Advertisement

ಮೈತ್ರಿ ಕಿತ್ತಾಟ: ಫ‌ಲಿತಾಂಶದ ಮೇಲೆ ಪರಿಣಾಮ

12:16 AM Apr 03, 2019 | Lakshmi GovindaRaju |

ಬೆಂಗಳೂರು: ಕಾಂಗ್ರೆಸ್‌- ಜೆಡಿಎಸ್‌ ನಾಯಕರು ಒಂದಾಗಿ ಒಗಟ್ಟು ಪ್ರದರ್ಶಿಸಿದರೂ ಕೆಳಹಂತದಲ್ಲಿ ಕಾರ್ಯಕರ್ತರ ಕಿತ್ತಾಟ ತೀವ್ರವಾಗಿದೆ. ಇದರ ಪರಿಣಾಮ ಚುನಾವಣಾ ಫ‌ಲಿತಾಂಶದಲ್ಲಿ ಗೊತ್ತಾಗಲಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೇಳಿದರು.

Advertisement

ರಾಜ್ಯ ಬಿಜೆಪಿ ಮಾಧ್ಯಮ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ಬಜೆಟ್‌ ಮಂಡನೆ, ಖಾತೆ ಹಂಚಿಕೆ, ಜಿಲ್ಲಾ ಉಸ್ತುವಾರಿ ಹಂಚಿಕೆ ಸೇರಿದಂತೆ ಇತರೆ ವಿಚಾರಗಳಲ್ಲಿ ಕಾಂಗ್ರೆಸ್‌- ಜೆಡಿಎಸ್‌ ನಡುವೆ ಹೊಂದಾಣಿಕೆ ಮೂಡಿರಲಿಲ್ಲ.

ಈ ಭಿನ್ನಾಭಿಪ್ರಾಯ ತುಮಕೂರು ಕ್ಷೇತ್ರದಿಂದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ನಾಮಪತ್ರ ಸಲ್ಲಿಕೆ ನಂತರ ಕಡಿಮೆಯಾಗುವ ನಿರೀಕ್ಷೆಯೂ ಹುಸಿಯಾಗಿದೆ. ಉಭಯ ಪಕ್ಷಗಳ ಮುಖಂಡರು, ಕಾರ್ಯಕರ್ತರ ಭಿನ್ನಾಭಿಪ್ರಾಯ, ಕಿತ್ತಾಟ ಇನ್ನೂ ಮುಗಿದಿಲ್ಲ ಎಂದು ತಿಳಿಸಿದರು.

ಎಚ್‌.ಡಿ.ದೇವೇಗೌಡರೊಂದಿಗೆ ಜಂಟಿ ಪ್ರವಾಸ ನಡೆಸುವ ಮೂಲಕ ಗೊಂದಲಗಳಿಗೆ ತೆರೆ ಬೀಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಮೈಸೂರಿನಲ್ಲಿ ಸಚಿವ ಜಿ.ಟಿ.ದೇವೇಗೌಡ ಈವರೆಗೆ ಪ್ರಚಾರಕ್ಕೆ ಹೋಗಿಲ್ಲ.

ಕಾಂಗ್ರೆಸ್‌ ಶಾಸಕ ಡಾ.ಕೆ.ಸುಧಾಕರ್‌ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಗೆಲ್ಲುತ್ತಾರೆ ಎಂದು ಹೇಳಿದ್ದಾರೆ. ಸಚಿವ ಆರ್‌.ವಿ.ದೇಶಪಾಂಡೆ ಉತ್ತರ ಕನ್ನಡದಲ್ಲಿ ಸೋತ ಅಭ್ಯರ್ಥಿಗೆ ಟಿಕೆಟ್‌ ನೀಡಲಾಗಿದೆ ಎಂದಿದ್ದು, ಉಭಯ ಪಕ್ಷಗಳ ಹೊಂದಾಣಿಕೆ ಮಟ್ಟವನ್ನು ತೋರಿಸುತ್ತದೆ ಎಂದು ವ್ಯಂಗ್ಯವಾಡಿದರು.

Advertisement

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಂಡ್ಯಕ್ಕೆ ಸೀಮಿತವಾಗಿದ್ದು, ಆಡಳಿತಕ್ಕೆ ಗಮನ ನೀಡುತ್ತಿಲ್ಲ. ದೇವೇಗೌಡರು ತುಮಕೂರಿನಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ. ಅವರೊಂದಿಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಕೂಡ ಪ್ರಚಾರ ನಡೆಸುತ್ತಿದ್ದಾರೆ.

