ರಾಯಚೂರು: ನಗರದಲ್ಲಿ ಹಲವು ಕಾಮಗಾರಿಗಳು 2017ರ ವೇಳೆಗೆ ಪೂರ್ಣಗೊಳ್ಳಬೇಕಿತ್ತು. ಆದರೆ, ಆಕಸ್ಮಿಕ ಸಮಸ್ಯೆಗಳು ಎದುರಾದ ಕಾರಣ ಮುಗಿಸಲು ಆಗಿಲ್ಲ. ಇನ್ನೂ ಆರು ತಿಂಗಳಲ್ಲಿ ಎಲ್ಲ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾ ಧಿಕಾರಿ ಡಾ| ಬಗಾದಿ ಗೌತಮ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಯಚೂರು ನಗರದಲ್ಲಿ ಪ್ರಗತಿಯಲ್ಲಿರುವ 24/7 ನೀರು ಪೂರೈಸುವ ಯೋಜನೆ, ಒಳಚರಂಡಿ ಹಾಗೂ ರಸ್ತೆ ಸೇರಿ ಅನೇಕ ಕಾಮಗಾರಿಗಳನ್ನು ಮುಂದಿನ ಆರು ತಿಂಗಳಲ್ಲಿ ಮುಗಿಸಲು ನಿರ್ದೇಶನ ನೀಡಲಾಗಿದೆ. ಗುತ್ತಿಗೆದಾರರಿಗೆ ನೀಡಿದ ಕಾಲಾವಕಾಶದ ಪ್ರಕಾರ ಕಳೆದ ಆಗಸ್ಟ್ ವೇಳೆಗೆಲ್ಲ ನಿರಂತರ ಕುಡಿಯುವ ನೀರಿನ ಕಾಮಗಾರಿ, ಒಳಚರಂಡಿ, ಜಿಲ್ಲಾ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಮುಗಿಯಬೇಕಿತ್ತು. ಆದರೆ, ಕೆಲವು ಅನಿರೀಕ್ಷಿತ ಸಮಸ್ಯೆಗಳು ಎದುರಾದ ಕಾರಣ ವಿಳಂಬವಾಗಿವೆ. ಈ ಕಾಮಗಾರಿಗಳು ಬಹುಕೋಟಿ ವೆಚ್ಚದ್ದಾಗಿದ್ದರಿಂದ ಮುಗಿಸಲು ಕಾಲಾವಕಾಶ ನೀಡಬೇಕಿರುವುದು ಅನಿವಾರ್ಯ ಎಂದು ಹೇಳಿದರು.
ಜಿಲ್ಲೆಯ ಶಾಸಕರಿಬ್ಬರು ನಿರಂತರವಾಗಿ ವಿದ್ಯುತ್‌ಗಾಗಿ ಪಾದಯಾತ್ರೆ ನಡೆಸಿದ್ದರು. ಆ ವೇಳೆ 12 ಗಂಟೆ ವಿದ್ಯುತ್ ಪೂರೈಸಲಾಗುವುದು ಎಂದು ತಿಳಿಸಲಾಗಿತ್ತು. ಅದೇ ರೀತಿ ವಿದ್ಯುತ್ ನೀಡಲಾಗುತ್ತಿದೆ. ಜಿಪಂ ಅಧಿಕಾರಿಗಳು ಜನವರಿ ಅಂತ್ಯಕ್ಕೆ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಗಳ ಸಮೀಕ್ಷಾ ವರದಿ ಸಿದ್ಧಪಡಿಸುವ ಸಾಧ್ಯತೆಗಳಿವೆ. ಅದನ್ನು ಆಧರಿಸಿ ಯೋಜನೆ ರೂಪಿಸಲಾಗುವುದು ಎಂದರು.
ಜಿಪಿಎಸ್ ಬೆಳೆ ಸಮೀಕ್ಷೆ ಕಾರ್ಯ ಶೇ.75ರಷ್ಟಾಗಿದೆ. ಗ್ರಾಪಂ ಸಿಬ್ಬಂದಿಗೆ ಬೇರೆ ಬೇರೆ ಕೆಲಸ ವಹಿಸಿದ್ದರಿಂದ ಅದು ಬಾಕಿ ಉಳಿದಿದೆ. 2016 ಮತ್ತು 17ನೇ ಸಾಲಿನ ಹಿಂಗಾರು ಹಂಗಾಮು ಬೆಳೆಯ ಫಸಲ್ ಬಿಮಾ ಯೋಜನೆಯಡಿ ವಿಮೆ ಕಂತು ಕಟ್ಟಿದವರಿಗೆ ಪರಿಹಾರ ನೀಡಿಲ್ಲ. ಬೆಳೆ ಕಟಾವು ಪ್ರಯೋಗದ ಬಗ್ಗೆ ಕಂಪನಿಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಇದಕ್ಕಾಗಿ ವಿಮಾ ಕಂಪನಿಗಳನ್ನು ಮೂರು ಸಲ ಆಹ್ವಾನಿಸಿ ಸಭೆ ಏರ್ಪಡಿಸಲಾಗಿತ್ತು. ಆದರೆ, ಕಂಪನಿಗಳ ಪ್ರತಿನಿ ಧಿಗಳು ಭಾಗವಹಿಸಿಲ್ಲ. ಈ ಕುರಿತು ಸರ್ಕಾರಕ್ಕೆ ವರದಿ ನೀಡಲಾಗಿದೆ ಎಂದು ತಿಳಿಸಿದರು.
ಇದೇ ತಿಂಗಳು ತಾಲೂಕು ಉದ್ಘಾಟನೆ ನೂತನ ತಾಲೂಕುಗಳಾಗಿ ಘೋಷಣೆಯಾಗಿರುವ ಸಿರವಾರ, ಮಸ್ಕಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನವರಿಯಲ್ಲೇ ಅಧಿಕೃತವಾಗಿ ಉದ್ಘಾಟಿಸುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್ ತಿಳಿಸಿದರು.
ಈವರೆಗೆ ವೇಳಾಪಟ್ಟಿ ಬಿಡುಗಡೆ ಮಾಡಿಲ್ಲ. ತಾಲೂಕು ಕಚೇರಿ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು. ಪ್ರಮುಖವಾಗಿ ನೀರಾವರಿ ಇಲಾಖೆಗೆ ಸಂಬಂಧಿಸಿದ ಕಟ್ಟಡಗಳು ಹೆಚ್ಚಾಗಿ ಕಂಡುಬಂದಿವೆ. ಹೀಗಾಗಿ ಅವುಗಳಲ್ಲಿ ಕಚೇರಿ ತೆರೆಯಲು ಕರ್ನಾಟಕ ನೀರಾವರಿ ನಿಗಮಕ್ಕೆ ಪತ್ರ ಬರೆಯಲಾಗಿದೆ. ಸದ್ಯಕ್ಕೆ ಆಯಾ ಹಳೇ ತಾಲೂಕು ಅಧಿಕಾರಿಗಳಿಗೆ ಪ್ರಭಾರ ಜವಾಬ್ದಾರಿ ನೀಡಲಾಗುವುದು. ಒಂದಿಷ್ಟು ಸಲಕರಣೆ ಖರೀದಿಸಿ ನೀಡಲಾಗುವುದು. ಮುಂದಿನ ದಿನಗಳಲ್ಲಿ ವಿವಿಧ ಇಲಾಖೆಗಳಿಗೆ ಕಾಯಂ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಕಳುಹಿಸು ಪ್ರಕ್ರಿಯೆ ನಡೆಸಲಾಗುವುದು ಎಂದು ತಿಳಿಸಿದರು.