Advertisement

ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 30 ಮಕ್ಕಳಿಗೆ ಅವಕಾಶ

10:34 PM Jun 02, 2019 | Lakshmi GovindaRaj |

ಬೆಂಗಳೂರು: ಪ್ರಸಕ್ತ ಸಾಲಿನಿಂದ ಸರ್ಕಾರಿ ಶಾಲೆಯ ಒಂದನೇ ತರಗತಿಯಲ್ಲಿ ಆರಂಭವಾಗುತ್ತಿರುವ ಆಂಗ್ಲ ಮಾಧ್ಯಮ ತರಗತಿಗೆ ಕೇವಲ 30 ಮಕ್ಕಳ ದಾಖಲಾತಿ ಮಾಡಿಕೊಳ್ಳಬೇಕೆಂದು ರಾಜ್ಯ ಯೋಜನಾ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.

Advertisement

ಸಾವಿರ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಅದರಂತೆ ಆಯ್ಕೆಯಾಗಿರುವ ಸಾವಿರ ಶಾಲೆಗಳಲ್ಲೂ ಆಂಗ್ಲ ಮಾಧ್ಯಮ ತೆರೆದು, ದಾಖಲಾತಿ ಪ್ರಕ್ರಿಯೆಯನ್ನು ಆರಂಭಿಸಿದ್ದರು.

ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸಿದ್ದರಿಂದ ಪಾಲಕ, ಪೋಷಕರು ಅತಿ ಉತ್ಸಾಹದಿಂದ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಮುಂದೆ ಬಂದಿದ್ದರು. ಬಹುತೇಕ ಜಿಲ್ಲೆಗಳಲ್ಲಿ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗೆ ನಿರೀಕ್ಷೆಗೂ ಅಧಿಕ ಬೇಡಿಕೆ ಬಂದಿತ್ತು. ಅಲ್ಲದೇ, ದಾಖಲಾತಿಗಾಗಿ ಪಾಲಕರು ಸರದಿ ಸಾಲಿನಲ್ಲಿ ನಿಂತಿದ್ದರು.

ಆದರೆ, ಈಗ ಇಲಾಖೆ ಹೊರಡಿಸಿರುವ ಆದೇಶ ಪಾಲಕ, ಪೋಷಕರ ಆಕ್ರೋಶಕ್ಕೆ ಗುರಿಯಾಗಿದೆ. ಕೆಲವೊಂದು ಶಾಲೆಗಳಲ್ಲಿ ಈಗಾಗಲೇ 30ಕ್ಕಿಂತ ಅಧಿಕ ವಿದ್ಯಾರ್ಥಿಗಳನ್ನು ದಾಖಲಾತಿ ಕೂಡ ಮಾಡಿಕೊಳ್ಳಲಾಗಿದೆ. ಅಂತಹ ಶಾಲೆಯ ಮುಖ್ಯಶಿಕ್ಷಕರು ಪೇಚಿಗೆ ಸಿಲುಕಿದ್ದಾರೆ.

ಸರ್ಕಾರಿ ಶಾಲೆಯ ಅಂಗ್ಲ ಮಾಧ್ಯಮಕ್ಕೆ ಓರ್ವ ಶಿಕ್ಷಕರನ್ನು ನೀಡಿರುವುದರಿಂದ 30 ಮಕ್ಕಳನ್ನು ಮಾತ್ರ ದಾಖಲಾತಿ ಮಾಡಿಕೊಳ್ಳಬೇಕು. ಅದಕ್ಕಿಂತ ಹೆಚ್ಚು ಅರ್ಜಿ ಬಂದರೆ, ಲಾಟರಿ ಮೂಲಕ ಮಕ್ಕಳ ಆಯ್ಕೆ ನಡೆಸಬೇಕು ಅಥವಾ ಉಳಿದ ಮಕ್ಕಳನ್ನು ಕನ್ನಡ ಮಾಧ್ಯಮಕ್ಕೆ ದಾಖಲಿಸುವಂತೆ ಪಾಲಕ, ಪೋಷಕರ ಮನವೊಲಿಸುವ ಜವಾಬ್ದಾರಿಯನ್ನು ಶಿಕ್ಷಕರಿಗೆ ಇಲಾಖೆ ವಹಿಸಿದೆ.

