ದೊಡ್ಡಬಳ್ಳಾಪುರ: ರೈತರು ಬೆಳೆದ ರಾಗಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಸರ್ಕಾರ ದಿನಕ್ಕೊಂದು ನೀತಿ ಮಾಡಿ ವಿಳಂಬ ಮಾಡುತ್ತಿದೆ. ರಾಗಿ ಬೆಳೆದ ರೈತರು ಸಂಕಷ್ಟಕ್ಕೀಡಾಗುತ್ತಿದ್ದು, ನಮಗೆ ರಾಗಿ ಬದಲು ಗಸಗಸೆ ಬೆಳೆಯಲು ಸರ್ಕಾರದಿಂದ ಅನುಮತಿ ದೊರಕಿಸಿ ಕೊಡಿ ಎಂದು ರೈತರು ಒತ್ತಾಯಿಸಿದ ಪ್ರಸಂಗ ನಡೆಯಿತು.
ತಾಲೂಕು ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್ ಮೋಹನಕುಮಾರಿ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ರೈತರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ರೈತ ಮುಖಂಡರು, ತಾಲೂಕಿನಲ್ಲಿ ರಾಗಿ ಬೆಳೆದು ರೈತರು ನಷ್ಟಕ್ಕೀಡಾಗಿದ್ದು, ಬದಲಿ ಬೆಳೆ ಬೆಳೆಯಲು ಸರ್ಕಾರ ಅವಕಾಶ ನೀಡಬೇಕಿದ್ದು, ಗಸಗಸೆ ಬೆಳೆಯಲು ರೈತರು ಆಸಕ್ತರಾಗಿದ್ದಾರೆ. ಇದಕ್ಕೆ ಅವಕಾಶ ಕಲ್ಪಿಸಿ ಎಂದರು.
ರಾಗಿ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಲು ಬಂದಿದ್ದ ರೈತರು ನೋಂದಣಿಯಾಗದೇ ಹಿಂತಿರುಗಿದ್ದಾರೆ. ಆದರೆ, ಹಿಂದಿನ ದಿನವೇ ಬೇಕಾದವರಿಗೆ ನೋಂದಣಿ ಮಾಡಿಸಲಾಗಿದೆ ಎನ್ನುವ ಆರೋಪಗಳಿವೆ. ಸಾಲುಗಟ್ಟಿ ನಿಂತ ರೈತರಿಗೆ ಮೊದಲು ನೋಂದಣಿಗೆ ಆದ್ಯತೆ ನೀಡಬೇಕು. ಮಾನದಂಡಗ ಳಿಂದ ವಂಚಿತರಾದ ರೈತರಿಗೆ ಬದಲಿ ವ್ಯವಸ್ಥೆ ಮಾಡಬೇಕು. ಮುಂದಿನ ವರ್ಷಕ್ಕೆ ಬೇಡಿಕೆ ಪಟ್ಟಿ ಸಲ್ಲಿಸುವಾಗ ಈ ಬಾರಿ ನೋಂದಣಿಯಾಗದ ರೈತರಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಅಧಿಕಾರಿಗಳು ಭೇಟಿ ನೀಡುತ್ತಿಲ್ಲ: ತೋಟಗಾರಿಕೆ ಇಲಾಖೆಯಿಂದ ಕಾಲಕಾಲಕ್ಕೆ ಬೆಳೆ ಸಮೀಕ್ಷೆ ಮಾಡದೆ, ಹಿಂದಿನ ಸಮೀಕ್ಷೆಯನ್ನೇ ಆಧಾರವಾಗಿಟ್ಟುಕೊಳ್ಳಲಾಗಿದೆ. ಇದರಿಂದ ಯಾವುದೇ ಸೌಲಭ್ಯ ಅಥವಾ ಪರಿಹಾರ ಪಡೆಯಲು ಕಷ್ಟವಾಗುತ್ತಿದೆ. ರೈತರ ತೋಟಗಳಿಗೆ ಅಧಿಕಾರಿಗಳು ಭೇಟಿ ನೀಡುತ್ತಿಲ್ಲ. ಕೃಷಿ ಇಲಾಖೆ ನೀಡುವ ಬೀಜಗಳು ಬಹುರಾಷ್ಟ್ರೀಯ ಕಂಪನಿಗಳದ್ದಾಗಿದ್ದು, ಕಳಪೆ ಬೀಜಗಳಿಂದ ಬೆಳೆ ಸರಿಯಾಗಿ ಬರುತ್ತಿಲ್ಲ. ಈ ಬಗ್ಗೆ ದೂರು ನೀಡಿದರೆ ಬದಲಿ ಬೀಜ ನೀಡುತ್ತಾರೆ ಹೊರತು, ರೈತರು ಉತ್ತು ಬಿತ್ತು ಶ್ರಮ ಹಾಕಿದ ಸಮಯ ಹಾಗೂ ಹಣ ಯಾರು ಕೊಡುತ್ತಾರೆ ಎಂದರು. ಕೃಷಿ ಇಲಾಖೆ ಉತ್ತಮ ಬೀಜ ಖರೀದಿಸಿ, ಬೀಜ ಹಾಗೂ ರಸಗೊಬ್ಬರಗಳ ದಾಸ್ತಾನಿನ ಮಾಹಿತಿ ನೀಡಬೇಕು. ಎಪಿಎಂಸಿಯಲ್ಲಿ ರೈತರಿಂದ ಬಿಳಿ ಚೀಟಿ ವ್ಯವಹಾರ ಮಾಡಿ, ಶೇ.10 ಕಮಿಷನ್ ಪಡೆಯುತ್ತಿದ್ದರೂ, ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ಇಲ್ಲಿ ಶೌಚಾಲಯ ಸೇರಿದಂತೆ, ರೈತರಿಗೆ ಮೂಲ ಸೌಕರ್ಯಗಳ ಕೊರತೆ ಇದೆ ಎಂದು ದೂರಿದರು.
ಹಣ ಪಾವತಿ ಮಾಡಲು ಕಷ್ಟ: ಬೆಂಗಳೂರು ಹಾಲು ಒಕ್ಕೂಟದಿಂದ ಡೇರಿಗಳಲ್ಲಿ ಖರೀದಿಸುತ್ತಿರುವ ಹಾಲು ಗುಣಮಟ್ಟದ ನೆಪದಿಂದ ತಿರಸ್ಕರಿಸಿ ಚೆಲ್ಲಲಾಗುತ್ತಿದೆ. ಸಂಬಂಧಪಟ್ಟ ಡೇರಿಗಳಿಗೆ ಅಧಿಕಾರಿಗಳು ಭೇಟಿ ನೀಡಿ ಶುಚಿತ್ವ, ನಿರ್ವಹಣೆ ಮೊದಲಾಗಿ ಅಲ್ಲಿನ ಆಗು-ಹೋಗು ಪರಿಶೀಲಿಸದೇ ಏಕಾಏಕಿ ಹಾಲು ತಿರಸ್ಕರಿಸುತ್ತಿದ್ದಾರೆ. ಇದಕ್ಕೆ ಡೇರಿಯವರು ರೈತರಿಗೆ ಹಣ ಪಾವತಿ ಮಾಡಲು ಕಷ್ಟವಾಗುತ್ತಿದೆ. 2 ರೂ. ಪ್ರೋತ್ಸಾಹ ಧನವಿದ್ದಾಗ ಇಲ್ಲದ ಗುಣಮಟ್ಟದ ಮಾನದಂಡ ಈಗ ಬರುತ್ತಿದೆ. ಹಾಲಿನ ಉತ್ಪಾದನೆ ಗುಣಮಟ್ಟದಲ್ಲಿ ಕಾಲಕಾಲಕ್ಕೆ ಬದಲಾವಣೆ ಆಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ಇದಲ್ಲದೇ ಹಾಲಿನ ಮಾರಾಟಕ್ಕೆ 2 ರೂ. ಲೇವಿ ವಿಧಿಸುವುದು ಸರಿಯಾದ ಕ್ರಮವಲ್ಲ ಎಂದು ರೈತ ಮುಖಂಡರು ದೂರಿದರು.
