ಬೆಂಗಳೂರು: ಹೈಕೋರ್ಟ್ ಆದೇಶದಂತೆ ಸೆ.24ರೊಳಗೆ ನಗರದ ಪ್ರಮುಖ ರಸ್ತೆಗಳಲ್ಲಿ ಎಲ್ಲ ಗುಂಡಿಗಳನ್ನು ಮುಚ್ಚಲಾಗುವುದು ಎಂದು ಮೇಯರ್ ಆರ್.ಸಂಪತ್‌ರಾಜ್ ತಿಳಿಸಿದ್ದಾರೆ.
ಎಂ.ಜಿ.ರಸ್ತೆ ಹಾಗೂ ಮಾರ್ಗೋಸಾ ರಸ್ತೆಗಳಲ್ಲಿ ಶುಕ್ರವಾರ ನಡೆಯುತ್ತಿದ್ದ ರಸ್ತೆ ಗುಂಡಿ ಮುಚ್ಚುವ ಕಾರ್ಯ ಪರಿಶೀಲಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಪಾಲಿಕೆ ಅಧಿಕಾರಿಗಳು ಹಗಲು ರಾತ್ರಿ ಗುಂಡಿ ಮುಚ್ಚುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.
ಹೈಕೋರ್ಟ್ ಆದೇಶದಂತೆ ಸೋಮವಾರದೊಳಗೆ ನಗರದಲ್ಲಿನ ಒಂದೇ ಒಂದು ಗುಂಡಿ ಇಲ್ಲದಂತೆ ಮಾಡುತ್ತೇವೆ ಎಂದು ಹೇಳಿದರು. ನ್ಯಾಯಾಲಯದ ಆದೇಶ ನೀಡಿರುವ ಅವಧಿಯೊಳಗೆ ಗುಂಡಿ ಮುಚ್ಚಬೇಕಿದ್ದರೂ, ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ.
ಪಾಲಿಕೆಯಿಂದ ನಡೆಸಲಾಗುತ್ತಿರುವ ರಸ್ತೆಗುಂಡಿ ಕಾಮಗಾರಿಯನ್ನು ಯಾರು ಬೇಕಾದರೂ ಪರಿಶೀಲನೆ ನಡೆಸಬಹುದಾಗಿದೆ. ಇನ್ನು ನಗರದಲ್ಲಿ ಎಷ್ಟು ಗುಂಡಿಗಳಿವೆ, ಎಷ್ಟು ಗುಂಡಿಗಳನ್ನು ಭರ್ತಿ ಮಾಡಲಾಗಿದೆ ಎಂಬ ಮಾಹಿತಿಯನ್ನು ಪಾಲಿಕೆಯ ವೆಬ್‌ಸೈಟ್‌ನಲ್ಲಿ ನಿತ್ಯ ಅಪ್‌ಲೋಡ್ ಮಾಡಲಾಗುವುದು. ಇದರೊಂದಿಗೆ ಮಳೆ ಬಂದರೂ ಗುಂಡಿ ಮುಚ್ಚಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಗುಂಡಿ ಮುಚ್ಚಿಸಲು ಅವರ್ಯಾರು?: ಮೇಯರ್ ತಮ್ಮ ವಾರ್ಡ್‌ಗೆ ಭೇಟಿ ನೀಡುತ್ತಿರುವ ಮಾಹಿತಿಯನ್ನು ಅಧಿಕಾರಿಗಳು ತಮಗೆ ನೀಡಿಲ್ಲವೆಂದು ಜೀವನ್ ಭೀಮಾನಗರ ವಾರ್ಡ್ ಪಾಲಿಕೆ ಸದಸ್ಯ ಕೆ.ವೀಣಾ ಕುಮಾರಿ ಹಾಗೂ ಅವರ ಪತಿ ರಾಮಕೃಷ್ಣ ದೂರು ನೀಡಿದರು.
ಅಧಿಕಾರಿಗಳು ಹಾಗೂ ದೊಮ್ಮಲೂರು ಪಾಲಿಕೆ ಸದಸ್ಯ ಲಕ್ಷ್ಮೀನಾರಾಯಣ ವಿರುದ್ಧ ಗರಂ ಆದ ವೀಣಾ ಕುಮಾರಿ ಅವರು, ನಮ್ಮ ವಾರ್ಡ್‌ನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿಸಲು ಅವರ್ಯಾರು ಎಂದು ತರಾಟೆಗೆ ತೆಗೆದುಕೊಂಡರು. ಈ ವೇಳೆ ಮಧ್ಯಪ್ರವೇಶಿಸಿದ ಮೇಯರ್ ಅವರಿಗೆ ಸಮಾಧಾನ ಮಾಡಿ¨ರು.