Advertisement

ಕೋಮುವಾದಿ ಶಕ್ತಿಯನ್ನು ದೂರವಿಡಲು ಮೈತ್ರಿ

07:37 AM Mar 23, 2019 | |

ರಾಮನಗರ: ಕೋಮುವಾದಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರದಂತೆ ರಾಜ್ಯದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದೇವೆ. ಕೇಂದ್ರದಲ್ಲೂ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಬೇಕಾಗಿದೆ. ಹೀಗಾಗಿ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ಮುಂದುವರಿಯಬೇಕಾಗಿದೆ ಎಂದು ಸಂಸದ ಡಿ.ಕೆ.ಸುರೇಶ್‌ ತಿಳಿಸಿದರು.

Advertisement

ನಗರದ ಮಂಜುನಾಥ ಕಲ್ಯಾಣ ಮಂಟಪದ ಆವರಣದಲ್ಲಿ ಶುಕ್ರವಾರ ನಡೆದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪರಸ್ಪರ ಬದ್ಧ ವೈರಿಗಳಾಗಿದ್ದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮೈತ್ರಿ ಸಾಧಿಸಿದೆ. ಹತ್ತಾರು ವರ್ಷದಿಂದ ಪರಸ್ಪರ ಬದ್ಧ ವೈರಿಗಳಂತೆ ರಾಜಕೀಯ ಮಾಡಿಕೊಂಡು ಬರಲಾಗಿದೆ. ಒಂದಾಗಿ ಕೆಲಸ ಮಾಡುವುದು ಸುಲಭವಲ್ಲ. ಎರಡೂ ಪಕ್ಷಗಳ ಕಾರ್ಯಕರ್ತರನ್ನು ಬೆಸೆಯುವ ಹೊಣೆ ಎರಡೂ ಪಕ್ಷಗಳ ನಾಯಕರ ಮೇಲಿದೆ. ಎರಡೂ ಪಕ್ಷಗಳ ವಿರೋಧಿ ಪಕ್ಷವಾದ ಬಿಜೆಪಿಯನ್ನು ಸಂಘಟಿತರಾಗಿ ಹೋರಾಟದಿಂದ ದೂರ ಇಡಬೇಕಾಗಿದೆ ಎಂದು ಹೇಳಿದರು.

ಉಪ ಚುನಾವಣೆಯ ಉದಾಹರಣೆ: ರಾಮನಗರ ವಿಧಾನಸಭಾ ಉಪ ಚುನಾವಣೆ ವೇಳೆಯೂ ಮೈತ್ರಿ ಸಾಧಿಸಲಾಗಿತ್ತು. ಅಗಲೂ ಇದೇ ರೀತಿಯ ವಾತಾವರಣ ಇತ್ತು. ಮಾಧ್ಯಮಗಳು ಇದನ್ನೇ ವಿಜೃಂಬಿಸಿದ್ದವು. ಎರಡೂ ಪಕ್ಷಗಳ ಕಾರ್ಯಕರ್ತರು ಪರಸ್ಪರ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ಅನಿತಾ ಅವರನ್ನು ದಾಖಲೆಯ ಮತಗಳ ಅಂತರದಿಂದ ಗೆಲ್ಲಿಸಿಕೊಂಡು ಬಂದಿದ್ದಾರೆ. ಅದೇ ರೀತಿಯ ಹೋರಾಟ ಈಗಲು ಅಗತ್ಯವಿದೆ ಎಂದರು. 

ಸರ್ವಾಧಿಕಾರಿ ಧೋರಣೆ ಪಕ್ಷ ದೂರ ಮಾಡಿ: ರಾಜ್ಯದಲ್ಲಿ ರಚನೆಯಾಗಿರುವ ಮೈತ್ರಿ ಸರ್ಕಾರದಿಂದಾಗಿ ದೇಶದಲ್ಲಿ ಸರ್ವಾಧಿಕಾರಿ ಧೋರಣೆಯ ಪಕ್ಷದ ವಿರುದ್ಧ ಮಹಾಘಟಬಂದನ್‌ ರಚನೆಗೆ ಮುನ್ನುಡಿ ಬರೆಯಲಾಗಿದೆ. ಮೈತ್ರಿ ಸರ್ಕಾರದ ರಚನೆಗೆ ದೇಶಾದ್ಯಂತ ಆಗಮಿಸಿದ್ದ ಮಹಾಘಟಬಂದನ್‌ ಪಕ್ಷಗಳ ಮುಖ್ಯಸ್ಥರು, ಲೋಕಸಭೆ ಚುನಾವಣೆಗೂ ಒಟ್ಟಾಗಿ ಹೋಗಬೇಕು ಎಂದು ಎಚ್‌.ಡಿ.ದೇವೇಗೌಡರು ಹಾಗೂ ಕಾಂಗ್ರೆಸ್‌ ವರಿಷ್ಠರು ನಿರ್ಧರಿಸಿದ್ದರು. ಉತ್ತರ ಪ್ರದೇಶ, ಆಂಧ್ರ, ಪಶ್ಚಿಮ ಬಂಗಾಲ, ಮಹಾರಾಷ್ಟ್ರದಲ್ಲೂ ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸಲಾಗುತ್ತಿದೆ ಎಂದರು.

ಡಿ.ಕೆ.ಸುರೇಶ್‌ ಪರ ಕೆಲಸ ಮಾಡಿ: ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿ, ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳು ಮೈತ್ರಿ ಸಾಧಿಸಿವೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ಅವರನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಪಡೆಬೇಕು ಎಂದು ಜೆಡಿಎಸ್‌ ಕಾರ್ಯಕರ್ತರಿಗೆ ತಾಖೀತು ಮಾಡಿದರು. 