Advertisement

ಯುನಿಸಫ್, ಅಜೀಂ ಪ್ರೇಂಜಿ ವಿಶ್ವವಿದ್ಯಾಲಯ, ಆರ್‌ಐಇಎಸ್‌ಐ ಹಾಗೂ ರಾಜ್ಯ ಸಂಪನ್ಮೂಲ ಶಿಕ್ಷಕರನ್ನು ಒಳಗೊಂಡ ತಜ್ಞರ ತಂಡವು ಆಂಗ್ಲ ಮಾಧ್ಯಮ ತರಗತಿಗಳಲ್ಲಿ ಬಳಸಬೇಕಾದ ಪಠ್ಯಕ್ರಮಕ್ಕೆ ಅನುಗುಣವಾದ ಬೋಧನಾ ಉಪಕರಣ ತಯಾರಿಸುವ ಕಾರ್ಯ ನಡೆಯುತ್ತಿದೆ. ಬೋಧನಾ ಉಪಕರಣಗಳನ್ನು ಅತಿ ಶೀಘ್ರದಲ್ಲಿ ಶಾಲೆಗೆ ಕಳುಹಿಸಲಾಗುತ್ತದೆ.

ವಿದ್ಯಾರ್ಥಿ, ಶಿಕ್ಷಕರ ಅನುಪಾತವು 30:1ರಲ್ಲೇ ಇರಬೇಕು. ಅದಕ್ಕಿಂತ ಜಾಸ್ತಿ ದಾಖಲಾತಿ ಮಾಡಿಕೊಳ್ಳುವಂತಿಲ್ಲ. ಕನ್ನಡ ಮಾಧ್ಯಮದಲ್ಲೂ ನಲಿಕಲಿ ಇಂಗ್ಲಿಷ್‌ ಬೋಧನೆ ಇರುವುದರಿಂದ ಅಲ್ಲಿಗೆ ಮಕ್ಕಳನ್ನು ಕಳುಹಿಸಲು ಪಾಲಕ, ಪೋಷಕರ ಮನವೊಲಿಸಬೇಕೆಂದು ಉಪನಿರ್ದೇಶಕರಿಗೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ರಾಜ್ಯ ಯೋಜನಾ ನಿರ್ದೇಶನಾಲಯ ತಿಳಿಸಿದೆ.

ಶಿಕ್ಷಕರನ್ನು ನೀಡಲು ಸಾಧ್ಯವಿಲ್ಲವೇ?: ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತೆರೆಯುವ ಕ್ರಮ ಅತ್ಯಂತ ಶ್ಲಾಘನೀಯ. ಆದರೆ, ಕೇವಲ 30 ಮಕ್ಕಳನ್ನು ಮಾತ್ರ ದಾಖಲಾತಿ ಮಾಡಿಕೊಳ್ಳಿ ಎಂದು ಷರತ್ತು ವಿಧಿಸುವುದು ಸರಿಯಲ್ಲ.

ಒಂದು ಶಾಲೆಗೆ ಆಂಗ್ಲ ಮಾಧ್ಯಮಕ್ಕೆ ಓರ್ವ ಶಿಕ್ಷಕರನ್ನು ಮಾತ್ರ ನೀಡಲು ಸಾಧ್ಯವಾಗುವುದರಾದರೆ, ಇಷ್ಟೊಂದು ತುರ್ತಾಗಿ ಇಂತಹ ಮಹತ್ವದ ನಿರ್ಧಾರದ ಅನುಷ್ಠಾನ ಏಕೆ ಮಾಡಬೇಕು? ಸರ್ಕಾರಿ ಶಾಲೆಗಳಲ್ಲಿರುವ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಿ, ಅವರನ್ನು ಈ ಕಾರ್ಯಕ್ಕೆ ನಿಯೋಜನೆ ಮಾಡಬಹುದಿತ್ತಲ್ಲವೇ ಎಂದು ಪಾಲಕ, ಪೋಷಕರು, ವಿವಿಧ ಸಂಘಟನೆಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next