Advertisement

ಕಾವೇರಿ ಕಣಿವೆಯಲ್ಲಿ “ಪರ್ಯಾಯ ಬೆಳೆ’ಯೋಜನೆ ಜಾರಿ

06:20 AM Aug 18, 2017 | |

ಮಂಡ್ಯ: ಕಾವೇರಿ ಕಣಿವೆ ಪ್ರದೇಶದಲ್ಲಿ ಮಳೆ ಕೊರತೆಯಿಂದ ನೀರಿನ ಅಭಾವ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ರೈತರ ಕೃಷಿ ಚಟುವಟಿಕೆಗೆ ಅನುಕೂಲವಾಗುವಂತೆ ಕೃಷಿ ಇಲಾಖೆ ಪರ್ಯಾಯ ಬೆಳೆ ಯೋಜನೆ (ಕ್ರಾಪ್‌ ಕೆಂಟೆಂಜೆನ್ಸಿ ಪ್ಲಾನ್‌)ಯನ್ನು ಜಾರಿಗೊಳಿಸಿದೆ.

Advertisement

ಕೃಷಿ ಮತ್ತು ಸಂಬಂಧಪಟ್ಟ ಸಮನ್ವಯ ಇಲಾಖೆ ಅಧಿಕಾರಿಗಳನ್ನೊಳಗೊಂಡ ತಂಡಗಳನ್ನು ರಚಿಸಿ, ಜಿಲ್ಲಾ ಹೋಬಳಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆ ನಡೆಸಿ, ಅತಿ ಹೆಚ್ಚು ನೀರು ಬೇಡುವ ಬೆಳೆಗಳನ್ನು ಬಿತ್ತನೆ ಮಾಡದಂತೆ ರೈತರ ಮನವೊಲಿಸುವುದೇ ಈ ಯೋಜನೆ ಉದ್ದೇಶವಾಗಿದೆ.

ಅಧಿಕಾರಿಗಳ ತಂಡ ರಚನೆ: ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶದಿಂದ, ವಿವಿಧ ಇಲಾಖೆ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಕೃಷಿ, ತೋಟಗಾರಿಕೆ, ನೀರಾವರಿ ಇಲಾಖೆ ಅಧಿಕಾರಿಗಳು, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ವಿ.ಸಿ. ಫಾರಂನಲ್ಲಿರುವ ವಿಷಯ ತಜ್ಞರು, ರೈತ ಸಂಪರ್ಕ ಕೇಂದ್ರಗಳಲ್ಲಿನ ನೋಡಲ್‌ ವಿಜ್ಞಾನಿಗಳು ಸೇರಿ ಪಿಡಿಒಗಳು ತಂಡದಲ್ಲಿದ್ದಾರೆ. ಕಂದಾಯ ನಿರೀಕ್ಷಕರ ನೇತೃತ್ವದಲ್ಲಿ ಪ್ರತಿ ಹೋಬಳಿಗೆ ಎರಡರಿಂದ ಮೂರು ತಂಡಗಳನ್ನು ರಚಿಸಲಾಗಿದ್ದು, ಗುರುವಾರದಿಂದಲೇ ರೈತರಿಗೆ ತಿಳಿವಳಿಕೆ ಮೂಡಿಸುವ ಅಭಿಯಾನ ಆರಂಭಿಸಲಾಗಿದೆ.

ಅಭಿಯಾನ ಆರಂಭ: ನಿಗದಿತ ವೇಳಾಪಟ್ಟಿಯನ್ನು ಅಂತಿಮಗೊಳಿಸಿದ್ದು, ತಂಡಗಳು ಅಭಿಯಾನ ಆರಂಭಿಸಿವೆ. ಜಿಲ್ಲೆಯ ಎಲ್ಲಾ ಗ್ರಾಪಂ ಮತ್ತು ಹೋಬಳಿ ಕೇಂದ್ರಗಳಲ್ಲಿ ಸಾರ್ವಜನಿಕ ಸಭೆ ನಡೆಸಿ ರೈತರಲ್ಲಿ ತಿಳಿವಳಿಕೆ ಮೂಡಿಸುವುದು. ಕರಪತ್ರ ಪೋಸ್ಟರ್‌, ಬ್ಯಾನರ್‌ ಮತ್ತು ಧ್ವನಿವರ್ಧಕಗಳನ್ನು ಪ್ರಚಾರ ಕಾರ್ಯಕ್ಕೆ ಬಳಸಲಾಗುತ್ತಿದೆ.

ಭತ್ತ ,ಕಬ್ಬು ಸೂಕ್ತವಲ್ಲ: ಮಳೆಯ ಕೊರತೆಯಿಂದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆ ಇರುವುದರಿಂದ ಭತ್ತ ಮತ್ತು ಕಬ್ಬು ಬೆಳೆ ಸೂಕ್ತವಲ್ಲ ಮತ್ತು ಆ ಬೆಳೆಗಳಿಗೆ ಕೊನೆಯವರೆಗೂ ನೀರು ಒದಗಿಸಲಾಗದು. ಅದರ ಬದಲು ಅಲ್ಪಾವಧಿ ಅಥವಾ ಕಡಿಮೆ ನೀರಿನಿಂದ ಉತ್ತಮ ಇಳುವರಿ ಕೊಡುವ ಅಲ್ಪಾವಧಿ ಬೆಳೆಗಳನ್ನು ಬೆಳೆಯುವಂತೆ ರೈತರಿಗೆ ಜಾಗೃತಿ ಮೂಡಿಸಲಾಗುತ್ತಿದೆ.