ಸಚಿವ ಎಚ್‌.ಡಿ.ರೇವಣ್ಣ ಹಾಸನ ಗಡಿ ದಾಡುತ್ತಿಲ್ಲ. ಸ್ವಾತಿ ನಕ್ಷತ್ರದ ರೇವಣ್ಣ ಅವರಿಗೆ ಐದು ನಿಂಬೆಹಣ್ಣು ಕೊಟ್ಟು ಹಾಸನ ಬಿಟ್ಟು ಹೋದರೆ ಸೋಲಾಗಬಹುದು ಎಂದು ಹೇಳಿರಬಹುದು. ಹಾಗಾಗಿ ಕ್ಷೇತ್ರ ಬಿಟ್ಟು ಹೊರ ಬರುತ್ತಿಲ್ಲ ಎಂದು ಲೇವಡಿ ಮಾಡಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಯಿಗೆ ಬಂದಂತೆ ಮಾತನಾಡುತ್ತಿದ್ದು, ಅವರಿಗೆ ಶೋಭೆ ತರುವುದಿಲ್ಲ. ಎರಡು ಪಕ್ಷಗಳ ನಾಯಕರು ಒಂದಾಗಿದ್ದರೂ ಕೆಳಹಂತದಲ್ಲಿ ಕಾರ್ಯಕರ್ತರು ಒಂದಾಗಿಲ್ಲ. ಪರಸ್ಪರ ಕಿತ್ತಾಟದಲ್ಲಿ ತೊಡಗಿದ್ದು, ತೀವ್ರ ಸ್ವರೂಪ ಪಡೆಯುತ್ತಿದೆ ಎಂದು ಹೇಳಿದರು.

ರಾಹುಲ್‌ ಭರವಸೆ ಹಾಸ್ಯಾಸ್ಪದ: ರಾಜ್ಯದಲ್ಲಿ ಆರು ವರ್ಷದಿಂದ ಹಾಗೂ ಬಿಬಿಎಂಪಿಯಲ್ಲಿ ನಾಲ್ಕು ವರ್ಷದಿಂದ ಕಾಂಗ್ರೆಸ್‌ ಪಕ್ಷವೇ ಆಡಳಿತದಲ್ಲಿದ್ದರೂ ಜಾರಿಯಾಗದ “ಮೇಯರ್‌ ಇನ್‌ ಕೌನ್ಸಿಲ್‌’ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವುದಾಗಿ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಪ್ರಣಾಳಿಕೆಯಲ್ಲಿ ಹೇಳಿರುವುದು ಹಾಸ್ಯಾಸ್ಪದ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೇಳಿದರು.

ಮಹಾನಗರಗಳಲ್ಲಿ ಜನರಿಂದಲೇ ನೇರವಾಗಿ ಮೇಯರ್‌ ಆಯ್ಕೆಯಾಗುವ “ಮೇಯರ್‌ ಇನ್‌ ಕೌನ್ಸಿಲ್‌’ ವ್ಯವಸ್ಥೆ ಮೂಲಕ ಉತ್ತರದಾಯಿತ್ವ ತರಲಾಗುವುದು ಎಂದು ರಾಹುಲ್‌ಗಾಂಧಿ ಹೇಳಿದ್ದಾರೆ. ಬಿಬಿಎಂಪಿಯಲ್ಲಿ ಕಾಂಗ್ರೆಸ್‌ ಪಕ್ಷವೇ ಅಧಿಕಾರದಲ್ಲಿದೆ. ಕರ್ನಾಟಕದಲ್ಲಿ ಆರು ವರ್ಷಗಳಿಂದ ಕಾಂಗ್ರೆಸ್‌ ಆಡಳಿತ ಮುಂದುವರಿದಿದೆ. ಈ ಹಿಂದೆ ರಚನೆಯಾಗಿದ್ದ ಬಿ.ಎಸ್‌.ಪಾಟೀಲ್‌ ನೇತೃತ್ವದ ಬಿಬಿಎಂಪಿ ಪುನಾರಚನೆ ಸಮಿತಿಯೂ ಇದೇ ಶಿಫಾರಸು ಮಾಡಿತ್ತು.

ಬೆಂಗಳೂರನ್ನು ಒಡೆಯುವ ಚಿಂತನೆಯನ್ನು ಬಿಜೆಪಿ ವಿರೋಧಿಸಿದ್ದರೂ ಮೇಯರ್‌ ಇನ್‌ ಕೌನ್ಸಿಲ್‌ ಪರಿಕಲ್ಪನೆಗೆ ಸ್ವಾಗತಿಸಿತ್ತು. ಇಷ್ಟಾದರೂ ಜಾರಿಯಾಗಿಲ್ಲ. ರಾಹುಲ್‌ಗಾಂಧಿ ಹೇಳಿದ ವಿಚಾರವನ್ನು ಅವರದೇ ಪಕ್ಷ ಜಾರಿಗೆ ತಂದಿಲ್ಲ. ಸುಳ್ಳು ಭರವಸೆ ನೀಡುವುದನ್ನು ರಾಹುಲ್‌ ಗಾಂಧಿಯವರು ನಿಲ್ಲಿಸಬೇಕು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next