ ವಿದ್ಯಾರ್ಥಿ ಅನಂತ ಕೃಷ್ಣ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಮುಕ್ಕಾಲು ತಾಸು ನಡೆದ ಯೋಗಥಾನ್ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳು ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಸೇರಿದಂತೆ 27,632 ಜನರು ಪಾಲ್ಗೊಂಡರು.
ಶಾಸಕ ಉಮಾನಾಥ ಕೋಟ್ಯಾನ್, ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ, ಜಿ.ಪಂ. ಸಿಇಒ ಡಾ| ಕುಮಾರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ.ಮೋಹನ ಆಳ್ವ, ಯುವಜನ ಮತ್ತು ನಾಗರಿಕ ಸೇವಾ ಇಲಾಖೆಯ ಸಹ ನಿರ್ದೇಶಕ ರವಿ ನಾಯ್ಕ, ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್, ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ನ್ಯಾಚುರೋಪಥಿ ಕಾಲೇಜಿನ ಪ್ರಾಚಾರ್ಯೆ ಡಾ| ವನಿತಾ ಶೆಟ್ಟಿ ಉಪಸ್ಥಿತರಿದ್ದರು. ಆಳ್ವಾಸ್ ಪ.ಪೂ. ಕಾಲೇಜಿನ ಇಂಗ್ಲಿಷ್ ಉಪನ್ಯಾಸಕ ರಾಜೇಶ್ ಕಾರ್ಯಕ್ರಮ ನಿರೂ ಪಿಸಿದರು.