Advertisement

ಅಮೆರಿಕದಲ್ಲಿ ಭಾರತೀಯ ಕುಟುಂಬದ ಎಲ್ಲ ನಾಲ್ವರ ಸಾವು: ಸುಶ್ಮಾ

04:23 PM Apr 17, 2018 | udayavani editorial |

ಹೊಸದಿಲ್ಲಿ : ಅಮೆರಿಕದಲ್ಲಿ ಒರೆಗಾನ್‌ನಿಂದ ಕ್ಯಾಲಿಫೋರ್ನಿಯಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ನಾಪತ್ತೆಯಾಗಿದ್ದ ಭಾರತೀಯ ಕುಟುಂಬವೊಂದರ ಎಲ್ಲ ನಾಲ್ವರು ಮೃತಪಟ್ಟಿರುವುದನ್ನು ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್‌ ದೃಢಪಡಿಸಿದ್ದಾರೆ.

Advertisement

ಗುಜರಾತ್‌ನ ಸೂರತ್‌ ಮೂಲದ ಸಂದೀಪ್‌ ತೊಟ್ಟಪಿಳ್ಳಿ  ಮತ್ತು ಅವರ ಕುಟುಂಬದವರ ಸಾವಿಗೆ ಸುಶ್ಮಾ ಅವರು ಟ್ವಿಟರ್‌ ನಲ್ಲಿ ತೀವ್ರ ಶೋಕ, ಆಘಾತ ವ್ಯಕ್ತಪಡಿಸಿದ್ದಾರೆ.

ಕ್ಯಾಲಿಫೋರ್ನಿಯದ ಈಲ್‌ ನದಿಯಲ್ಲಿ  ಪತ್ತೆಯಾಗಿದ್ದ  ಸಂದೀಪ್‌ ಕುಟುಂಬದ ಎಲ್ಲ ನಾಲ್ವರ ಶವಗಳನ್ನು ಮೇಲಕ್ಕೆತ್ತಲಾಗಿದ್ದು ಸರಕಾರ ಇವರ ಕುಟುಂಬ ಸದಸ್ಯರಿಗೆ ಅಮೆರಿಕಕ್ಕೆ ಪ್ರಯಾಣಿಸಲು ವೀಸಾ ದೊರಕಿಸಿಕೊಡಲು ನೆರವಾಗುತ್ತಿದೆ ಎಂದು ತಿಳಿಸಿದ್ದಾರೆ. 

ಕ್ಯಾಲಿಫೋರ್ನಿಯದ ಈಲ್‌ ನದಿಯಲ್ಲಿ ಕಾರು ಮುಳುಗಿ ಮೃತಪಟ್ಟವರೆಂದರೆ ಸಂದೀಪ್‌ ತೊಟ್ಟಪಿಳ್ಳಿ, ಅವರ ಪತ್ನಿ ಸೌಮ್ಯಾ, ಮತ್ತು ಇಬ್ಬರು ಮಕ್ಕಳಾದ, 9ರ ಹರೆಯದ ಪುತ್ರಿ ಸಾಚಿ ಮತ್ತು ಪುತ್ರ ಸಿದ್ಧಾಂತ್‌.

Advertisement

ಈಲ್‌ ನದಿಯಲ್ಲಿ ಮುಳುಗಿದ ಕಾರಿನಲ್ಲಿ ಸಂದೀಪ್‌ ಮತ್ತು ಪುತ್ರಿ ಸಾಚಿ ಅವರ ಶವಗಳು ಪತ್ತೆಯಾಗುವುದಕ್ಕೆ ಎರಡು ದಿನಗಳ ಹಿಂದೆ ಸಂದೀಪ್‌ ಪತ್ನಿ ಸೌಮ್ಯಾ ಅವರ ಶವ ಪತ್ತೆಯಾಗಿತ್ತು. ಆದರೆ ಪುತ್ರ ಸಿದ್ಧಾಂತ್‌ ನ ಸುಳಿವು ಸಿಕ್ಕಿರಲಿಲ್ಲ. ಅನಂತರ ಆತನ ಶವವೂ ಪತ್ತೆಯಾಯಿತು. 

ಸಂದೀಪ್‌ ತೊಟ್ಟಪಿಳ್ಳಿ ಅವರು ಸ್ಯಾನ್‌ ಓಸೇಯಲ್ಲಿನ ತಮ್ಮ ಸ್ನೇಹಿತನನ್ನು ಭೇಟಿಯಾಗಲು ಎ.6ರಂದು ಬರುವವರಿದ್ದರು. ಎ.5ರ ತನಕ ಸಂದೀಪ್‌ ಸಂಪರ್ಕದಲ್ಲಿದ್ದರು. ಎ.6ರಂದು ಅವರು ಸ್ಯಾನ್‌ ಓಸೆ ತಲುಪಲಿಲ್ಲ ಎಂದು ಇಲ್ಲಿನ ಪೊಲೀಸರು ಹೇಳಿದ್ದಾರೆ. ಸಂದೀಪ್‌ ಅವರು ಕಳೆದ ಹದಿನೈದು ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next