Advertisement

ಮೈತ್ರಿಧರ್ಮ: ಎ.ಟಿ.ರಾಮಸ್ವಾಮಿ ಕಿವಿಮಾತು

06:00 AM Jul 04, 2018 | Team Udayavani |

ವಿಧಾನಸಭೆ: ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ -ಜೆಡಿಎಸ್‌ ಪಕ್ಷಗಳ ನಡವಳಿಕೆ, ಮೈತ್ರಿ ಧರ್ಮ ಪಾಲನೆ ಕುರಿತು ಹಿರಿಯ ಸದಸ್ಯ
ಎ.ಟಿ. ರಾಮಸ್ವಾಮಿ ಸದನದಲ್ಲಿ ತಮ್ಮದೇ ಆದ ಶೈಲಿಯಲ್ಲಿ ಕಿವಿಮಾತು ಹೇಳಿದರು. ಜತೆಗೆ, ಪ್ರತಿಪಕ್ಷ ಬಿಜೆಪಿಗೂ ಮಾತಿನಲ್ಲೇ ಬಾಣ ಬಿಟ್ಟು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಖ್ಯಾಬಲ ಮುಖ್ಯ. ಯಾರಿಗೂ ಬಹುಮತ ಬರದಿದ್ದಾಗ ಸಂಖ್ಯಾಬಲ ಒಪ್ಪಿ ಸರ್ಕಾರ ಒಳ್ಳೆಯ ಕೆಲಸ ಮಾಡಲು ರಚನಾತ್ಮಕ ಸಲಹೆ ಹಾಗೂ ಹೋರಾಟ ಮಾಡಿ ಎಂದು ಹೇಳಿದರು. ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಪರ ಮಾತನಾಡಿದ ಅವರು, ಎರಡೂ ಪಕ್ಷಗಳಲ್ಲಿ ಸಚಿವ ಸ್ಥಾನಕ್ಕಾಗಿ ನಡೆಯುತ್ತಿರುವ ಪೈಪೋಟಿಯನ್ನೂ ಟೀಕಿಸಿದರು.

Advertisement

ರಾಮಸ್ವಾಮಿ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಜೆ.ಸಿ.ಮಾಧುಸ್ವಾಮಿ, ನೀವು ನಿಮ್ಮ ಸಮನ್ವಯ ಸಮಿತಿ, ಪಕ್ಷದ ಶಾಸಕಾಂಗ ಸಭೆಯಲ್ಲಿ ಮಾತನಾಡುವುದನ್ನು ಇಲ್ಲಿ ಮಾತನಾಡುತ್ತಿದ್ದೀರಿ. ನಮಗೆ ಅದು ಸಂಬಂಧವಿಲ್ಲ. ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಮಾತನಾಡಿ ಎಂದು ತಿಳಿಸಿದರು. ಕಾಂಗ್ರೆಸ್‌, ಜೆಡಿಎಸ್‌ನ ನಡುವೆ ಮೈತ್ರಿಧರ್ಮ ಪಾಲನೆ, ಸಚಿವಗಿರಿಗೆ ಕಿತ್ತಾಟ ನಮಗೇಕೆ ಹೇಳುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು. ಆಗ, ಎ.ಟಿ. ರಾಮಸ್ವಾಮಿ, ಬರುತ್ತೇನೆ, ನಾನು ಅಲ್ಲಿಗೆ ಬರುತ್ತೇನೆ. ಆದರೆ, ಸಮ್ಮಿಶ್ರ ಸರ್ಕಾರ ರಚನೆಯಾದ ನಂತರ ವ್ಯಕ್ತವಾದ ಅಭಿಪ್ರಾಯ, ಹೇಳಿಕೆಗಳ ಬಗ್ಗೆ ಪ್ರಸ್ತಾಪಿಸಿದೆ ಅಷ್ಟೇ ಎಂದು ಮಾತು ಮುಂದುವರಿಸಿದರು. ಸಿದ್ದರಾಮಯ್ಯ ಅವರನ್ನು ಜಿ.ಟಿ.ದೇವೇಗೌಡರ ಮೂಲಕ ಸೋಲಿಸಿದಿರಿ ಎಂಬ ಮಾತುಗಳನ್ನು ಆಡುತ್ತೀರಿ. ಇದೇ ಯಡಿಯೂರಪ್ಪ ಅವರು ಮೈಸೂರಿಗೆ ಹೋಗಿ 150 ಸ್ಥಾನ ಗೆಲ್ಲುವುದು ನಮಗೆ ಮುಖ್ಯವಲ್ಲ, ಸಿದ್ದರಾಮಯ್ಯ ಸೋಲುವುದು ನಮಗೆ ಮುಖ್ಯ ಎಂದು ಹೇಳಿಲ್ಲವೇ? ಎಂದು ಟಾಂಗ್‌ ನೀಡಿದರು.

ರಾಜಕಾರಣದಲ್ಲಿ ಗೆರೆಗಳಿಲ್ಲ, ಮೌಲ್ಯಗಳನ್ನು ಕಿತ್ತೆಸೆದು ಬಂದಿದ್ದೇವೆ. ಆ ನೋವು ನನಗೂ ಕಾಡುತ್ತಿದೆ. 24 ಕ್ಯಾರೆಟ್‌ ಬಂಗಾರದಲ್ಲಿ ಯಾರೂ ಒಡವೆ ಮಾಡಲು ಆಗುವುದಿಲ್ಲ, 22 ಕ್ಯಾರೆಟ್‌ ಅಂತಾರೆ ಮತ್ತೆ ಕೆಲವರು 20 ಕ್ಯಾರೆಟ್‌ಗೂ ಇಳಿಸಬಹುದು ಆ ನಂತರ ರೋಲ್ಡ್‌ ಗೋಲ್ಡ್‌ ಸಹ ಆಗಬಹುದು.
● ಎ.ಟಿ.ರಾಮಸ್ವಾಮಿ, ಜೆಡಿಎಸ್‌ ಸದಸ್ಯ

ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ
ನಿರ್ಣಯ ಪರ ಮಾತನಾಡಿದ ರಾಮಸ್ವಾಮಿ.

Advertisement

Udayavani is now on Telegram. Click here to join our channel and stay updated with the latest news.

Next