Advertisement

ಭರವಸೆ ಬೆನ್ನಲ್ಲೇ ಪರ್ಯಾಯ ತರಬೇತಿ?

11:57 AM Jul 18, 2017 | Team Udayavani |

ಬೆಂಗಳೂರು: ಮೆಟ್ರೋ ಸಿಬ್ಬಂದಿಯ “ಪ್ರತಿಭಟನೆ ಬೆದರಿಕೆ’ಗೆ ತಿರುಗೇಟು ನೀಡಲು ಸಿದ್ಧತೆ ನಡೆಸಿರುವ ಬಿಎಂಆರ್‌ಸಿ, ಸೋಮವಾರದಿಂದ ಗುತ್ತಿಗೆ ಆಧಾರದ ಎಂಜಿನಿಯರ್‌ಗಳಿಗೆ ರೈಲು ಚಾಲನಾ ತರಬೇತಿ ಆರಂಭಿಸಿದೆ.

Advertisement

ನಿರ್ವಹಣಾ ವಿಭಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 50ಕ್ಕೂ ಹೆಚ್ಚು ಮೆಕಾನಿಕಲ್‌ ಹಾಗೂ ಎಲೆಕ್ಟ್ರಿಕಲ್‌ ಎಂಜಿನಿಯರ್‌ಗಳಿಗೆ ಶಾಂತಿನಗರದ ಬೆಂಗಳೂರು ಮೆಟ್ರೋ ರೈಲು ನಿಗಮದ ಕಚೇರಿಯಲ್ಲಿ ಚಾಲನಾ ತರಬೇತಿ ನೀಡಲಾಗುತ್ತಿದೆ.

ಎರಡರಿಂದ ಮೂರು ತಿಂಗಳ ತರಬೇತಿಯಲ್ಲಿ ಒಂದು ತಿಂಗಳು ಥಿಯೇರಿ ಹಾಗೂ ಉಳಿದ ಅವಧಿಯಲ್ಲಿ ಡಿಪೋಗಳಲ್ಲಿ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ನಂತರದಲ್ಲಿ ನಿಧಾನವಾಗಿ ಈ ತರಬೇತುದಾರರನ್ನು ರೈಲು ಚಾಲನಾ ಸೇವೆಗೆ ಬಳಸಿಕೊಳ್ಳಲಾಗುವುದು ಎಂದು ಬಿಎಂಆರ್‌ಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಪರ್ಯಾಯ ಚಿಂತನೆ?
ಈಚೆಗೆ ಕ್ಷುಲ್ಲಕ ಕಾರಣಕ್ಕೆ ಮೆಟ್ರೋ ಸಿಬ್ಬಂದಿ ನಡೆಸಿದ ಪ್ರತಿಭಟನೆಯು ಸ್ವತಃ ಬಿಎಂಆರ್‌ಸಿ ಆಡಳಿತ ವ್ಯವಸ್ಥೆಯ ವಿರುದ್ಧದ ಆಕ್ರೋಶವೂ ಆಗಿತ್ತು. ಪ್ರತಿಭಟನೆಯಿಂದ ಸುಮಾರು ಏಳು ತಾಸು ಮೆಟ್ರೋ ಸಂಚಾರ ಅಂದು ಸ್ಥಗಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಮರುಕಳಿಸಿದರೆ, ಅದನ್ನು ಸಮರ್ಥವಾಗಿ ಎದುರಿಸಲು ಈ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. 

ಕಳೆದ ಏಳು ವರ್ಷಗಳಿಂದ ಕಾರ್ಯಾಚರಣೆ ಮತ್ತು ನಿರ್ವಹಣಾ ಸಿಬ್ಬಂದಿಗೆ ಅನ್ಯಾಯವಾಗುತ್ತಿದ್ದು, ನೌಕರರಿಗೆ ನೀಡುವ ಭತ್ಯೆ, ಮುಂಬಡ್ತಿ, ವಸತಿ ಗೃಹಗಳ ಹಂಚಿಕೆ ಸೇರಿದಂತೆ ವಿವಿಧ ವಿಚಾರಗಳಲ್ಲಿ ತಾರತಮ್ಯ ಅನುಸರಿಸಲಾಗುತ್ತಿದೆ. ಜತೆಗೆ ಕಾರ್ಯ ಒತ್ತಡವೂ ಇದೆ. ಈ ಅನ್ಯಾಯ ಸರಿಪಡಿಸಬೇಕು ಎಂಬುದು ಮೆಟ್ರೋ ಸಿಬ್ಬಂದಿ ಬೇಡಿಕೆ ಆಗಿದೆ. ಶೀಘ್ರ ಬೇಡಿಕೆ ಈಡೇರಿಸುವುದಾಗಿ ನಿಗಮದ ಆಡಳಿತ ಮಂಡಳಿ ಕೂಡ ಭರವಸೆ ನೀಡಿದೆ.

Advertisement

ಬೆನ್ನಲ್ಲೇ ಪರ್ಯಾಯ ವ್ಯವಸ್ಥೆಯನ್ನೂ ಮಾಡಿಕೊಳ್ಳುತ್ತಿದೆ. ರೈಲು ನಿರ್ವಹಣಾ ವಿಭಾಗ “ರೋಲಿಂಗ್‌ ಸ್ಟಾಕ್‌’ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ವ್ಯವಸ್ಥಾಪಕ, ಸಹಾಯಕ ಕಾರ್ಯನಿರ್ವಹಣಾ ಎಂಜಿನಿಯರ್‌, ಸಹಾಯಕ ಎಂಜಿನಿಯರ್‌ಗಳಿಗೆ ಈ ಚಾಲನಾ ತರಬೇತಿ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next