ಬೆಂಗಳೂರು: ನಗರದಲ್ಲಿ ಕೋವಿಡ್ 19 ಸೋಂಕಿನ ಲಕ್ಷಣಗಳಿಲ್ಲದ ಸೋಂಕಿತರಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಬಿಬಿಎಂಪಿಯು ಏಳು ಕೋವಿಡ್ 19 ಕೇರ್ ಸೆಂಟರ್ ಗುರುತಿಸಲಾಗಿದ್ದು, ಮೂರು ಕೇಂದ್ರಗಳು ಸೋಂಕಿತರಿಗೆ ಮುಕ್ತವಾಗಿವೆ. ಬುಧವಾರದಿಂದ ಇಲ್ಲಿ ಸೋಂಕಿತರಿಗೆ ಆರೈಕೆ ಮಾಡಲಾಗುತ್ತಿದೆ. ಥಣಿಸಂದ್ರದ ಹಜ್‌ಭವನದಲ್ಲಿ 400 ಹಾಗೂ ಕನಕಪುರ ರಸ್ತೆ ಮಾರ್ಗದ ರವಿಶಂಕರ ಆರ್ಯುವೇದ ಆಸ್ಪತ್ರೆಗಳಲ್ಲಿ 400 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ.
ಕೆಂಗೇರಿ ಜ್ಞಾನಭಾರತಿ ಬಡಾವಣೆಯ ಮೆಡ್ ಸೋಲ್ ಆಸ್ಪತ್ರೆಯಲ್ಲಿ 200 ಜನ ಸೋಂಕಿತರ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕೋವಿಡ್ -19 ಆರೈಕೆ ಕೇಂದ್ರಗಳ ಕಾರ್ಯ ತಂಡದ ಮುಖ್ಯಸ್ಥ ರಾಜೇಂದರ್ ಕುಮಾರ್ ಕಟಾರಿಯಾ ತಿಳಿಸಿದ್ದಾರೆ. ನಗರದಲ್ಲಿನ ಏಳು ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿ ನಿಲಯಗಳ ಕೊಠಡಿಗಳನ್ನು ಮುಂದಿನ ದಿನಗಳಲ್ಲಿ ಸೋಂಕಿತರ ಚಿಕಿತ್ಸೆಗೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಈ ನಿಯಲಗಳಲ್ಲಿ ಅಂದಾಜು 3,200 ಮಂದಿಗೆ ಚಿಕಿತ್ಸೆ ನೀಡಬಹುದಾಗಿದೆ. ಈಗಾಗಲೇ ಇಲ್ಲಿ ಎಲ್ಲ ಮೂಲಭೂತ ಸೌಕರ್ಯಗಳೂ ಇರುವುದರಿಂದ ಚಿಕಿತ್ಸೆಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು. ಕೃಷಿ ವಿವಿ, ಕಾನೂನು ವಿವಿ ಹಾಗೂ ಬೆಂಗಳೂರು ವಿವಿ ಸೇರಿ ವಿವಿಧ ಹಾಸ್ಟೆಲ್‌ಗಳನ್ನೂ ಸೋಂಕಿತರ ಚಿಕಿತ್ಸೆಗೆ ಬಳಸುವ ಚಿಂತನೆ ಇದೆ. ಈ ನಿಟ್ಟಿನಲ್ಲಿ ವರದಿ ನೀಡುವ ಸಂಬಂಧ ಎಂಟು ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ.
ಬೆಂಗಳೂರು ವಿವಿಯ ಹಾಸ್ಟೆಲ್‌ಗಳನ್ನು ಬಳಸಿಕೊಂಡರೆ ಅಂದಾಜು ಎಂಟು ಸಾವಿರ ಜನರಿಗೆ ಚಿಕಿತ್ಸೆ ನೀಡಬಹುದಾಗಿದೆ. ಅಲ್ಲದೆ, ಕಂಠೀರವ ಒಳಾಂಗಣ ಕ್ರೀಡಾಂಗಣ, ಕೋರಮಂಗಲ ಒಳಾಂಗಣ ಕ್ರೀಡಾಂಗಣ, ಅರಮನೆ ಮೈದಾನ ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರವನ್ನೂ ಕೊನೆಯ ಹಂತದಲ್ಲಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ ಎಂದು ಮಾಹಿತಿ ನೀಡಿದರು.
20 ಸಾವಿರ ಮಂದಿ ಚಿಕಿತ್ಸೆಗೆ ಸಿದ್ಧತೆ: ನಗರದಲ್ಲಿ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳದ ಸೋಂಕಿತರ ಚಿಕಿತ್ಸೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಅಂದಾಜು 20 ಸಾವಿರ ಮಂದಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಮೌಲಸೌಕರ್ಯ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ತಿಳಿಸಿದ್ದಾರೆ.
ಖಾಸಗಿ ಆಸ್ಪತ್ರೆ ಶೇ.50 ಹಾಸಿಗೆ ಮೀಸಲು: ಕೋವಿಡ್ 19 ಚಿಕಿತ್ಸೆ ಸಾಮರ್ಥ್ಯ ಹಾಗೂ ಸೌಲಭ್ಯ ಹೊಂದಿರುವ ಎಲ್ಲ ಖಾಸಗಿ ಆಸ್ಪತ್ರೆಗಳು ಶೇ. 50 ಹಾಸಿಗೆಗಳನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಂದ ರೆಫರ್ ಆಗಿ ಬರುವ ಸೋಂಕಿತರಿಗೆ ಮೀಸಲಿಡಬೇಕೆಂದು ಸರ್ಕಾರ ಅದೇಶ ಹೊರಡಿಸಿದೆ. ಕೆಪಿಎಂಇ ಕಾಯ್ದೆಯಡಿ ನೋಂದಣಿಯಾದ ಆಸ್ಪತ್ರೆಗಳು, ಕೋವಿಡ್ 19 ವಾರ್ಡ್ ಆರಂಭಿಸುವುದು ಕಡ್ಡಾಯವಾಗಿದೆ.
ಈ ಖಾಸಗಿ ಆಸ್ಪತ್ರೆಗಳು ಶೇ. 50 ಹಾಸಿಗೆಗಳನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಂದ ರೆಫರ್ ಆಗಿ ಬರುವ ಸೋಂಕಿತರಿಗೆ, ಶೇ.50 ರಷ್ಟು ಹಾಸಿಗೆ ಗಳನ್ನು ಸೋಂಕಿತರಿಗೆ ಬಳಸಿಕೊಳ್ಳಬಹುದಾಗಿದೆ. ನೋಂದಾಯಿತ ಖಾಸಗಿ ಆಸ್ಪತ್ರೆಗಳು 418 ಇವೆ. 63,900 ಹಾಸಿಗಗಳ ಲಭ್ಯತೆ ಇದ್ದು, ಈ ಪೈಕಿ ಐಸಿಯು ಹಾಸಿಗೆ 4,467, ವೆಂಟಿಲೇಟರ್ 1,264 ಇವೆ. ಸರ್ಕಾರಿ ಆಸ್ಪತ್ರೆಗಳಿಂದ ಬರುವವರಿಗೆ ಉಚಿತ ಚಿಕಿತ್ಸೆ ನೀಡಲಿದ್ದು, ಮಾಹಿತಿಗೆ 18004258330, 18004252646 ಸಂಪರ್ಕಿಸಿ.