ಛತ್ತೀಸ್ ಗಢ: ನಕ್ಸಲರನ್ನು ಮಟ್ಟಹಾಕಲು ಬರುತ್ತಿದ್ದಾರೆ ಮಹಿಳಾ ನಕ್ಸಲ್ ನಿಗ್ರಹ ಪಡೆಯ ಗಟ್ಟಿಗಿತ್ತಿಯರು. ನಕ್ಸಲರ ಅಟ್ಟಹಾಸ ಹೆಚ್ಚಾಗಿರುವ ಛತ್ತೀಸ್ ಗಢದ ಬಸ್ತಾರ್ ಮತ್ತು ದಾಂತೇವಾಡ ಪ್ರದೇಶಗಳಲ್ಲಿ 30 ಜನರ ಮಹಿಳಾ ನಕ್ಸಲ್ ನಿಗ್ರಹ ಪಡೆಯ ಯೋಧರನ್ನು ನಿಯೋಜಿಸಲಾಗಿದೆ. ಈ ತಂಡದ ಎಲ್ಲಾ ಸದಸ್ಯರೂ ಮಹಿಳೆಯರೇ ಆಗಿರುವುದು ವಿಶೇಷ.
‘ದಾಂತೇಶ್ವರೀ ಫೈಟರ್ಸ್’ ಎಂಬ ಹೆಸರಿನಲ್ಲಿ ಈ ಪಡೆಯನ್ನು ಗುರುತಿಸಲಾಗುತ್ತದೆ. ಈ 30 ಜನರ ಮಹಿಳಾ ಪಡೆಯನ್ನು ಡಿ.ಎಸ್.ಪಿ. ದಿನೇಶ್ವರೀ ನಂದ್ ಅವರು ಮುನ್ನಡೆಸಲಿದ್ದಾರೆ. ಛತ್ತೀಸ್ ಗಢ ಪೊಲೀಸರು ಇತ್ತೀಚೆಗಷ್ಟೇ ಜಿಲ್ಲಾ ಮೀಸಲು ಪಡೆಯಲ್ಲಿ ಮಹಿಳಾ ಕಮಾಂಡೋಗಳನ್ನು ನಿಯೋಜಿಸಿತ್ತು. ಇದೀಗ ನಕ್ಸಲರನ್ನು ಮಟ್ಟ ಹಾಕಲೂ ಮಹಿಳಾ ಪಡೆಗಳನ್ನು ಬಳಸಿಕೊಳ್ಳುತ್ತಿರುವುದು ದೇಶದಲ್ಲೇ ಪ್ರಥಮ ಪ್ರಯತ್ನವಾಗಿದೆ.
ದಾಂತೇಶ್ವರೀ ಫೈಟರ್ಸ್ ಮತ್ತು ಪೊಲೀಸ್ ಪಡೆಗಳು ಈಗಾಗಲೇ ಗೊಂಡಾರಣ್ಯದಲ್ಲಿ ಕಠಿಣ ತರಬೇತಿಯನ್ನು ಪಡೆದುಕೊಂಡಿವೆ. ಈ ಮೂಲಕ ನಕ್ಸಲರ ಉಪಟಳ ಹೆಚ್ಚಾಗಿರುವ ಛತ್ತೀಸ್ ಗಢದ ದಾಂತೇವಾಡ ಮತ್ತು ಬಸ್ತರ್ ಜಿಲ್ಲೆಗಳಲ್ಲಿ ಈ ಕೆಂಪು ಉಗ್ರರ ಅಟ್ಟಹಾಸವನ್ನು ಮಟ್ಟಹಾಕಲು ಪಡೆಗಳು ಸರ್ವಸನ್ನದ್ಧವಾಗಿವೆ.
ಒಂದು ವರ್ಷದ ಹಿಂದೆ ಕೇಂದ್ರ ಮೀಸಲು ಪೊಲೀಸ್ ಪಡೆಯು ಬಸ್ತಾರ್ ಪ್ರದೇಶದಲ್ಲಿ ಯುವಕ-ಯುವತಿಯರನ್ನು ಒಳಗೊಂಡ ತಂಡವೊಂದನ್ನು ರಚಿಸಿತ್ತು. ಈ ತಂಡವು ಗ್ರಾಮೀಣ ಭಾಗಗಳಲ್ಲಿ ಮತ್ತು ಅರಣ್ಯ ಪ್ರದೇಶಗಳಲ್ಲಿ ನಕ್ಸಲರ ಚಲನವಲವಲನಗಳ ಮಾಹಿತಿಯನ್ನು ನಕ್ಸಲ್ ನಿಗ್ರಹ ಪಡೆಗಳಿಗೆ ನೀಡುವಲ್ಲಿ ತರಬೇತಿಯನ್ನು ನೀಡಲಾಗಿತ್ತು. ಈ ಯುವ ಪಡೆಗೆ ಬಸ್ತಾರಿಯಾ ಬೆಟಾಲಿಯನ್’ ಎಂದು ಹೆಸರಿಡಲಾಗಿದೆ.
ಇದೀಗ ರೂಪುಗೊಂಡಿರುವ ‘ದಾಂತೇಶ್ವರೀ ಫೈಟರ್ಸ್’ನಲ್ಲಿರುವ 30 ಜನರನ್ನು ಬಸ್ತಾರಿಯಾ ಬೆಟಾಲಿಯನ್ ನಿಂದಲೇ ಆರಿಸಿಕೊಂಡಿರುವುದು ಇನ್ನೊಂದು ವಿಶೇಷ.