Advertisement

ಪರ್ಯಾಯ ನೆಪ: ಅಂತೂ ಇಂತೂ ಕಾಮಗಾರಿ ಆರಂಭ 

02:30 PM Dec 28, 2017 | Team Udayavani |

ಉಡುಪಿ: ಅಂತೂ ಇಂತೂ ಪರ್ಯಾಯ ನೆಪದಲ್ಲಿಯಾದರೂ ಉಡುಪಿ ನಗರದ ಕೆಲವು ರಸ್ತೆಗಳು ದುರಸ್ತಿ ಭಾಗ್ಯ ಕಾಣುವಂತಾಗಿದೆ.  ನಗರದ ಹಲವೆಡೆ ರಸ್ತೆಗಳ ಹೊಂಡ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ನಗರಸಭೆ ಕೈಗೆತ್ತಿಕೊಂಡಿದೆ. ಆದರೆ ಇದು ಪರ್ಯಾಯ ದೃಷ್ಟಿಯಲ್ಲಿಟ್ಟುಕೊಂಡು ಮಾತ್ರವೇ ಮಾಡುತ್ತಿರುವ ಕಾರ್ಯವಲ್ಲ. ರಸ್ತೆ ದುರಸ್ತಿ ನಿರಂತರ ಪ್ರಕ್ರಿಯೆ. ಮಳೆ ಮುಗಿದ ತತ್‌ಕ್ಷಣ ರಸ್ತೆಗಳ ದುರಸ್ತಿ, ಅಭಿವೃದ್ಧಿ ಕಾಮಗಾರಿ ಆರಂಭವಾಗುತ್ತದೆ. ಅದರಂತೆಯೇ ಈ ವರ್ಷವೂ ಕೆಲಸ ನಡೆಯುತ್ತಿದೆ. ಪರ್ಯಾಯ ಸಂದರ್ಭಕ್ಕೂ ಅನುಕೂಲವಾಗಲಿದೆ ಎನ್ನುತ್ತಾರೆ ನಗರಸಭೆಯ ಅಧಿಕಾರಿಗಳು.

Advertisement

ಎಲ್ಲೆಲ್ಲಿ?
ಎಲ್ಲ 35 ವಾರ್ಡ್‌ಗಳಲ್ಲಿಯೂ ಹೊಂಡ ಮುಚ್ಚುವ ಕೆಲಸ ನಡೆಯುತ್ತಿದೆ. ಎಲ್ಲಿ ತೇಪೆ ಹಾಕಿ ಹೊಂಡ ಮುಚ್ಚಲು ಅಸಾಧ್ಯವೋ ಅಲ್ಲಿ ಮರುಡಾಮರು ಕಾಮಗಾರಿ ನಡೆಸಲಾಗುತ್ತಿದೆ. ಸರ್ವಿಸ್‌ ಬಸ್‌ ನಿಲ್ದಾಣ ಪಕ್ಕದ ಹೂವಿನ ಮಾರ್ಕೆಟ್‌ ರಸ್ತೆ, ಮಾರುತಿ ವೀಥಿಕಾ ರಸ್ತೆ, ಮಿತ್ರ ಆಸ್ಪತ್ರೆ ಸಮೀಪದ ಕೊಳದ ಪೇಟೆ ರಸ್ತೆಯ ಮರುಡಾಮರು ಕಾಮಗಾರಿ ನಡೆಯಲಿದೆ. ಹೂವಿನ ಮಾರ್ಕೆಟ್‌ ರಸ್ತೆ ಕಾಮಗಾರಿಯನ್ನು ಈಗಾಗಲೇ ಕೈಗೆತ್ತಿಕೊಳ್ಳಲಾಗಿದೆ. ಅಂಬಾಗಿಲು – ಕಲ್ಸಂಕ ರಸ್ತೆಯಲ್ಲಿ ಅಗತ್ಯ ಇರುವಲ್ಲಿ ಕಾಂಕ್ರೀಟ್‌ ಕಾಮಗಾರಿ ನಡೆಸಲಾಗುವುದು. ಎಲ್ಲ ಕಾಮಗಾರಿಗಳು ಪರ್ಯಾಯೋತ್ಸವಕ್ಕಿಂತ ಮೊದಲೇ ಪೂರ್ಣಗೊಳ್ಳಲಿವೆ ಎಂದು ನಗರಸಭೆ ಅಭಿಯಂತರರು ತಿಳಿಸಿದ್ದಾರೆ.

ಸ್ವಚ್ಛತೆಗೂ ಆದ್ಯತೆ
ನಗರದ ಮುಖ್ಯರಸ್ತೆಗಳಲ್ಲಿ ಶೇಖರಣೆಯಾಗಿರುವ ಮಣ್ಣು, ಮರಳು, ಇಕ್ಕೆಲದ ಹುಲ್ಲನ್ನು ತೆಗೆದು ಸ್ವತ್ಛಗೊಳಿಸುವ ಕೆಲಸ ಕೂಡ ಆರಂಭವಾಗಿದೆ. ನಾರ್ತ್‌ ಶಾಲೆಯ ಬಳಿ ಹೊಸದಾಗಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಅಗತ್ಯ ಇರುವಲ್ಲಿ ಚರಂಡಿ ಕಾಮಗಾರಿಗಳನ್ನು ಕೂಡ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

10 ಕೋ.ರೂ.ವಿಶೇಷ ಅನುದಾನ
ರಾಜ್ಯ ಸರಕಾರದಿಂದ ನಗರಸಭೆಗೆ ಈಗಾಗಲೇ 10 ಕೋ.ರೂ. ವಿಶೇಷ ಅನುದಾನ ಬಿಡುಗಡೆಯಾಗಿದೆ. ಆ ಅನುದಾನದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಪರ್ಯಾಯಕ್ಕಾಗಿ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ಮಂಜುನಾಥಯ್ಯ, ಪೌರಾಯುಕ್ತರು

ಅನುದಾನ ಅನುಮಾನ
ನಾವು (ಬಿಜೆಪಿ) ಆಡಳಿತದಲ್ಲಿದ್ದಾಗ ಸರಕಾರದಿಂದ ಪರ್ಯಾಯಕ್ಕೆ ವಿಶೇಷ ಅನುದಾನ ಲಭ್ಯವಾಗುತ್ತಿತ್ತು. ಕಾಮಗಾರಿಗಳನ್ನು ಕೂಡ ನಿಗದಿತ ವೇಳೆಯಲ್ಲಿಯೇ ನಡೆಸುತ್ತಿದ್ದೆವು. ಆದರೆ ಈಗ ಸಕಾಲಕ್ಕೆ ಕೆಲಸಗಳು ನಡೆಯುತ್ತಿಲ್ಲ. ಪರ್ಯಾಯೋತ್ಸವಕ್ಕೆ ಮೂಲಸೌಕರ್ಯಕ್ಕಾಗಿ ರಾಜ್ಯಸರಕಾರದಿಂದ ಅನುದಾನ ಬರುತ್ತಿದೆಯೇ ಎಂಬ ಅನುಮಾನವಿದೆ.
ದಿನಕರ ಶೆಟ್ಟಿ ಹೆರ್ಗ, ಸದಸ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next