Advertisement

ಅತೃಪ್ತರ ನಡೆ ಮೇಲೆ ಮೈತ್ರಿ ಭವಿಷ್ಯ

01:43 AM May 24, 2019 | Team Udayavani |

ಬೆಂಗಳೂರು: ಲೋಕಸಭೆ ಚುನಾವಣೆ ಫ‌ಲಿತಾಂಶ ರಾಜ್ಯದ ಮೈತ್ರಿ ಸರ್ಕಾರದ ಭವಿಷ್ಯದ ಮೇಲೂ ಪರಿಣಾಮ ಬೀರಿದ್ದು, ರಾಜ್ಯದಲ್ಲಿ ಬಿಜೆಪಿ ನಿರೀಕ್ಷೆಗೂ ಮೀರಿ ಹೆಚ್ಚಿನ ಸ್ಥಾನಗಳನ್ನು ಗೆದ್ದಿರುವುದರಿಂದ ಮತ್ತು ಆಪರೇಷನ್‌ ಕಮಲದ ಆತಂಕ ಹೆಚ್ಚಾಗಿರುವುದರಿಂದ ಸರ್ಕಾರದ ಭವಿಷ್ಯ ಡೋಲಾಯಮಾನವಾಗಿದೆ.

Advertisement

ಸದ್ಯದ ವಿಧಾನಸಭೆ ಚುನಾವಣೆಯಲ್ಲಿ ಬಲಾಬಲ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ಕುಂದಗೋಳ ಕ್ಷೇತ್ರದ ಗೆಲುವಿನೊಂದಿಗೆ 78 ಸ್ಥಾನ ಹೊಂದಿದ್ದು, ಜೆಡಿಎಸ್‌ 37 ಶಾಸಕ ಬಲ ಹೊಂದಿದೆ. ಬಿಜೆಪಿ 104 ಶಾಸಕರ ಸಂಖ್ಯಾಬಲ ಹೊಂದಿತ್ತು. ಚಿಂಚೋಳಿ ಕ್ಷೇತ್ರದಲ್ಲಿ ಡಾ.ಉಮೇಶ್‌ ಜಾಧವ್‌ ಪುತ್ರ ಡಾ.ಅವಿನಾಶ್‌ ಜಾಧವ್‌ ಗೆಲ್ಲುವುದರೊಂದಿಗೆ ಬಿಜೆಪಿ ಸಂಖ್ಯೆ 105 ಏರಿದಂತಾಗಿದೆ. ಇಬ್ಬರು ಪಕ್ಷೇತರರು ಹಾಗೂ ಒಬ್ಬರು ಬಿಎಸ್‌ಪಿ ಶಾಸಕರಿದ್ದಾರೆ.

ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಮೈತ್ರಿ ಸರ್ಕಾರ ಸರಳ ಬಹುಮತ ಹೊಂದಿದ್ದರೂ, ಲೋಕಸಭೆ ಚುನಾವಣೆ ಫ‌ಲಿತಾಂಶದ ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವ ಬಂಡಾಯ ಶಾಸಕರ ಗುಂಪು ಯಾವ ಸಂದರ್ಭದಲ್ಲಿ ಯಾವ ರೀತಿಯ ತೀರ್ಮಾನ ತೆಗೆದುಕೊಳ್ಳುತ್ತದೆ ಎನ್ನುವುದು ಮೈತ್ರಿ ಸರ್ಕಾರದ ಭವಿಷ್ಯವನ್ನು ನಿರ್ಧರಿಸಲಿದೆ.

ರಮೇಶ್‌ ಜಾರಕಿಹೊಳಿಯೊಂದಿಗೆ ಬಂಡಾಯದ ಆರಂಭದಲ್ಲಿ ಕನಿಷ್ಠ 18 ಜನ ಅತೃಪ್ತ ಶಾಸಕರು ಗುರುತಿಸಿಕೊಂಡಿದ್ದರು ಎನ್ನಲಾಗುತ್ತಿತ್ತು. ಅಲ್ಲದೇ ಅವರೆಲ್ಲರೂ ರಾಜೀನಾಮೆ ನೀಡುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ನಂತರ ಅವರ ಸಂಖ್ಯೆ ನಾಲ್ಕಕ್ಕೆ ಇಳಿದಿತ್ತು.

ಈಗ ಲೋಕಸಭೆ ಫ‌ಲಿತಾಂಶ ಮೈತ್ರಿ ಸರ್ಕಾರದ ವಿರುದ್ಧ ಬಂದಿರುವುದು ಬಂಡಾಯಗಾರರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ. ಇತ್ತೀಚೆಗೆ ಸಿದ್ದರಾಮಯ್ಯ ಹಾಗೂ ದಿನೇಶ್‌ ಗುಂಡೂರಾವ್‌ ವಿರುದ್ಧ ನೇರ ಆರೋಪ ಮಾಡಿರುವ ರೋಷನ್‌ ಬೇಗ್‌ ಅವರ ನಡೆಯೂ ಕುತುಹಲಕಾರಿಯಾಗಿದ್ದು, ಮೈತ್ರಿ ಪಕ್ಷಕ್ಕೆ ಮತ್ತಷ್ಟು ಕಂಟಕವಾಗುವ ಸಾಧ್ಯತೆ ಇದೆ.

Advertisement

ಎಷ್ಟು ಶಾಸಕರು ಬೇಕು?: ಕಾಂಗ್ರೆಸ್‌ ಅತೃಪ್ತರು ಕನಿಷ್ಠ 11 ಜನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಮೈತ್ರಿ ಸರ್ಕಾರಕ್ಕೆ ಕಂಟಕವಾಗಲಿದೆ. ಅಷ್ಟೊಂದು ಶಾಸಕರನ್ನು ಒಗ್ಗೂಡಿಸುವ ಶಕ್ತಿ ರಮೇಶ್‌ ಜಾರಕಿಹೊಳಿಗೆ ಇಲ್ಲ ಎಂಬ ಮಾತು ಕೇಳಿ ಬಂದಿವೆ. ಅದೇ ಕಾರಣಕ್ಕೆ ಅವರು ಐವರು ಶಾಸಕರನ್ನು ತಮ್ಮ ಜತೆ ರಾಜೀನಾಮೆ ಕೊಡಿಸುವುದಾಗಿ ಹೇಳಿದ್ದಾರೆ.

ಇನ್ನು ಸರ್ಕಾರ ಉರುಳಿಸಲು ಬೇಕಾದ ಕನಿಷ್ಠ 6 ಶಾಸಕರನ್ನು ಬಿಜೆಪಿ ನಾಯಕರೇ ರಾಜೀನಾಮೆ ಕೊಡಿಸುವ ಕೆಲಸ ಮಾಡಬೇಕು. ಯಡಿಯೂರಪ್ಪ ಅವರ ವೇಗಕ್ಕೆ ಬಿಜೆಪಿ ಹೈಕಮಾಂಡ್‌ ಯಾವ ರೀತಿ ಸ್ಪಂದಿಸುತ್ತದೆ ಹಾಗೂ ಅತೃಪ್ತ ಶಾಸಕರು ತಕ್ಷಣಕ್ಕೆ ರಾಜೀನಾಮೆ ನೀಡಲು ಎಷ್ಟರ ಮಟ್ಟಿಗೆ ಸಿದ್ದರಿದ್ದಾರೆ ಎನ್ನುವುದರ ಮೇಲೆ ಮೈತ್ರಿ ಸರ್ಕಾರದ ಭವಿಷ್ಯ ನಿಂತಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next