ಆರೋಪಗಳಿಗೆ ತಕ್ಕ ಉತ್ತರ ನೀಡದೇ ಇರುವ ಸಚಿವರ ವಿರುದ್ಧ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಗರಂ ಆಗಿದ್ದಾರೆ. ಜತೆಗೆ, ಪ್ರತಿಪಕ್ಷಗಳ ಪ್ರತಿ ಟೀಕೆಗೆ ಮುಖ್ಯಮಂತ್ರಿಗಳೊಬ್ಬರೇ ತಿರುಗೇಟು ನೀಡಿದರೆ ಸಾಲದು, ಎಲ್ಲರೂ ಪ್ರತಿಕ್ರಿಯಿಸಬೇಕು ಎಂದೂ ಖಡಕ್ಕಾಗಿ ಸೂಚಿಸಿದ್ದಾರೆ.
Advertisement
ಶುಕ್ರವಾರ ವಿಧಾನಸೌಧದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಚಿವರಿಗೆ ವಿನಂತಿ ರೂಪದ ಎಚ್ಚರಿಕೆ ನೀಡಿದ ಅವರು, ಕಳೆದ ನಾಲ್ಕೂವರೆ ವರ್ಷದಲ್ಲಿ ಸಚಿವರು, ಸರ್ಕಾರ ಹಾಗೂ ಪಕ್ಷದ ವಿರುದ್ಧ ಬಂದಿರುವ ಆರೋಪಗಳಿಗೆ ಪ್ರತಿ ಕ್ರಿಯೆ ನೀಡದೆ ಮೌನ ವಹಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. “ಸರ್ಕಾರದ ಸಾಧನೆಗಳನ್ನು ಹೇಳಿಕೊಳ್ಳಲು ಎಷ್ಟು ಪತ್ರಿಕಾಗೋಷ್ಠಿ ಮಾಡಿದ್ದೀರಿ? ಪ್ರತಿಪಕ್ಷಗಳ ಟೀಕೆಗಳಿಗೆ ಎಷ್ಟು ಪ್ರತಿಕ್ರಿಯೆ ನೀಡಿದ್ದೀರಿ?’ ಎಂದು ಸಚಿವರಿಗೆ ಮಾಹಿತಿ ನೀಡುವಂತೆ ವೇಣುಗೋಪಾಲ ಕೇಳಿದರು. ಪ್ರತಿಪಕ್ಷಗಳ ಪ್ರತಿಯೊಂದು ಟೀಕೆಗೂ ಮುಖ್ಯ ಮಂತ್ರಿಯೊಬ್ಬರೇ ತಿರುಗೇಟು ನೀಡಿದರೆ ಸಾಲದು. ಎಲ್ಲರೂ ಪ್ರತಿಕ್ರಿಯೆ ನೀಡಬೇಕು. ಪಕ್ಷ ನಿಮ್ಮನ್ನು ಮಂತ್ರಿಗಳನ್ನಾಗಿ ಮಾಡಿದೆ. ಪಕ್ಷ ಇಲ್ಲದಿದ್ದರೆ ಅಧಿಕಾರ ಇಲ್ಲ ಎನ್ನುವ ಮಾತನ್ನು ಸಚಿವರಿಗೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಅಲ್ಲದೆ, ಬೂತ್ ಮಟ್ಟದ ಸಮಿತಿಗಳ ರಚನೆ ಮಾಡುವಲ್ಲಿ ಶಾಸಕರು ನಿರಾಸಕ್ತಿ ವಹಿಸುತ್ತಿದ್ದಾರೆ ಎಂಬ ಆರೋಪ ಕೇಳಿ
ಬಂದಿದ್ದರಿಂದ ಕಡ್ಡಾಯವಾಗಿ ಶಾಸಕರು ಬೂತ್ ಕಮಿಟಿ ರಚನೆ ಮಾಡಬೇಕು ಮತ್ತು ಮನೆ ಮನೆಗೆ ಕಾಂಗ್ರೆಸ್
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಸೂಚಿಸಿದ್ದಾರೆ. ಅಲ್ಲದೆ, ಪ್ರತಿ ದಿನ ಎಷ್ಟು ಬೂತ್ ಗಳಿಗೆ ಭೇಟಿ ನೀಡಿ, ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮ ನಡೆಸಿದ್ದೀರಿ ಎಂಬ ಬಗ್ಗೆ ರಾಜ್ಯ ಘಟಕಕ್ಕೆ ಮತ್ತು ಹೈಕಮಾಂಡ್‌ಗೆ ವರದಿ ನೀಡುವಂತೆ ಶಾಸಕರಿಗೆ ವೇಣುಗೋಪಾಲ ತಾಕೀತು ಮಾಡಿದ್ದಾರೆ. ಹಾಲಿ ಶಾಸಕರಲ್ಲಿ ಎಲ್ಲರೂ ಮತ್ತೆ ವಿಧಾನಸಭೆಗೆ ಬರಬೇಕು ಎನ್ನುವುದು ಪಕ್ಷದ ಬಯಕೆ. ಅದನ್ನು ಉಳಿಸಿಕೊಳ್ಳಲು ಎಲ್ಲರೂ ಸಕ್ರೀಯರಾಗಿ ಕೆಲಸ ಮಾಡಿ ಎಂದು ಸೂಚಿಸಿದ್ದಾರೆ
ಎಂದು ತಿಳಿದು ಬಂದಿದೆ.