Advertisement

ಆಲ್‌ರೌಂಡರ್‌ ಅನಸಾ

12:30 AM Mar 06, 2019 | |

ಹೆಣ್ಣು- ಗಂಡು ಇಬ್ಬರೂ ಬಾಳ ಬಂಡಿಯ ಎರಡು ಗಾಲಿಗಳು ಎಂಬ ಮಾತು ಅನಸಾಬಾಯಿ ರಾಠೊಡ ಅವರನ್ನು ನೋಡಿದಾಗ ನಿಜ ಅನ್ನಿಸುತ್ತದೆ. ಗಂಡನ ಹೆಗಲಿಗೆ ಹೆಗಲು ಕೊಟ್ಟು, ಸಂಸಾರದ ಭಾರವನ್ನು ಹೊತ್ತ ಹೆಂಗಸು, ಅನಸಾಬಾಯಿ. ವಿಜಯಪುರದಿಂದ 10 ಕಿ.ಮೀ. ದೂರದಲ್ಲಿರುವ ಭೂತನಾಳ ತಾಂಡಾದಲ್ಲಿ ವಾಸವಿರುವ ಈಕೆ, ಈಗ ಗಂಡನೊಂದಿಗೆ ಸೇರಿ ಕಬ್ಬಿನ ಹಾಲಿನ ವ್ಯಾಪಾರಕ್ಕಿಳಿದಿದ್ದಾರೆ.  

Advertisement

ಎರಡೂವರೆ ವರ್ಷಗಳ ಹಿಂದೆ ಈಕೆಯ ಗಂಡ, ವಿಜಯಪುರದ ಕೆ.ಸಿ. ಮಾರ್ಕೆಟ್‌ನಲ್ಲಿ ಕಬ್ಬಿನ ಹಾಲಿನ ಚಿಕ್ಕ ಅಂಗಡಿಯನ್ನಿಟ್ಟರು. ಅದರಲ್ಲಿ ಹೇಳಿಕೊಳ್ಳುವಷ್ಟು ವ್ಯಾಪಾರ ನಡೆಯಲಿಲ್ಲ. ಆಗ ಅನಸಾಬಾಯಿ, “ಅಂಗಡಿಯನ್ನು ನಾನು ನೋಡಿಕೊಳ್ಳುತ್ತೇನೆ, ನೀವು ತಳ್ಳುಗಾಡಿಯಲ್ಲಿ ವ್ಯಾಪಾರ ನಡೆಸಿ’ ಎಂದು ಗಂಡನಿಗೆ ಧೈರ್ಯ ಹೇಳಿದಳು. ಕಬ್ಬು ಒತ್ತುವ ಯಂತ್ರವನ್ನು ಗಾಡಿಗೆ ಅಳವಡಿಸಿ ಗಂಡ ಬೀದಿಗಿಳಿದರೆ, ಅನಸಾಬಾಯಿ ಅಂಗಡಿಯ ಹೊಣೆ ಹೊತ್ತರು. 

ಬೇಸಿಗೇಲಿ ವ್ಯಾಪಾರ ಜೋರು
ವಿಜಯಪುರದ ಬಿಸಿಲಿನ ಬಗ್ಗೆ ಕೇಳಬೇಕೆ? ಮಾರ್ಕೆಟ್‌ಗೆ ಬಂದವರು ಅಂಗಡಿಯಲ್ಲಿ ಕಬ್ಬಿನಹಾಲು ಕುಡಿದರೆ, ದಾಹದಿಂದ ಬಳಲಿದವರು ತಳ್ಳುಗಾಡಿಯ ಮೊರೆ ಹೋಗುತ್ತಾರೆ. ಬೇಸಿಗೆಯ ದಿನಗಳಲ್ಲಿ ಈ ದಂಪತಿ ದಿನಕ್ಕೆ ಸುಮಾರು 500 ರೂ. ದುಡಿಯುತ್ತಾರೆ. ಬಸ್‌ ನಿಲ್ದಾಣದ ಹತ್ತಿರವೇ ಈ ಅಂಗಡಿ ಇರುವುದರಿಂದ ನಗರಕ್ಕೆ ಬರುವ ಬಹುತೇಕರು ಕಬ್ಬಿನ ಹಾಲಿನ ರುಚಿ ನೋಡುತ್ತಾರೆ.

ಬಟ್ಟೆ ತಯಾರಿಕೆಗೂ ಸೈ
ಬಂಜಾರ ಸಮುದಾಯಕ್ಕೆ ಸೇರಿದ ಅನಸಾಬಾಯಿ, ತಮ್ಮ ಸಾಂಪ್ರದಾಯಿಕ ಉಡುಪಾದ ಗುಜರಾತಿ ಶೈಲಿಯ ಬಟ್ಟೆಗಳ ತಯಾರಿಕೆಯಲ್ಲೂ ಸಿದ್ಧಹಸ್ತರು. ನಿತ್ಯ ಬೆಳಗ್ಗೆ 10-6ರ ವರೆಗೆ ಅಂಗಡಿಯಲ್ಲಿದ್ದರೆ, ಸಂಜೆ ಮನೆಯಲ್ಲಿಯೇ ಡ್ರೆಸ್‌ ತಯಾರಿಸುತ್ತಾರೆ. ಅನಸಾಬಾಯಿ ದಂಪತಿಗೆ ಮೂವರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗನಿದ್ದಾನೆ. ಒಬ್ಬ ಮಗಳಿಗೆ ಮದುವೆಯಾಗಿದ್ದು, ಉಳಿದವರು ಇನ್ನೂ ಓದುತ್ತಿದ್ದಾರೆ. ಹೊಲ- ಗದ್ದೆ ಇಲ್ಲದ ಇವರಿಗೆ, ಕಬ್ಬಿನ ಹಾಲಿನ ವ್ಯಾಪಾರವೇ ಮುಖ್ಯ ಜೀವನಾಧಾರ. ಕುಟುಂಬದ ಏಳಿಗೆಗಾಗಿ ಗಂಡನ ಜೊತೆ ಸರಿಸಮಾನವಾಗಿ ದುಡಿಯುವ ಅನಸಾಬಾಯಿ ಅವರಂಥ ಎಲ್ಲ ಮಹಿಳೆಯರಿಗೂ ಮೆಚ್ಚುಗೆಯ ಸಲಾಂ.

“ನಾವು ಪಟ್ಟ ಕಷ್ಟವನ್ನು ನಮ್ಮ ಮಕ್ಕಳು ಪಡಬಾರದು ಅಂತ ಅವರನ್ನ ಶಾಲಿಗೆ ಕಳಿಸ್ತಿದ್ದೀವಿ. ಕಬ್ಬಿನ ಹಾಲಿನ ವ್ಯಾಪಾರದಿಂದ ಹೊಟ್ಟೆ ಪಾಡು ನೋಡ್ಕೊತೀವಿ. ಇದ್ದಷ್ಟರಾಗ ಚಲೋ ಜೀವನ ನಡದೈತಿ’
ಅನಸಾ ರಾಠೊಡ, ಕಬ್ಬಿನಹಾಲು ವ್ಯಾಪಾರಿ

Advertisement

ಭಾಗ್ಯಶ್ರೀ ಕದಂ

Advertisement

Udayavani is now on Telegram. Click here to join our channel and stay updated with the latest news.

Next