Advertisement

ರಾಗಿಗೆ ಹೆಚ್ಚಿದ ಬೇಡಿಕೆ: ಮಳೆ ಕೊರತೆಯಿಂದ ನೀರಿಗೆ ಅಭಾವ ಎದುರಾಗಿರುವುದನ್ನು ಮನಗಂಡ ರೈತರು ರಾಗಿ ಬೆಳೆಗೆ ಮೊರೆ ಹೋಗಿದ್ದಾರೆ. ಇದರ ಪರಿಣಾಮ ಕಳೆದ ವರ್ಷಕ್ಕಿಂತ ರಾಗಿಗೆ ಈ ವರ್ಷ ಐದರಿಂದ ಆರು ಪಟ್ಟು ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ರೈತರಿಗೆ ಅನುಕೂಲವಾಗುವಂತೆ ರಾಗಿ, ಮುಸುಕಿನ ಜೋಳ, ಅವರೆ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಸಿರಿಧಾನ್ಯಗಳನ್ನು ಬೆಳೆಯುವಂತೆ ರೈತರಿಗೆ ಉತ್ತೇಜನ ನೀಡುತ್ತಿದ್ದು, ನವಣೆ ಮತ್ತು ಕೊರೆಲ ಬೆಳೆಗಳ ಬೀಜಗಳನ್ನೂ ವಿತರಿಸಲು ಪ್ರಯತ್ನಿಸಲಾಗುತ್ತಿದೆ. ಇವೆರಡೂ 90 ದಿನಗಳ ಬೆಳೆಗಳಾಗಿವೆ. ಉತ್ತಮ ಬೆಲೆ ಮತ್ತು ಬೇಡಿಕೆಯೂ ಇದೆ. ಕೊರೆಲ ಬೆಳೆಯ ಬಿತ್ತನೆ ಬೀಜಗಳನ್ನು ಗುತ್ತಿಗೆ ಪಡೆದ ರೈತರಿಂದ ಪಡೆದು ವಿತರಿಸಲಾಗುತ್ತಿದ್ದರೆ, ನವಣೆ ಬೀಜಗಳ ವಿತರಣೆಗೂ ಕ್ರಮ ವಹಿಸಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು “ಉದಯವಾಣಿಗೆ’ ತಿಳಿಸಿದ್ದಾರೆ. ಉಳಿದಂತೆ ಮೇವಿನ ಬೆಳೆ ಬೆಳೆಯುವಂತೆ ರೈತರ ಮನವೊಲಿಸಲಾಗುತ್ತಿದ್ದು, ಇದರ ನಡುವೆಯೂ ಹಲವು ಕಡೆಗಳಲ್ಲಿ ಭತ್ತದ ನಾಟಿ ಕಾರ್ಯ ನಡೆದಿದೆ.

ಭರ್ತಿಯಾಗಿಲ್ಲ ಜಲಾಶಯ
ಕಾವೇರಿ ಕಣಿವೆ ಪ್ರದೇಶದಲ್ಲಿ ಕಬಿನಿ, ಕೆಆರ್‌ ಎಸ್‌, ಹೇಮಾವತಿ, ಹಾರಂಗಿ ಸೇರಿ ನಾಲ್ಕು ಮುಖ್ಯ ಜಲಾಶಯಗಳಿದ್ದು, ಮುಂಗಾರು ಮಳೆಗಾಲ ಮುಗಿಯುತ್ತಿದ್ದರೂ ಇನ್ನೂ ಭರ್ತಿಯಾಗಿಲ್ಲ. ಅಣೆಕಟ್ಟುಗಳಲ್ಲಿ ಸಂಗ್ರಹವಾಗಿರುವ ನೀರು ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ಸಾಲುವುದಿಲ್ಲ. ಕಾವೇರಿ ಅಚ್ಚುಕಟ್ಟು ಪ್ರದೇಶಗಳ ನಾಲೆಗಳಿಗೆ ನೀರು ಹರಿಸುತ್ತಿರುವ ಬೆನ್ನಲ್ಲೇ ರೈತರು ಭತ್ತ ಮತ್ತು ಕಬ್ಬು ಹಾಕಬಹುದೆನ್ನುವ ಭೀತಿ ಕೃಷಿ ಇಲಾಖೆಯನ್ನು ಕಾಡುತ್ತಿದೆ.

ಕೃಷಿ ಇಲಾಖೆ ಆರಂಭಿಸಿರುವ ಪರ್ಯಾಯ ಬೆಳೆ ಯೋಜನೆಯಡಿ ರೈತರು ಬೆಳೆ ಬೆಳೆದಲ್ಲಿ ನಷ್ಟದಿಂದ ಪಾರಾಗಬಹುದು. ಭತ್ತ ಮತ್ತು ಕಬ್ಬಿಗೆ ಪರ್ಯಾಯವಾಗಿ ರಾಗಿ, ಮುಸುಕಿನಜೋಳ, ಅವರೆ, ಸಿರಿಧಾನ್ಯಗಳನ್ನು ಬೆಳೆಯುವಂತೆ ರೈತರಲ್ಲಿ
ಜಾಗೃತಿ ಮೂಡಿಸಲಾಗುವುದು.

– ಸುಷ್ಮಾ, ತಾಲೂಕು ಕೃಷಿ ಸಹಾಯಕ ನಿರ್ದೇಶಕಿ

– ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next