Advertisement

ಏರ್‌ಪೋರ್ಟ್‌ಗೆ ಪರ್ಯಾಯ ರೈಲು ಮಾರ್ಗ

11:15 AM Jul 07, 2017 | Team Udayavani |

ಬೆಂಗಳೂರು: ಯಶವಂತಪುರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯಲಹಂಕ ಮಾರ್ಗವಾಗಿ ಪರ್ಯಾಯ ರೈಲು ಮಾರ್ಗ ನಿರ್ಮಿಸುವ ಕುರಿತು ಸಾಧ್ಯತಾ ವರದಿ ಸಿದ್ಧಪಡಿಸಲು ಚಿಂತಿಸಲಾಗಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

Advertisement

ಉಪನಗರ ರೈಲು ಯೋಜನೆ (ಸಬ್‌ ಅರ್ಬನ್‌) ಅನುಷ್ಠಾನ ಕುರಿತಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌, ಸಂಸದ ಪಿ.ಸಿ.ಮೋಹನ್‌ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ (ಬಿಎಂಆರ್‌ಡಿಎ) ಕಚೇರಿಯಲ್ಲಿ ಗುರುವಾರ ಅವರು ಸಭೆ ನಡೆಸಿದರು. 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಇತರೆ ನಗರಗಳಲ್ಲಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗಗಳಿವೆ. ಆದರೆ, ಬೆಂಗಳೂರಿನಲ್ಲಿ ಮಾತ್ರ ರೈಲು ಸಂಪರ್ಕವಿಲ್ಲದ ಕಾರಣ ನಗರದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪರ್ಯಾಯ ರೈಲು ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ. ಆದರೆ, ನಗರದ ರೈಲು ಹಳಿಗಳಲ್ಲಿ ಸದಾ ರೈಲುಗಳ ಸಂಚಾರವಿರುತ್ತದೆ. ಹೀಗಾಗಿ ಯಶವಂತಪುರದಿಂದ ಯಲಹಂಕ ಮಾರ್ಗವಾಗಿ ಪರ್ಯಾಯ ರೈಲು ಮಾರ್ಗ ನಿರ್ಮಿಸಲು ಚಿಂತಿಸಲಾಗಿದೆ ಎಂದರು.

ಯಲಹಂಕ ಸುತ್ತಮುತ್ತಲಿನ ಭಾಗಗಳಲ್ಲಿ ಭೂಸ್ವಾಧೀನ ಸಮಸ್ಯೆ ಎದುರಾಗುವುದರಿಂದ ಎಲಿವೇಟೆಡ್‌ ಮಾರ್ಗ ಅಥವಾ ಅತ್ಯಾಧುನಿಕ ತಂತ್ರಜ್ಞಾನ ಬಳಸುವ ಕುರಿತಂತೆ ರೈಟ್ಸ್‌ ಸಂಸ್ಥೆ ಸಾಧ್ಯತಾ ವರದಿ ನೀಡಲಿದ್ದು, ಸಾಧ್ಯತಾ ವರದಿಯ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ. ವರದಿ ನೀಡಿದ ನಂತರ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಈ ಬಗ್ಗೆ ಶೀಘ್ರದಲ್ಲಿಯೇ ರೈಲ್ವೆ ಸಚಿವರು ಹಾಗೂ ರೈಲ್ವೆ ಮಂಡಳಿಯೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ಸಬ್‌ ಅರ್ಬನ್‌ ರೈಲು ಯೋಜನೆಯ ಮೊದಲ ಹಂತವಾಗಿ 4  ಪ್ಯಾಸೆಂಜರ್‌ ರೈಲುಗಳನ್ನು ಮೆಮು (ಮೈನ್‌ಲೈನ್‌ ಎಲೆಕ್ಟ್ರಿಕ್‌ ಮಲ್ಟಿಪಲ್‌ ಯುನಿಟ್‌) ರೈಲುಗಳಾಗಿ ಪರಿವರ್ತಿಸಲು ರೈಲ್ವೆ ಇಲಾಖೆ ಒಪ್ಪಿಗೆ ಸೂಚಿಸಿದೆ. ನಂತರದಲ್ಲಿ ಹಂತ ಹಂತವಾಗಿ 15 ರೈಲುಗಳನ್ನು ಮೆಮು ರೈಲುಗಳಾಗಿ ಪರಿವರ್ತಿಸಲಾಗುವುದು. ಯೋಜನೆಯಿಂದಾಗಿ ನಗರದಲ್ಲಿನ ಸಂಚಾರ ದಟ್ಟಣೆ ಶೇ.40ರಷ್ಟು ಕಡಿಮೆಯಾಗಲಿದೆ ಎಂದು ಹೇಳಿದರು.

