Advertisement

Education: ದಾಖಲಾತಿ ಒತ್ತಡ ನಿರ್ವಹಣೆ ಕುರಿತೂ ಗಮನ ನೀಡಲಿ

12:04 AM Sep 06, 2023 | Team Udayavani |

ರಾಜ್ಯ ಸರಕಾರ ಶಿಕ್ಷಣ ಕ್ಷೇತ್ರದಲ್ಲಿ ಮತ್ತೂಂದು ಮಹತ್ವದ ಹೆಜ್ಜೆ ಇರಿಸಿದ್ದು ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಮೂರು ಪರೀಕ್ಷೆ ಬರೆದು ಅದರಲ್ಲಿನ ಅತ್ಯುತ್ತಮ ಅಂಕವನ್ನು ಕಾಯ್ದುಕೊಳ್ಳುವ ಅವಕಾಶ ನೀಡಿದೆ. ಫ‌ಲಿತಾಂಶ ಹೆಚ್ಚಳದ ದೃಷ್ಟಿಯಲ್ಲಿ ಇದೊಂದು ಅತ್ಯುತ್ತಮ ನಡೆ ಎಂದು ಅನಿಸಿದರೂ ಸಹ ಫ‌ಲಿತಾಂಶ ಹೆಚ್ಚಳದಿಂದಾಗಿ ಪಿಯುಸಿ ಮತ್ತು ಪದವಿ ಕಾಲೇಜುಗಳ ಮೇಲೆ ಬೀಳಬಹುದಾದ ದಾಖ ಲಾತಿಯ ಒತ್ತಡವನ್ನು ಹೇಗೆ ನಿಭಾಯಿಸಬಹುದು ಎಂಬುದರ ಬಗ್ಗೆ ಚಿಂತನ-ಮಂಥನ ನಡೆಯುವುದು ಅಗತ್ಯ.

Advertisement

ಮೂರು ಪರೀಕ್ಷೆಗಳ ಸಂಭವನೀಯ ವೇಳಾಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಿ, ಆಗಸ್ಟ್‌ 30ರೊಳಗೆ ಮೂರು ಪರೀಕ್ಷೆಗಳನ್ನು ಮುಕ್ತಾಯ ಗೊಳಿಸಿ ಮೌಲ್ಯಮಾಪನ, ಮರು ಮೌಲ್ಯಮಾಪನ ಪ್ರಕ್ರಿಯೆಯನ್ನು ಮಾಡಿ ಫ‌ಲಿತಾಂಶ ಪ್ರಕಟಿಸಿ ವಿದ್ಯಾರ್ಥಿಗಳು ಆಯಾ ಶೈಕ್ಷಣಿಕ ವರ್ಷದಲ್ಲೇ ತಮ್ಮ ವ್ಯಾಸಂಗ ಮುಂದುವರಿಸಲು ಅವಕಾಶ ನೀಡಬೇಕು ಎಂಬ ಸರಕಾರದ ಇರಾದೆ ಸ್ವಾಗತಾರ್ಹ. ಇದರಿಂದ ವಿದ್ಯಾರ್ಥಿಗಳ ಒಂದು ವರ್ಷ ವ್ಯರ್ಥವಾಗುವುದಿಲ್ಲ ಜತೆಗೆ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಉದ್ಯೋಗ ಮಾಡಲು ಹೋಗಿ ಓದಿನಿಂದ ವಿಮುಖ ಗೊಳ್ಳುವ ಪ್ರಸಂಗ ಕಡಿಮೆ ಆಗಬಹುದು ಎಂಬ ಸರಕಾರದ ಯೋಚನೆ ಶ್ಲಾಘನೀಯ. ವಿದ್ಯಾರ್ಥಿಗಳ ಜೀವನಕ್ಕೆ ತಿರುವು ನೀಡಬಲ್ಲ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಪ್ರತೀ ವರ್ಷ ಸುಮಾರು 15 ಲಕ್ಷ ವಿದ್ಯಾರ್ಥಿಗಳು ಬರೆಯುತ್ತಾರೆ. 2022  -23ರ ಸಾಲಿನಲ್ಲಿ ಎಸೆಸೆಲ್ಸಿಯ ಶೇಕಡಾವಾರು ಫ‌ಲಿತಾಂಶ 83.89 ಇತ್ತು.

