Advertisement

ಅಗತ್ಯ ಸೌಲಭ್ಯ ಕಲ್ಪಿಸಲು ಅನುದಾನ ಮೀಸಲಿಡಿ

12:56 PM Mar 26, 2022 | Team Udayavani |

ರಾಯಚೂರು: ನಗರದಲ್ಲಿನ ಜ್ವಲಂತ ಸಮಸ್ಯೆಗಳ ವಿಚಾರದಲ್ಲಿ ನಗರಾಡಳಿತ ತೋರಿದ ದಿವ್ಯ ನಿರ್ಲಕ್ಷ್ಯದ ವಿರುದ್ಧ ವಿವಿಧ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಜನರಿಗೆ ಬೇಕಾದ ಯಾವೊಂದು ಸೌಲಭ್ಯ ಕಲ್ಪಿಸುವಲ್ಲಿ ನಗರಸಭೆ ಮುಂದಾಗುತ್ತಿಲ್ಲ ಎಂದು ದೂರಿದರು. ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಬಜೆಟ್‌ ಪೂರ್ವ ಸಭೆಯಲ್ಲಿ ಒಕ್ಕೋರಲಿನಿಂದ ಒತ್ತಾಯಿಸಿದ ಸಂಘಟನೆಗಳ ಮುಖಂಡರು, ನಗರಸಭೆ ವೈಫಲ್ಯದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು.

ನಗರಸಭೆ ಬಜೆಟ್‌ನಲ್ಲಿ ಶುದ್ಧ ಕುಡಿವ ನೀರು ಪೂರೈಕೆ, ಸ್ವಚ್ಛತೆ, ಕಸ ವಿಲೇವಾರಿ, ಶೌಚಗೃಹ ನಿರ್ಮಾಣ, ಆರೋಗ್ಯ ವಲಯಕ್ಕೆ ಅನುದಾನ ಮೀಸಲಿಡುವಂತೆ ಸಂಘ-ಸಂಸ್ಥೆಗಳು ಒತ್ತಾಯಿಸಿದವು.

ಸಂಘಟನೆ ಮುಖಂಡ ಬಾಸ್ಕರ್‌ ಬಾಬು ಮಾತನಾಡಿ, ಸಫಾಯಿ ಕರ್ಮಚಾರಿಗಳ ಬಡಾವಣೆಯಲ್ಲಿ ಮೂಲ ಸೌಲಭ್ಯ ಕಲ್ಪಿಸಬೇಕು. ಗುರುತಿನ ಚೀಟಿ ನೀಡಿದರೆ ಸರ್ಕಾರಿ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ ಎಂದರು.

ಹೋರಾಟಗಾರ ಎನ್‌. ಮಹಾವೀರ್‌ ಮಾತನಾಡಿ, ನಗರಕ್ಕೆ ಇಂದಿಗೂ ಅಶುದ್ಧ ನೀರು ಪೂರೈಕೆಯಾಗುತ್ತಿದ್ದು, ಶುದ್ಧೀಕರಣ ಮಾಡಿ ಪೂರೈಸಬೇಕು. ಪ್ರತಿ ಬಡಾವಣೆಯಲ್ಲಿ ಎರಡು ಸಾರ್ವಜನಿಕ ಶೌಚಗೃಹ ನಿರ್ಮಿಸುವಂತೆ ಒತ್ತಾಯಿಸಿದರು.

Advertisement

ಸಂಘಟನೆ ಮುಖಂಡ ರಾಜು ಪಟ್ಟಿ ಮಾತನಾಡಿ, ಬಿಆರ್‌ಬಿ ಕಾಲೇಜ್‌ ಹತ್ತಿರದ ಮುಕ್ತಿಧಾಮದಲ್ಲಿ ಶವ ಸಂಸ್ಕಾರ ಮಾಡುವ ವಿದ್ಯುತ್‌ ಯಂತ್ರ ಕೆಟ್ಟುಹೋದ ಪರಿಣಾಮ ಕಟ್ಟಿಗೆ ತಂದು ಶವ ಸಂಸ್ಕಾರ ಮಾಡಲಾಗುತ್ತಿದೆ. ಕೂಡಲೇ ಯಂತ್ರ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ನಗರಸಭೆ ಮಳಿಗೆಗಳ ದುರ್ಬಳಕೆ ತಡೆಯಲು ಕೂಡಲೇ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಸಬೇಕು. ನಗರಸಭೆ ಸದಸ್ಯರ ಬೆಂಬಲಿಗರೇ ಕಡಿಮೆ ದರಕ್ಕೆ ಮಳಿಗೆ ಪಡೆದು ದುಬಾರಿ ಬಾಡಿಗೆಗೆ ಬೇರೆಯವರಿಗೆ ನೀಡಿದ್ದಾರೆ. ನಗರಸಭೆಗೆ ನಷ್ಟವುಂಟು ಮಾಡಲಾಗುತ್ತಿದೆ. ಅಂಗವಿಕಲರಿಗೆ, ಪರಿಶಿಷ್ಟರಿಗೆ ಮಳಿಗೆಗಳಲ್ಲಿ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.

ಕ್ರಾಂತಿಯೋಗಿ ಬಸವೇಶ್ವರ ಸೇವಾ ಸಂಘದ ಅಧ್ಯಕ್ಷ ರಾಜೇಶ ಕುಮಾರ ಮಾತನಾಡಿ, ನಗರಸಭೆ ಕಚೇರಿಯಲ್ಲಿ ಶೌಚಗೃಹದ ವ್ಯವಸ್ಥೆ ಮಾಡಬೇಕು. ಮಹಿಳಾ ಸಿಬ್ಬಂದಿಗೆ ಸಮಸ್ಯೆಯಾಗುತ್ತಿದೆ. ನಗರಸಭೆಗೆ ವಿವಿಧ ಕೆಲಸಗಳಿಗೆ ಬರುವ ಮಹಿಳೆಯರಿಗೂ ತೊಂದರೆ ಆಗುತ್ತಿದೆ ಎಂದರು.

ಪರಿಶಿಷ್ಟ ಜಾತಿ, ಹಿಂದುಳಿದ ವರ್ಗಗಳ ಜನರಿಗೆ ರುದ್ರಭೂಮಿ ಸಮಸ್ಯೆಯಿದ್ದು, ನಗರಸಭೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು. ಪೌರಾಯುಕ್ತ ಮುನಿಸ್ವಾಮಿ ಮಾತನಾಡಿ, ಎಲ್ಲರ ಸಲಹೆ, ಸೂಚನೆ ಆಲಿಸಿದ್ದು, ಈ ಕುರಿತು ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next