Advertisement

ರಣಕುಂಡೆ ಕೊಲೆ:  ಹಂತಕರ ಬಂಧನ

04:41 PM Apr 06, 2022 | Team Udayavani |

ಬೆಳಗಾವಿ: ಎಂಟು ವರ್ಷಗಳ ಹಿಂದೆ ತಂದೆ ಕೊಟ್ಟಿದ್ದ 20 ಸಾವಿರ ರೂ. ವಾಪಸ್‌ ಕೇಳಿದ್ದು ಹಾಗೂ ಎರಡು ವರ್ಷದ ಹಿಂದೆ ಮೊಬೈಲ್‌ ಕಳ್ಳತನದ ಆರೋಪ ಹೊರಿಸಿದ್ದಕ್ಕೆ ರಣಕುಂಡೆ ಗ್ರಾಮದಲ್ಲಿ ಯುವಕನ ಕೊಲೆಗೈದ ಹಂತಕರನ್ನು ಡಿಸಿಪಿ ರವೀಂದ್ರ ಗಡಾದಿ ನೇತೃತ್ವದ ತಂಡ 48 ಗಂಟೆಗಳಲ್ಲಿಯೇ ಹೆಡೆಮುರಿ ಕಟ್ಟಿ ಜೈಲಿಗಟ್ಟಿದೆ.

Advertisement

ರಣಕುಂಡೆ ಗ್ರಾಮದ ಪ್ರಮೋದ ಸಹದೇವ ಪಾಟೀಲ(31), ಶ್ರೀಧರ ಸಹದೇವ ಪಾಟೀಲ(28), ಮಹೇಂದ್ರ ಯಲ್ಲಪ್ಪ ಕಂಗ್ರಾಳಕರ(21) ಹಾಗೂ ಕಿಣಯೇ ಗ್ರಾಮದ ಬೋಮಾನಿ ಕೃಷ್ಣಾ ಡೋಕರೆ(33) ಎಂಬಾತರನ್ನು ಗ್ರಾಮೀಣ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಏ. 2ರಂದು ಮಧ್ಯರಾತ್ರಿ ರಣಕುಂಡೆ ಗ್ರಾಮದಲ್ಲಿ ಯುವಕ ನಾಗರಾಜ ಪಾಟೀಲನನ್ನು ಕೊಲೆಗೈದು, ಸಹೋದರ ಮೋಹನ ಪಾಟೀಲನ ಮೇಲೆ ಹಲ್ಲೆ ನಡೆಸಿದ್ದ ಹಂತಕರನ್ನು ಪೊಲೀಸರು ಬಲೆಗೆ ಬೀಳಿಸಿದ್ದಾರೆ.

ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಕೊಲೆಗೀಡಾದ ಯುವಕನ ತಾಯಿ ನೀಡಿದ ದೂರಿದ ಆಧಾರದ ಮೇಲೆ ತನಿಖೆ ನಡೆಸಿದ ಡಿಸಿಪಿ ರವೀಂದ್ರ ಗಡಾದಿ ಅವರು ಸಂಬಂಧಿಸಿದವರನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದಾಗ ಆರೋಪಿಗಳು ತಪ್ಪೋಪ್ಪಿಕೊಂಡಿದ್ದಾರೆ. ಪೊಲೀಸರ ಎದುರು ಕೊಲೆಗೆ ಕಾರಣ ಏನು ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಪ್ರಮೋದ ಪಾಟೀಲ ಅವರ ಕುಟುಂಬಕ್ಕೆ ಎಂಟು ವರ್ಷಗಳ ಹಿಂದೆ ನಾಗರಾಜ ಪಾಟೀಲನ ತಂದೆ 20 ಸಾವಿರ ರೂ. ಸಾಲ ನೀಡಿದ್ದರು. ಇದನ್ನು ಆಗಾಗ ಪ್ರಮೋದಗೆ ನಾಗರಾಜ ಕೇಳುತ್ತಿದ್ದನು. ಜತೆಗೆ ಎರಡು ವರ್ಷದ ಹಿಂದೆ ನಾಗರಾಜನ ಮೊಬೈಲ್‌ ಕಳ್ಳತನವಾಗಿತ್ತು. ಪ್ರಮೋದ ಪಾಟೀಲನೇ ಮೊಬೈಲ್‌ ಕಳವು ಮಾಡಿರುವ ಬಗ್ಗೆ ನಾಗರಾಜ ಶಂಕೆ ವ್ಯಕ್ತಪಡಿಸಿ ಜಗಳವಾಡುತ್ತಿದ್ದನು. ಈ ವಿಷಯದಲ್ಲಿ ಇಬ್ಬರ ನಡುವೆ ಜಗಳವಾಗುತ್ತಿತ್ತು.