Advertisement

ಸುರೇಶ್‌ ಗೆಲ್ಲಿಸಿ ಋಣ ತೀರಿಸಿ: ಉಪ ಚುನಾವಣೆಯಲ್ಲಿ ತಮ್ಮ ಗೆಲುವಿಗೆ ಡಿ.ಕೆ.ಸುರೇಶ್‌ ಶ್ರಮಪಟ್ಟಿದ್ದಾರೆ. ಈಗ ನಮ್ಮ ಸರಧಿ, ಕ್ಷೇತ್ರದಲ್ಲಿ ಕಾರ್ಯಕರ್ತರು ಮನೆಮನೆಗೆ ತೆರಳಿ ಡಿ.ಕೆ.ಸುರೇಶ್‌ ಪರ ಮತ ಕೇಳಬೇಕು, ಅವರನ್ನು ಗೆಲ್ಲಿಸಿ ಋಣ ತೀರಿಸಬೇಕು. ರಾಜ್ಯದಲ್ಲಿ 20ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳು ಮೈತ್ರಿಗಳ ಪಾಲಾಗಲಿದೆ, ಪ್ರಥಮ ಫ‌ಲಿತಾಂಶದಲ್ಲಿ ಇಲ್ಲಿಂದ ಡಿ.ಕೆ.ಸುರೇಶ್‌ ಮತ್ತು ಮಂಡ್ಯದಿಂದ ನಿಖೀಲ್‌ ಜಯಭೇರಿ ಭಾರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಭೆಯಲ್ಲಿ ಎಂಎಲ್‌ಸಿ ರವಿ, ತಾಪಂ ಅಧ್ಯಕ್ಷ ಗಾಣಕಲ್‌ ನಟರಾಜು, ಜೆಡಿಎಸ್‌ ತಾಲೂಕು ಅಧ್ಯಕ್ಷ ರಾಜಶೇಖರ್‌, ರಾಜ್ಯ ಜೆಡಿಎಸ್‌ ವಕ್ತಾರ ಬಿ.ಉಮೇಶ್‌, ಪ್ರಮುಖರಾದ ಎಚ್‌.ಸಿ.ರಾಜು, ಸಾಬಾನ್‌ ಸಾಬ್‌, ದೊರೆಸ್ವಾಮಿ, ಪ್ರಾಣೇಶ್‌, ಪರ್ವೀಜ್‌ ಪಾಷ, ಸೋಮಶೇಖರ ರಾವ್‌, ಮಂಜುನಾಥ್‌, ಎ.ಜೆ.ಸುರೇಶ್‌, ಶಂಕರಪ್ಪ, ಜಯಕುಮಾರ್‌, ನರಸಿಂಹಯ್ಯ ಮತ್ತಿತರರು ಭಾಗವಹಿಸಿದ್ದರು. 
 
ಫ‌ುಲ್ವಾಮ ದಾಳಿ, ರಾಜಕೀಯ ದಾಳಿ: ಫ‌ುಲ್ವಾಮಾದಲ್ಲಿ ಸೈನಿಕರ ಮೇಲೆ ನಡೆದ ದಾಳಿ ಪ್ರಕರಣ ಚುನಾವಣಾ ದಾಳಿಯಾಗಿದೆ. ವಾಯು ಸೇನೆ ನಡೆಸಿದ ದಾಳಿಯನ್ನು ಬಿಜೆಪಿ ತನ್ನ ರಾಜಕೀಯಕ್ಕೆ ಬಳಸಿಕೊಂಡಿದೆ. ಅನ್ಯ ಸರ್ಕಾರಗಳು ಆಡಳಿತದಲ್ಲಿದ್ದಾಗ ಹಲವು ಬಾರಿ ಇಂತಹ ದಾಳಿಗಳಾಗಿವೆ. ಆದರೆ, ಅಂದಿನ ಸರ್ಕಾರಗಳು ಹೀಗೆ ರಾಜಕೀಯಕ್ಕೆ ಬಳಸಿಕೊಂಡಿರಲಿಲ್ಲ ಎಂದು ಡಿ.ಕೆ.ಸುರೇಶ್‌ ಬಿಜೆಪಿ ವಿರುದ್ಧ ಹರಿಹಾಯ್ದರು.

ತಮ್ಮ ತಪ್ಪಿಗೆ ಜೆಡಿಎಸ್‌ ಕಾರ್ಯಕರ್ತರು ಕ್ಷಮಿಸಿ: ಗೊತ್ತಿಧ್ದೋ, ಗೊತ್ತಿಲ್ಲದೆಯೋ ತಮ್ಮಿಂದ ತಪ್ಪು ನಡೆದಿರಬಹುದು. ತಮ್ಮ ನಡವಳಿಕೆಯಿಂದ ಜೆಡಿಎಸ್‌ ಕಾರ್ಯಕರ್ತರ ಮನಸ್ಸಿಗೆ ನೋವಾಗುವಂತೆ ಕೆಲವೊಮ್ಮೆ ನಡೆದು ಕೊಂಡಿರಬಹುದು. ಅದಕ್ಕಾಗಿ ತಾವು ಕ್ಷಮೆ ಕೋರುತ್ತಿರುವುದಾಗಿ ಹೇಳಿದರು. ಇಂತಹ ಸಂದರ್ಭಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬಾರದು. ಇನ್ನು ಮುಂದೆ ಎರಡೂ ಪಕ್ಷಗಳ ಕಾರ್ಯಕರ್ತರನ್ನು ಒಟ್ಟಿಗೆ ಕೊಂಡೊಯ್ಯುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವುದಾಗಿ ಡಿ.ಕೆ.ಸುರೇಶ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next