ಇನ್ನು ಪಿಯುಸಿಯ ಶೇಕಡಾ ವಾರು ಫ‌ಲಿತಾಂಶ 74.76ರಷ್ಟು ದಾಖಲಾಗಿತ್ತು. ಅದರೆ ಸರಕಾರದ ಈ ಹೊಸ ನೀತಿಯಿಂದಾಗಿ ಫ‌ಲಿತಾಂಶದಲ್ಲಿ ಏರಿಕೆಯಾಗುವುದು ನಿಶ್ಚಿತ. ಹೊಸ ನೀತಿಯಿಂದಾಗಿ ಉತ್ತೀರ್ಣಗೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಶೇ. 10ರಷ್ಟು ಹೆಚ್ಚಾದರೂ ಸಹ ಸುಮಾರು ಒಂದೂವರೆ ಲಕ್ಷ ವಿದ್ಯಾರ್ಥಿಗಳು ಮುಂದಿನ ವ್ಯಾಸಂಗಕ್ಕೆ ಅರ್ಹತೆ ಪಡೆಯುತ್ತಾರೆ. ರಾಜ್ಯದಲ್ಲಿ ಈಗಾಗಲೇ ಇರುವ ಪದವಿ ಪೂರ್ವ ಕಾಲೇಜು ಅಥವಾ ಪದವಿ ಕಾಲೇಜುಗಳು ಮೂಲ ಸೌಕರ್ಯದ ಕೊರತೆ, ಬೋಧಕ ಮತ್ತು ಬೋಧಕೇತರ ಸಿಬಂದಿಯ ಸಮಸ್ಯೆಯಿಂದ ಬಳಲುತ್ತಿವೆ. ಈ ವರ್ಷ ಹೊಸ ಸರಕಾರಿ ಪಿಯು ಕಾಲೇಜು ಸಹ ಸ್ಥಾಪನೆಯಾಗಿಲ್ಲ. ಇಂತಹದ್ದರಲ್ಲಿ ವಿದ್ಯಾರ್ಥಿಗಳ ಪ್ರವೇಶ ಪ್ರವಾಹ ಸೃಷ್ಟಿಯಾದರೆ ಅದನ್ನು ನಿಭಾಯಿಸುವ ದಾರಿಗಳ ಬಗ್ಗೆಯೂ ಸರಕಾರ ಚಿಂತಿಸಬೇಕಿದೆ.

ಹಾಗೆಯೇ ಈಗಾಗಲೇ ಶಿಕ್ಷಕರ, ಉಪನ್ಯಾಸಕರ ಕೊರತೆ ಎದುರಿಸುತ್ತಿ ರುವುದರಿಂದ ಶೈಕ್ಷಣಿಕ ವರ್ಷದ ಆರಂಭದ ಮೂರು ತಿಂಗಳು ಪರೀಕ್ಷಾ ನಿರ್ವಹಣೆ, ಮೌಲ್ಯಮಾಪನ, ಮರು ಮೌಲ್ಯಮಾಪನದಲ್ಲಿ ಶಿಕ್ಷಕರು, ಉಪನ್ಯಾಸಕರು ವ್ಯಸ್ತರಾಗಿಬಿಟ್ಟರೆ ಅದರಿಂದ ಶೈಕ್ಷಣಿಕ ವ್ಯವಸ್ಥೆಯ ಮೇಲಾ ಗುವ ಪರಿಣಾಮಗಳ ಬಗ್ಗೆಯೂ ಸರಕಾರ ಚಿಂತನೆ ನಡೆಸಬೇಕಿದೆ. ಹಾಗೆಯೇ ವೃತ್ತಿಪರ ಶಿಕ್ಷಣ ಅಥವಾ ಪ್ರವೇಶ ಪರೀಕ್ಷೆ ಬರೆದು ದಾಖ ಲಾಗುವ ಶೈಕ್ಷಣಿಕ ವ್ಯವಸ್ಥೆಯ ಮೇಲೆ ಯಾವ ರೀತಿಯ ಪರಿಣಾಮ ಬೀರ ಬಹುದು ಎಂಬುದರ ಬಗ್ಗೆಯೂ ಸರಕಾರ ಚಿಂತನೆ ನಡೆಸುವ ಅಗತ್ಯವಿದೆ. ಒಂದೆಡೆ ಸರಕಾರ ಹೆಚ್ಚು ಹೆಚ್ಚು ಮಂದಿಯನ್ನು ಉತ್ತೀರ್ಣಗೊಳಿಸಲು ಉತ್ಸಾಹ ತೋರಿ ಪರೀಕ್ಷೆಯ ಗಂಭೀರತೆಯನ್ನು ಸಡಿಲ ಮಾಡಬಾರದು.
ಶಿಕ್ಷಣ ವ್ಯವಸ್ಥೆಯ ಮೂಲ ಸೌಕರ್ಯವನ್ನು ಆದ್ಯತೆ ಮೇಲೆ ಸುಧಾರಿಸಿದರೆ, ಈ ಬದಲಾವಣೆಗಳು ಪರಿಣಾಮಕಾರಿಯಾಗುತ್ತವೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next