Advertisement
ಅಂಬ್ಲಿಮೊಗರು- ಮುನ್ನೂರು ಸಂಪರ್ಕ ಸೇತುವೆಯ ಕಾಮಗಾರಿ ವಿಳಂಬದಿಂದ ಸೋಮವಾರ ಮತ್ತು ಮಂಗಳವಾರ ಸಂಚಾರ ಸ್ಥಗಿತಗೊಂಡಿತ್ತು. ಮಂಗಳವಾರ ಪರ್ಯಾಯ ರಸ್ತೆಯಲ್ಲಿ ಹೆಚ್ಚುವರಿ ಮೋರಿ ನಿರ್ಮಾಣ ಮಾಡಿದ್ದು, ಇನ್ನೊಂದು ಬದಿಯಲ್ಲಿ ಕೃತಕ ನೆರೆಯಾಗಿರುವ ಪ್ರದೇಶದಲ್ಲಿ ಮಣ್ಣು ಹಾಕಿ ನೀರು ರಭಸವಾಗಿ ಹರಿಯದಂತೆ ತಡೆಹಿಡಿಯಲಾಗಿದೆ. ಮಂಗಳವಾರ ಮತ್ತು ಬುಧವಾರ ಮಳೆ ಇಲ್ಲದ ಹಿನ್ನೆಲೆಯಲ್ಲಿ ಬುಧವಾರ ಸಂಚಾರಕ್ಕೆ ಮುಕ್ತಗೊಳಿಸಿದರೂ, ಮಳೆ ಸುರಿದರೆ ರಸ್ತೆ ಕೊಚ್ಚಿ ಹೋಗುವ ಸಾಧ್ಯತೆ ಹೆಚ್ಚಾಗಿದೆ.
ನೂತನ ಸೇತುವೆ ಕಾಮಗಾರಿ ಅರ್ಧದಲ್ಲಿ ನಿಂತಿದ್ದು, ಬುಧವಾರ ಸೇತುವೆ ಮತ್ತು ರಸ್ತೆಯನ್ನು ಸಂಪರ್ಕಿಸುವ ಖಾಲಿ ಜಾಗದಲ್ಲಿ ಮಣ್ಣು ಹಾಕುವ ಕಾರ್ಯ ನಡೆಯಬೇಕಿತ್ತು. ಪಂಚಾಯತ್ ಅಧ್ಯಕ್ಷ ರಫಿಕ್ ಇನ್ನು ಮೂರು ದಿನಗಳಲ್ಲಿ ಸಂಚಾರ ಮುಕ್ತ ಮಾಡಬಹುದು ಎಂದು ಹೇಳಿಕೆ ನೀಡಿದರೂ, ಮಣ್ಣು ಹಾಕಿ ಕಾಂಕ್ರೀಟ್ ಬೆಡ್ ನಿರ್ಮಾಣ ಮಾಡಲು ಇನ್ನೂ ಹತ್ತು ದಿನಗಳ ಆವಶ್ಯಕತೆಯಿದ್ದು, ಇನ್ನೂ ಕಾಮಗಾರಿ ಪ್ರಾರಂಭಗೊಂಡಿಲ್ಲ. ಘನ ವಾಹನಗಳನ್ನು ಹೊರತುಪಡಿಸಿ ಬೇರೆ ವಾಹನಗಳಿಗೆ ಸಂಚಾರಕ್ಕೆ ಮುಕ್ತ ಮಾಡಿದರೂ ಹೊಸ ಸೇತುವೆಗೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿದೆ ಎನ್ನುತ್ತಾರೆ ಸ್ಥಳೀಯರಾದ ಲಕ್ಷ್ಮಿನಾರಾಯಣ ಅವರು. ಒಟ್ಟಾರೆಯಾಗಿ ಕಾಮಗಾರಿ ವಿಳಂಬವಾಗಿ ಪ್ರಾರಂಭಿಸಿದರೂ ಕಾಮಗಾರಿಯನ್ನು ನಿಧಾನಗತಿಯಲ್ಲಿ ನಡೆಸಿದ್ದರಿಂದ ಅಂಬ್ಲಿಮೊಗರು, ಮದಕ ಸೇರಿದಂತೆ ಈ ವ್ಯಾಪ್ತಿಯ ಜನರು ಪರದಾಡುವಂತಾಗಿದೆ. ಗುತ್ತಿಗೆದಾರರ ಮತ್ತು ಅಧಿಕಾರಿಗಳ ಅಸಡ್ಡೆಯಿಂದ ಎರಡು ಕಿ.ಮೀ. ವ್ಯಾಪ್ತಿಯನ್ನು ಕ್ರಮಿಸುವ ಜನರು ಏಳು ಕಿ.ಮೀ. ದೂರ ಕ್ರಮಿಸುವಂತಾಗಿದೆ.
Related Articles
ಸೇತುವೆ ನಿರ್ಮಾಣದಿಂದ ಪಕ್ಕದ ಖಾಸಗಿ ಗದ್ದೆಯಲ್ಲಿ ಪರ್ಯಾಯ ರಸ್ತೆಯನ್ನು ನಿರ್ಮಾಣ ಮಾಡಲಾಗಿತ್ತು. ಪರ್ಯಾಯ ರಸ್ತೆಯಲ್ಲಿ ಸಂಚಾರಕ್ಕೆ ತಡೆಯಾದಾಗ ಇಡೀ ಗದ್ದೆಯಲ್ಲಿ ಕಲ್ಲು ಮಣ್ಣು ತುಂಬಿಸಿದ್ದು, ಇದೀಗ ಹೊಸ ಮೋರಿ ನಿರ್ಮಾಣ ಮಾಡಿ ನೀರು ಪಕ್ಕದ ಗದ್ದೆಗಳಿಗೆ ಬಿಟ್ಟಿದ್ದು ಗದ್ದೆಗಳಿಗೆ ಹಾನಿಯಾಗಿದೆ.
Advertisement