Advertisement
ಹುಬ್ಬಳ್ಳಿ: ರಾಜ್ಯದ ಏಕೈಕ ತ್ವರಿತ ಬಸ್ (ಬಿಆರ್‌ಟಿಎಸ್) ಸೇವೆಗೆ ತೊಡಕಾಗಿದ್ದ ಬೇಂದ್ರೆ ನಗರ ಸಾರಿಗೆಯ ಅವಳಿನಗರದ ಸಂಚಾರಕ್ಕೆ ಬ್ರೇಕ್ ಬೀಳಲಿದ್ದು, ಹು-ಧಾ ನಡುವೆ ಬದಲು ಇತರೆ ಮಾರ್ಗಗಳನ್ನು ಗುರುತಿಸಿ ಸರಕಾರ ಅಧಿಸೂಚನೆ ಹೊರಡಿಸಿದೆ. ಆದರೆ ಖಾಸಗಿ ಲಾಬಿಗೆ ಮಣಿದು ಹೆಚ್ಚಿನ ಆದಾಯವಿರುವ ಮಾರ್ಗಗಳನ್ನು ನೀಡಲಾಗಿದೆ ಎನ್ನುವ ಗಂಭೀರ ಆರೋಪ ವ್ಯಕ್ತವಾಗಿದೆ.
Related Articles
Advertisement
2019 ಮಾ.8ರಂದು ಸರಕಾರ ಹೊರಡಿಸಿದ್ದ ಕರಡು ಅಧಿಸೂಚನೆಯಲ್ಲಿ ಈಗಾಗಲೇ ಸಂಚರಿಸುತ್ತಿರುವ ರಹದಾರಿ ಪರವಾನಗಿ ಅವಧಿ ಮುಗಿಯುವರೆಗೆ ಮಾತ್ರ ಸಂಚರಿಸತಕ್ಕದ್ದು ಎಂಬುದಾಗಿತ್ತು. 2020 ಮಾ.7ರೊಳಗೆ ಅಂತಿಮ ಅಧಿಸೂಚನೆ ಹೊರಡಿಸಬೇಕಾಗಿತ್ತು. ಈ ಕಾರಣಕ್ಕಾಗಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಬಿಆರ್‌ಟಿಎಸ್ ರೂವಾರಿ ಜಗದೀಶ ಶೆಟ್ಟರ ನೇತೃತ್ವದಲ್ಲಿ ವಿಚಾರಣಾ ಪ್ರಾಧಿಕಾರ ರಚಿಸಿ ವಾಯವ್ಯ ಸಾರಿಗೆ ಸಂಸ್ಥೆ ಹಾಗೂ ಬೇಂದ್ರೆ ಸಾರಿಗೆ ಸಂಸ್ಥೆಯ ಮನವಿ ಆಲಿಸಿದ್ದರು.
ನ್ಯಾಯಾಲಯಗಳ ಆದೇಶದಿಂದ ಅಸ್ತಿತ್ವ
2003 ಡಿ. 31ರಂದು ಅಂದಿನ ಸರಕಾರ ಬೆಂಗಳೂರು ಹೊರತುಪಡಿಸಿ ಇತರೆ ಜಿಲ್ಲಾ ಕೇಂದ್ರದ 20 ಕಿಮೀ ವ್ಯಾಪ್ತಿಯಲ್ಲಿ ಖಾಸಗಿ ಪ್ರವರ್ತಕರಿಗೆ ಅವಕಾಶ ಮಾಡಿಕೊಟ್ಟಿತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಅಧಿಸೂಚನೆ ತಡೆಹಿಡಿಯಿತು. ಅಷ್ಟರೊಳಗೆ ಹು-ಧಾ ನಡುವೆ 60 ಪರ್ಮಿಟ್‌ಗಳನ್ನು ಪಡೆದುಕೊಂಡಿದ್ದರು. 2003ರಲ್ಲಿ ಹೊರಡಿಸಿದ್ದ ಅಧಿಸೂಚನೆಯನ್ನು ಸರಕಾರ 2006ರಲ್ಲಿ ರದ್ದುಪಡಿಸಿತ್ತು. ಆದರೆ 2011ರಲ್ಲಿ ಸರಕಾರ ಪುನಃ 2003ರ ಅಧಿಸೂಚನೆ ಪ್ರಕಾರ ರಹದಾರಿ ಪರವಾನಗಿ ನವೀಕರಣಕ್ಕೆ ಅಧಿಸೂಚನೆ ಹೊರಡಿಸಿತ್ತು. ಇದರ ವಿರುದ್ಧ ವಾಯವ್ಯ ಸಾರಿಗೆ ಕೋರ್ಟ್ ಮೆಟ್ಟಿಲೇರಿತ್ತು. ಆರಂಭದಿಂದಲೂ ಬೇಂದ್ರೆ ಸಾರಿಗೆ ಏಳುಬೀಳುಗಳ ಮೂಲಕ ಮಹಾನಗರ ಜನತೆಗೆ ಸಾರಿಗೆ ಸೇವೆ ನೀಡುತ್ತಿದೆ. ಇದೀಗ ಸರಕಾರದ ಅಧಿಸೂಚನೆ ಪ್ರಕಾರ 18 ವರ್ಷಗಳ ಮಹಾನಗರ ಸಾರಿಗೆ ಸೇವೆ ಸ್ಥಗಿತಗೊಳ್ಳಲಿದೆ.
ಲಾಭದ ಮಾರ್ಗಗಳ ವಿತರಣೆ ಆರೋಪ
ಕರಾವಳಿ ಭಾಗದ ರಾಜಕೀಯ ಪ್ರಮುಖ ನಾಯಕರೊಬ್ಬರ ಒತ್ತಡದ ಮೂಲಕ ಹೆಚ್ಚಿನ ಸಾರಿಗೆ ಆದಾಯ ತರುವ ಮಾರ್ಗಗಳನ್ನು ಪಡೆದುಕೊಂಡಿದ್ದಾರೆ ಎನ್ನುವ ಆರೋಪಗಳಿವೆ. ಜನರ ಸೇವೆ, ಕಾರ್ಮಿಕ ಭವಿಷ್ಯದ ಕಾರಣ ನೀಡಿ ಉಳಿದಿರುವ ಬೇಂದ್ರೆ ಸಾರಿಗೆ ಲಾಭದಾಯಕ ಮಾರ್ಗಗಳ ಜೊತೆಗೆ ಗ್ರಾಮೀಣ ಸೇವೆ ನೀಡಬಹುದಾಗಿತ್ತು. ಸಮಗ್ರ ಕರ್ನಾಟಕ ಸಾರಿಗೆ ಯೋಜನೆಯ ಪ್ರಕಾರ ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯಲ್ಲಿ ಖಾಸಗಿ ಪ್ರವರ್ತಕರಿಗೆ ಅವಕಾಶವಿಲ್ಲ. ಇದೊಂದು ಖಾಸಗೀಕರಣದ ಮೊದಲ ಹಂತ ಎನ್ನುವುದು ಸಾರಿಗೆ ಸಂಸ್ಥೆ ಅಧಿಕಾರಿಗಳ ಹಾಗೂ ಕಾರ್ಮಿಕ ಮುಖಂಡರ ಅಭಿಪ್ರಾಯವಾಗಿದೆ.