Advertisement

ರೈಲುಗಳ ನಿರ್ವಹಣೆಗಾಗಿ ಬೈಯಪ್ಪನಹಳ್ಳಿಯಲ್ಲಿ 3 ಪಿಟ್‌ಲೆçನ್‌ ಮತ್ತು ಏಳು ಫ್ಲಾಟ್‌ಫಾರಂಗಳ ಟರ್ಮಿನಲ್‌ ನಿರ್ಮಿಸುವ ಯೋಜನೆಯಿದೆ. ಅದರಂತೆ ಡಿಸೆಂಬರ್‌ ವೇಳೆಗೆ 3 ಫ್ಲಾಟ್‌ಫಾರಂಗಳು ಮುಗಿಯಲಿದ್ದು, ನಂತರದಲ್ಲಿ 4 ಫ್ಲಾಟ್‌ಫಾರಂಗಳ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಮುಂದಾಗಲಿದೆ ಎಂದು ಸದಾನಂದಗೌಡ ಅವರು ತಿಳಿಸಿದರು. 

ಸಚಿವ ಕೆ.ಜೆ.ಜಾರ್ಜ್‌ ಮಾತನಾಡಿ, ಉಪನಗರ ಯೋಜನೆಗಾಗಿ ಒಟ್ಟಾರೆ 10,500 ಕೋಟಿ ರೂ. ವೆಚ್ಚವಾಗಲಿದೆ. ಈ ಪೈಕಿ ಶೇ.20ರಷ್ಟು ಕೇಂದ್ರ ಸರ್ಕಾರ ಹಾಗೂ ಶೇ.20ರಷ್ಟು ರಾಜ್ಯ ಸರ್ಕಾರ ನೀಡಲಿವೆ. ಉಳಿದ ಶೇ.60ರಷ್ಟು ಹಣವನ್ನು ಎಸ್‌ಪಿವಿ (ಸ್ಟೆಷಲ್‌ ಪರ್ಪಸ್‌ ವೆಹಿಕಲ್‌) ಮೂಲಕ ಸಾಲ ಪಡೆಯಲಾಗುವುದು. ಈ ಸಾಲಕ್ಕೆ ರಾಜ್ಯ ಸರ್ಕಾರ ಖಾತ್ರಿ ನೀಡಲಿದ್ದು, ಇದರ ಶೇ.50ರಷ್ಟು ವೆಚ್ಚವನ್ನು ಕೇಂದ್ರ ಭರಿಸಬೇಕು ಎಂದು ಮನವಿ ಮಾಡಲಾಗಿದ್ದು, ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಮಾಡಲಾಗುವುದು ಎಂದರು. 

ಸಭೆಯಲ್ಲಿ ನಗರ ಭೂ ಸಾರಿಗೆ ನಿರ್ದೇಶನಾಲಯದ ಆಯುಕ್ತ ದರ್ಪಣ್‌ ಜೈನ್‌, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌, ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ಸಿಂಗ್‌ ಖರೋಲ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳು ಇದ್ದರು. 

ತುಮಕೂರಿಗೂ ಮೆಮು ರೈಲು
ಈಗಾಗಲೇ ಉಪನಗರ ರೈಲು ಯೋಜನೆಯಡಿ ರಾಮನಗರ, ಕೋಲಾರಕ್ಕೆ ರೈಲು ಸೇವೆ ಕಲ್ಪಿಸಲಾಗಿದ್ದು, ಯೋಜನೆಯ ಮೊದಲ ಹಂತವಾಗಿ ಮಂಡ್ಯ, ಬಂಗಾರಪೇಟೆ ಹಾಗೂ ತುಮಕೂರಿಗೆ ಮೆಮು ರೈಲು ಸಂಚಾರ ಆರಂಭವಾಗಲಿದೆ. ಈ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next