Advertisement
ಕ್ಷೇತ್ರ ಪುನರ್‌ವಿಂಗಡಣೆ ಪರಿಣಾಮ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ವಿಜಯಪುರ ಲೋಕ ಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಎಂಟು ವಿಧಾನಸಭೆ ಕ್ಷೇತ್ರಗಳಿವೆ. ಕಾಂಗ್ರೆಸ್ ಆರು ಶಾಸಕರನ್ನು ಹೊಂದಿದ್ದರೆ, ಚುನಾವಣೆ ಪೂರ್ವ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಹಾಗೂ ಜೆಡಿಎಸ್ ತಲಾ ಒಬ್ಬರು ಶಾಸಕರನ್ನು ಹೊಂದಿವೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ತಲಾ 3 ಹಾಗೂ ಜೆಡಿಎಸ್ 2 ಸ್ಥಾನಗಳನ್ನುಹೊಂದಿತ್ತು.
1952ರಿಂದ 2019ರ ವರೆಗೆ ಒಟ್ಟು 17 ಚುನಾವಣೆ ಎದುರಿಸಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಎಂಟು ಬಾರಿ ಗೆದ್ದಿದೆ. ಬಿಜೆಪಿ ಐದು ಸಲ ಜಯ ಗಳಿಸಿದೆ. ಜನತಾ ಪರಿವಾರ ಎರಡು ಬಾರಿ ಗೆದ್ದಿದೆ. ಸ್ವತಂತ್ರವಾಗಿಯೂ ಇಬ್ಬರು ಗೆದ್ದಿರುವ ದಾಖಲೆ ಈ ಕ್ಷೇತ್ರದಲ್ಲಿದೆ. ನೆಹರೂ-ಗಾಂ ಧಿ ಕುಟುಂಬದ ಒಡನಾಡಿ ರಾಜರಾಮ ಗಿರಿಧರಲಾಲ್ ದುಬೆ ಮೂಲಕ 1952ರಲ್ಲಿ ಮೊದಲ ಚುನಾವಣೆ ಗೆದ್ದಿದ್ದ ಕಾಂಗ್ರೆಸ್ ಅನಂತರ 1957ರಲ್ಲಿ ನಡೆದ ಚುನಾವಣೆಯಲ್ಲಿ ಸ್ವತಂತ್ರ ಪಕ್ಷದ ಮುರಿಗೆಪ್ಪ ಸಿದ್ದಪ್ಪ ಸುಗಂಧಿ ಅವರಿಗೆ ಮಣೆ ಹಾಕಿತ್ತು. 1962ರಲ್ಲಿ ನಡೆದ ಚುನಾವಣೆಯಲ್ಲಿ ರಾಜರಾಮ ದುಬೆ ಮತ್ತೂಮ್ಮೆ ಆಯ್ಕೆಯಾಗಿದ್ದರು. 1984ರಲ್ಲಿ ಜನತಾ ಪಕ್ಷದ ಶಿವಶಂಕರಪ್ಪ ಗುರಡ್ಡಿ ಗೆದ್ದಿದ್ದರೆ, 1989, 1991ರ ಎರಡೂ ಚುನಾವಣೆಯಲ್ಲಿ ಬಿ.ಕೆ.ಗುಡದಿನ್ನಿ ಎಂದೇ ಖ್ಯಾತರಾಗಿದ್ದ ಕಾಂಗ್ರೆಸ್ ಪಕ್ಷದ ಬಸಗೊಂಡಪ್ಪ ಆಯ್ಕೆಯಾಗಿದ್ದರು. 1996ರಲ್ಲಿ ಕನಮಡಿ ಬಸನಗೌಡ ರುದ್ರಗೌಡ ಪಾಟೀಲ್ ಜನತಾದಳ ದಿಂದ ಗೆದ್ದಾಗ ಎದುರಾಳಿ ಆಗಿದ್ದವರು ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್. ಮಾಜಿ ಕ್ರಿಕೆಟಿಗ ಪ್ರಕಾಶ ರಾಠೊಡ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು.
Related Articles
Advertisement
ಕ್ಷೇತ್ರಗಳ ಮರು ವಿಂಗಡಣೆ ಪರಿಣಾಮ ಪರಿಶಿಷ್ಟ ಜಾತಿಗೆ ಮೀಸಲಾದ ಈ ಕ್ಷೇತ್ರದಿಂದ 2009, 2014, 2019 ಹೀಗೆ ಸತತ ಮೂರು ಬಾರಿ ರಮೇಶ ಜಿಗಜಿಣಗಿ ಗೆದ್ದಿದ್ದು, ಈ ಮೂಲಕ ಬಿಜೆಪಿ ಸತತ ಐದನೇ ಬಾರಿಗೆ ಗೆಲುವು ದಾಖಲಿಸಿಕೊಂಡಿದೆ. ಚಿಕ್ಕೋಡಿ ಕ್ಷೇತ್ರದಲ್ಲಿ ಸತತ ಮೂರು ಬಾರಿ ಗೆದ್ದಿದ್ದ ರಮೇಶ ಜಿಗಜಿಣಗಿ, ವಿಜಯಪುರ ಕ್ಷೇತ್ರದಿಂದ ಆಯ್ಕೆಯಾದಾಗ ಬಿಜೆಪಿ ಹಾಗೂ ನರೇಂದ್ರ ಮೋದಿ ನೇತೃತ್ವದ ಮೊದಲ ಸರಕಾರದಲ್ಲಿ ಗ್ರಾಮೀಣ ಕುಡಿಯುವ ನೀರು ಖಾತೆ ಸಚಿವರಾಗಿದ್ದರು. ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕಾರಣ ವಿಜಯಪುರ ಕ್ಷೇತ್ರದಲ್ಲಿ ಮೇಲ್ವರ್ಗದ ಮತಗಳೇ ನಿರ್ಣಾಯಕ. ದಲಿತ ಸಮುದಾಯದ ರಮೇಶ ಜಿಗಜಿಣಗಿ ಅವರು ಬಂಜಾರಾ ಸಮುದಾಯದ ಪ್ರಕಾಶ ರಾಠೊಡ್ ಅವರನ್ನು ಎರಡು ಬಾರಿ, ಸುನಿತಾ ಚೌವ್ಹಾಣ್ ಅವರನ್ನು ಒಂದು ಬಾರಿ ಸೋಲಿಸಿರುವುದು ವಿಶೇಷ.
-ಜಿ.ಎಸ್. ಕಮತರ