ಮನವಿ ಸಲ್ಲಿಸಿದರೆ ಕ್ರಮ: ಈ ಕುರಿತು ಪ್ರತಿಕ್ರಿಯಿಸಿದ ಬಮೂಲ್ ದೊಡ್ಡಬಳ್ಳಾಪುರ ಶಿಬಿರದ ಸಹಾಯಕ ವ್ಯವಸ್ಥಾಪಕ ಮುನಿರಾಜು, ಗುಣಮಟ್ಟ ಕುರಿತಂತೆ ನಮಗೆ ಸರ್ಕಾರದ ಹಾಗೂ ಒಕ್ಕೂಟದ ಸ್ಪಷ್ಟ ನಿರ್ದೇಶನವಿಲ್ಲ. ಇದು ಪಾಲಿಸದೇ ಹೋದರೆ ಅದು ಕಲಬೆರಕೆ ಎಂದು ತೀರ್ಮಾನಿಸಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. 3.5 ಫ್ಯಾಟ್, 8.5 ಎಸ್‌ಎನ್ ಎಫ್ ಮಾನದಂಡವನ್ನು ನಾವು ಅನುಸರಿಸ ಬೇಕಾಗುತ್ತದೆ. ಹಾಲು ಸರಬರಾಜು ಮಾಡುವವರು
ಎಲ್ಲರೂ ಒಂದೇ ರೀತಿ ಹಾಕುವುದಿಲ್ಲ. ಕಳಪೆ ಹಾಲು ಮಿಶ್ರವಾದರೆ ಎಲ್ಲಾ ಹಾಲು ಕೆಡುವ ಸ್ಥಿತಿ ಉಂಟಾಗುತ್ತದೆ. ಹಾಲನ್ನು ವಾಪಾಸ್ ಮಾಡುವಂತೆ ಡೇರಿಯಿಂದ ಮನವಿ ಸಲ್ಲಿಸಿದರೆ ಕ್ರಮ ಕೈಗೊಳ್ಳಲಾಗುವುದು. ರೈತರು ಗುಣಮಟ್ಟದ ಹಾಲಿನ ಉತ್ಪಾದನೆಗೆ ಗಮನ ಹರಿಸಬೇಕು ಎಂದರು.
ಸೂಕ್ತ ಮಾರ್ಗದರ್ಶನ ನೀಡಿ: ತಹಶೀಲ್ದಾರ್ ಮೋಹನಕುಮಾರಿ ಮಾತನಾಡಿ, ಗುಣಮಟ್ಟ ಕಡಿಮೆ ಇರುವ ಹಾಲಿನಿಂದ ಬೇರೆ ಉತ್ಪನ್ನಗಳಿಗೆ ಬಳಸುವ ಕುರಿತು ಯೋಚಿಸಿ, ರೈತರಿಗೆ ಅನ್ಯಾಯವಾಗದಂತೆ ಸೂಕ್ತ ಮಾರ್ಗದರ್ಶನ ನೀಡಿ ಎಂದರು. ಕೃಷಿ ಇಲಾಖೆಯ ಕಸಬಾ ಕೃಷಿ ಅಧಿಕಾರಿ ಗೀತಾ, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಉದಯ್, ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಪ್ರಸನ್ನ, ಕಾರ್ಯದರ್ಶಿ ಸತೀಶ್, ತಾಲೂಕು ಕಾರ್ಯದರ್ಶಿ ಆರ್.ಸತೀಶ್, ಮುಖಂಡ ವಸಂತ್ ಕುಮಾರ್, ಮುತ್ತೇಗೌಡ ಹಾಗೂ ಮತ್ತಿತರರು ಇದ್ದರು.
ಗಸಗಸೆ ಬೆಳೆಯಲು ಕಾನೂನು ತೊಡಕು
ಗಸಗಸೆ ಬೆಳೆ ಬೆಳೆಯುವುದಕ್ಕೆ ಕಾನೂನು ತೊಡಕುಗಳಿದ್ದು, ಈ ಭಾಗದಲ್ಲಿ ಬೆಳೆಯಲು ಸಧ್ಯಕ್ಕೆ ಅನುಮತಿ ಇಲ್ಲ. ರೈತರು ಮಾಡಿರುವ ಮನವಿಯನ್ನು ನಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ಅಗತ್ಯ ಕ್ರಮ ವಹಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಾರುತಿ ಹೇಳಿದರು.