Advertisement

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೆಲ ತಿಂಗಳ ಹಿಂದೆ ಪ್ರಮೋದ ಪಾಟೀಲನ ಪತ್ನಿಗೆ ನಾಗರಾಜ ಅವಾಚ್ಯ ಶಬ್ದಗಳಿಂದ ಬಗೈದಿದ್ದನು. ಇದು ಪ್ರಮೋದನಿಗೆ ಸಿಟ್ಟು ತರಿಸಿತ್ತು. ಇಬ್ಬರ ನಡುವಿನ ಜಗಳ ವಿಕೋಪಕ್ಕೆ ತಿರುಗಿತ್ತು. ಏ. 2ರಂದು ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಪ್ರಮೋದ, ಸಹೋದರ ಶ್ರೀಧರ ಸೇರಿದಂತೆ ನಾಲ್ಕಿಐದು ಜನ ನಾಗರಾಜನ ಮನೆಗೆ ಹೋಗಿ ಜಗಳವಾಡಿದ್ದಾರೆ.

ನಾಗರಾಜನಿಗೆ ಬುದ್ಧಿ ಕಲಿಸಬೇಕೆಂದು ಕೇವಲ ಕೈ ಕಾಲು ಮುರಿದು ಹಲ್ಲೆ ನಡೆಸುವ ಉದ್ದೇಶ ಹೊಂದಿದ್ದರು. ಈ ಗಲಾಟೆಯಲ್ಲಿ ಮಹೇಂದ್ರ ಕಂಗ್ರಾಳಕರನ ತಲೆಗೆ ಕಲ್ಲಿನಿಂದ ಹೊಡೆದಿದ್ದಾನೆ. ಆಗ ಜಗಳ ಕೈ ಕೈ ಮಿಲಾಯಿಸುವಷ್ಟು ತಿರುಗಿ ನಾಗರಾಜ ಹಾಗೂ ಸಹೋದರ ಮೋಹನನ್ನು ಕಾರಿನಲ್ಲಿ ಹಾಕಿ ಎತ್ತಿಕೊಂಡು ಹೋಗಿದ್ದಾರೆ. ಅಲ್ಲಿ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾರೆ. ನಾಗರಾಜನ ಕಾಲಿಗೆ ರಾಡ್‌ನಿಂದ ಹೊಡೆದಾಗ ರಕ್ತಸ್ರಾವವಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಮೋಹನ ಮೇಲೂ ಹಲ್ಲೆ ನಡೆಸಿ ಇಬ್ಬರನ್ನೂ ಕಾರಿನಲ್ಲಿ ಎತ್ತಿ ಹಾಕಿ ಅವರ ಮನೆ ಎದುರು ಬಿಸಾಕಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

ನಡುರಸ್ತೆಯಲ್ಲಿ ಯುವಕನ ಶವ ಬಿದ್ದಿರುವುದನ್ನು ಕಂಡು ಗ್ರಾಮಸ್ಥರು ಬೆಚ್ಚಿ ಬಿದ್ದು ಪೊಲೀಸರಿಗೆ ವಿಷಯ ತಿಳಿಸಿದ್ದರು. ಪ್ರಕರಣದ ಬೆನ್ನತ್ತಿದ ಗ್ರಾಮೀಣ ಠಾಣೆ ಪೊಲೀಸರು ಹಂತಕರನ್ನು ಕೇವಲ ಎರಡೇ ದಿನದಲ್ಲಿ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಕೊಲೆಯಾದ ನಾಗರಾಜ್‌ ಪಾಟೀಲ್‌ ಮರ್ಚೆಂಟ್‌ ನೆವಿಯಲ್ಲಿ ಕೆಲಸ ಮಾಡುತ್ತಿದ್ದನು. ಕೆಲ ತಿಂಗಳ ಹಿಂದೆ ರಾಜೀನಾಮೆ ನೀಡಿದ್ದನು. ಸದ್ಯ ಗುಜರಾತ್‌ನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದನು. ನಾಲ್ಕು ತಿಂಗಳ ಹಿಂದಷ್ಟೇ ಊರಿಗೆ ವಾಪಸ್‌ ಆಗಿದ್ದನು. ಮನೆಗೆ ಬಂದಾಗಲೇ ಪ್ರಮೋದನೊಂದಿಗೆ ಮತ್ತೆ ಜಗಳವಾಡಿದ್ದನು ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next